ಸಂಕ್ರಾಂತಿಯಿಂದ ಇಂದಿರಾ ಕ್ಯಾಂಟೀನಲ್ಲಿ ಮಧ್ಯಾಹ್ನ, ರಾತ್ರಿ ಮುದ್ದೆ ಊಟ!

By Kannadaprabha NewsFirst Published Dec 8, 2023, 5:00 AM IST
Highlights

ಸುಗ್ಗಿ ಸಂಕ್ರಾಂತಿ ವೇಳೆಗೆ ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ ಭಾಗ್ಯ ಸಿಗಲಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಡಿ.8) :  ಸುಗ್ಗಿ ಸಂಕ್ರಾಂತಿ ವೇಳೆಗೆ ರಾಜಧಾನಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ ಭಾಗ್ಯ ಸಿಗಲಿದೆ.

Latest Videos

ಬೆಂಗಳೂರಿನಲ್ಲಿ 2017ರಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಯಿತು. ಆರಂಭದಿಂದಲೂ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ, ಚಪ್ಪಾತಿ ನೀಡುವುದಕ್ಕೆ ಬೇಡಿಕೆ ಕೇಳಿ ಬರುತ್ತಿತ್ತು. ಇದೀಗ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಮಾಡುವವರಿಗೆ ಮುದ್ದೆ ಭಾಗ್ಯ ನೀಡುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಲಾಗುತ್ತಿದೆ. ಸಂಕ್ರಾಂತಿ ವೇಳೆಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ ದೊರೆಯುವ ಸಾಧ್ಯತೆ ಇದೆ.

ಇಂದಿರಾ ಕ್ಯಾಂಟೀನ್ ಟಾಯ್ಲೆಟ್‌ಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿ: ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ

ಈವರೆಗೆ ಮಧ್ಯಾಹ್ನ ಮತ್ತು ರಾತ್ರಿ ಕೇವಲ ರೈಸ್‌ ಬಾತ್‌ ಅಥವಾ ಅನ್ನ, ಸಾಂಬರ್‌, ಮೊಸರನ್ನ ಮಾತ್ರ ವಿತರಣೆ ಮಾಡಲಾಗುತ್ತಿತ್ತು. ಹಿರಿಯ ನಾಗರಿಕರು, ಸಕ್ಕರೆ ಕಾಯಿಲೆ ಇರುವವರು ಸೇರಿದಂತೆ ಮೊದಲಾದವರು ಕೇವಲ ರೈಸ್‌ ಪದಾರ್ಥದ ಊಟ ಬೇಡ, ಮುದ್ದೆ, ಚಪ್ಪಾತಿ ನೀಡುವಂತೆ ಕೇಳುತ್ತಿದ್ದರು. ಈ ವಿಚಾರ ಸರ್ಕಾರ ಮತ್ತು ಬಿಬಿಎಂಪಿ ಗಮನಕ್ಕೆ ಬಂದಿತ್ತು. ಹಾಗಾಗಿ, ಹೊಸ ವರ್ಷದಿಂದ ಇಂದಿರಾ ಕ್ಯಾಂಟೀನ್‌ ನಲ್ಲಿ ಕಡ್ಡಾಯವಾಗಿ ಮುದ್ದೆ ಪೂರೈಕೆಗೆ ತೀರ್ಮಾನಿಸಲಾಗಿದೆ.

ಮುದ್ದೆಯಿಂದ ಹೊಸ ಕಳೆ:

ಸಮರ್ಪಕ ನಿರ್ವಹಣೆ ಕೊರತೆ, ಕಳಪೆ ಆಹಾರ ಪೂರೈಕೆ ಸೇರಿದಂತೆ ಮೊದಲಾದ ಕಾರಣದಿಂದ ಇಂದಿರಾ ಕ್ಯಾಂಟೀನ್‌ಗಳು ತಮ್ಮ ಕಳೆ ಕಳೆದುಕೊಂಡಿದ್ದವು. ಗ್ರಾಹಕರ ಸಂಖ್ಯೆಯಲ್ಲಿಯೂ ಇಳಿಕೆಯಾಗಿತ್ತು. ಇದೀಗ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಇದರಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮತ್ತೆ ಗ್ರಾಹಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಜತೆಗೆ, ಹಳೇ ಗತವೈಭವಕ್ಕೆ ಮರಳುವ ಸಾಧ್ಯತೆ ದಟ್ಟವಾಗಿದೆ.

ಹೊಸ ಟೆಂಡರ್‌ಗೆ ಸರ್ಕಾರದ ಒಪ್ಪಿಗೆ

ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆದಾರರ ಟೆಂಡರ್‌ ಆಹ್ವಾನಿಸುವುದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಸದ್ಯದಲ್ಲಿ ಬಿಬಿಎಂಪಿ ಟೆಂಡರ್‌ ಆಹ್ವಾನಿಸಲಿದೆ. ಒಂದು ತಿಂಗಳಿನಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಟೆಂಡರ್‌ ಷರತ್ತಿನಲ್ಲಿ ಗುತ್ತಿಗೆದಾರರಿಗೆ ಕಡ್ಡಾಯವಾಗಿ ಮುದ್ದೆ ಪೂರೈಕೆ ಮಾಡಬೇಕು. ಉಪಹಾರಕ್ಕೆ ಎರಡೆರಡು ಆಯ್ಕೆ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಷರತ್ತು ಒಪ್ಪಿಕೊಂಡವರಿಗೆ ಮಾತ್ರ ಗುತ್ತಿಗೆ ನೀಡಲು ಬಿಬಿಎಂಪಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಇನ್ನು ವಲಯವಾರು ಟೆಂಡರ್‌ ಪ್ರಕ್ರಿಯೆ ನಡೆಸಬೇಕೆಂದು ಬಿಬಿಎಂಪಿ ಈ ಹಿಂದೆ ನಿರ್ಧರಿಸಿತ್ತು. ಕೆಲವು ವಲಯದಲ್ಲಿ ಇಂದಿರಾ ಕ್ಯಾಂಟೀನ್‌ ಸಂಖ್ಯೆ ತೀರಾ ಕಡಿಮೆ ಇರುವ ಹಿನ್ನೆಲೆಯಲ್ಲಿ ವಲಯವಾರು ಟೆಂಡರ್ ಬೇಡ. ಕಡಿಮೆ ಕ್ಯಾಂಟೀನ್‌ ಇರುವ ಎರಡ್ಮೂರು ವಲಯ ಸೇರಿ ಟೆಂಡರ್ ಆಹ್ವಾನಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದರಿಂದ ಆಹಾರ ಪೂರೈಕೆದಾರರಿಗೂ ಅನುಕೂಲವಾಗಲಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ.

ಅಕ್ರಮ ತಡೆಗೆ ಡಿಜಿಟಲಿಕರಣ

ಇಂದಿರಾ ಕ್ಯಾಂಟೀನ್‌ ಗ್ರಾಹಕರ ಸಂಖ್ಯೆಯಲ್ಲಿ ಗೋಲ್‌ ಮಾಲ್‌ ಮಾಡಲಾಗುತ್ತಿದೆ. ಸುಳ್ಳು ಲೆಕ್ಕ ನೀಡಿ ರಿಯಾಯಿತಿ ಹಣ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಪ್ರತಿಯೊಂದನ್ನು ಡಿಜಿಟಲಿಕರಣದ ಮೂಲಕ ಪಾರದರ್ಶಕ ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ.

ನಗರದ ಯಾವುದೇ ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕ ತೆರಳಿ ಊಟ ಅಥವಾ ಉಪಹಾರದ ಕೋಪನ್ ಪಡೆದರೆ ಆ ಮಾಹಿತಿ ಕೇಂದ್ರ ಕಚೇರಿಗೆ ತಲುಪುವಂತೆ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಇನ್ನು ಸ್ವಚ್ಛತೆ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಪ್ರತ್ಯೇಕವಾಗಿ ಆ್ಯಪ್‌ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ವಾರದಲ್ಲಿ 19 ಮೊಬೈಲ್‌ ಕ್ಯಾಂಟೀನ್‌ ಆರಂಭ

ನಗರದಲ್ಲಿ ಸ್ಥಿರ ಕಟ್ಟಡ ನಿರ್ಮಾಣಕ್ಕೆ ಜಾಗದ ದೊರೆಯದ ಕಡೆ ಕಾರ್ಯಾಚರಣೆ ನಡೆಸುವುದಕ್ಕೆ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿತ್ತು. ಆ ಪೈಕಿ 19 ಮೊಬೈಲ್‌ ಇಂದಿರಾ ಕ್ಯಾಂಟೀನ್‌ ವಾಹನ ಕೆಟ್ಟು ನಿಂತುಕೊಂಡಿದ್ದವು. ಇದೀಗ ಆ ಮೊಬೈಲ್‌ ಕ್ಯಾಂಟೀನ್‌ಗಳನ್ನು ದುರಸ್ತಿ ಪಡಿಸಲಾಗಿದೆ. ಇನ್ನೊಂದು ವಾರದಲ್ಲಿ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ಪುನರ್‌ ಆರಂಭಗೊಳ್ಳಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಪಾಳು ಬಿದ್ದ ಇಂದಿರಾ ಕ್ಯಾಂಟಿನ್ : ತೆರಿಗೆ ಹಣ ಯಾರ ಸ್ವತ್ತು?

ಮುಖ್ಯಾಂಶಗಳು

*ನಗರದಲ್ಲಿ 169 ಸ್ಥಿರ ಇಂದಿರಾ ಕ್ಯಾಂಟೀನ್‌ ನಡೆಯುತ್ತಿವೆ.

*5 ಮೊಬೈಲ್‌ ಕ್ಯಾಂಟೀನ್‌ ನಡೆಯುತ್ತಿವೆ.

*ಇನ್ನೊಂದು ವಾರದಲ್ಲಿ 19 ಮೊಬೈಲ್‌ ಕ್ಯಾಂಟೀನ್‌ ಕಾರ್ಯಾರಂಭ.

click me!