ಪ್ರತಿಪಕ್ಷ ನಾಯಕನ ವಿರುದ್ಧ ಬಿಜೆಪಿ ಶಾಸಕರೇ ಗರಂ! ಅಶೋಕ್‌ ಕಂಡು ಎಸ್ ಆರ್ ವಿಶ್ವನಾಥ ‘ಅಡ್ಜಸ್ಟ್‌ಮೆಂಟ್‌ ಗಿರಾಕಿ’ ಅಂದಿದ್ದೇಕೆ?

By Kannadaprabha News  |  First Published Dec 8, 2023, 4:39 AM IST

ಬೆಳಗಾವಿ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್‌ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಉತ್ತರ ವಿರೋಧಿಸಿ ನಡೆಸಿದ ಸಭಾತ್ಯಾಗ ಪ್ರತಿಪಕ್ಷ ಬಿಜೆಪಿಯಲ್ಲಿಯೇ ಗೊಂದಲ, ಅಸಮಾಧಾನಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ನಾಯಕ ಆರ್‌.ಅಶೋಕ್ ವಿರುದ್ಧವೇ ಸ್ವಪಕ್ಷೀಯರು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.


ಸುವರ್ಣವಿಧಾನಸೌಧ (ಡಿ.8) : ಬೆಳಗಾವಿ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್‌ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಉತ್ತರ ವಿರೋಧಿಸಿ ನಡೆಸಿದ ಸಭಾತ್ಯಾಗ ಪ್ರತಿಪಕ್ಷ ಬಿಜೆಪಿಯಲ್ಲಿಯೇ ಗೊಂದಲ, ಅಸಮಾಧಾನಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ನಾಯಕ ಆರ್‌.ಅಶೋಕ್ ವಿರುದ್ಧವೇ ಸ್ವಪಕ್ಷೀಯರು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಪೃಥ್ವಿಸಿಂಗ್‌ ಮತ್ತು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಬೆಳಗಾವಿ ಬಿಜೆಪಿ ಮುಖಂಡ ಅಭಿಜಿತ್ ಜವಳ್ಕರ್ ಪ್ರಕರಣ ಸಂಬಂಧ ಧರಣಿ ನಡೆಸಲು ಬಿ.ವೈ.ವಿಜಯೇಂದ್ರ ಮತ್ತಿತರ ಸದಸ್ಯರು ತೀರ್ಮಾನಿಸಿದ್ದರು. ಅಷ್ಟರಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಏಕಾಏಕಿ ಸಭಾತ್ಯಾಗ ಎಂದು ಪ್ರಕಟಿಸಿ ಸದನದಿಂದ ಹೊರ ನಡೆದರು. ಪರಿಣಾಮ ಪಕ್ಷದವರಲ್ಲಿಯೇ ಗೊಂದಲ ಉಂಟಾಯಿತು. ನಂತರ ಅನಿವಾರ್ಯವಾಗಿ ವಿಜಯೇಂದ್ರ ಮತ್ತಿತರರು ಸಹ ಸದನದಿಂದ ಹೊರ ನಡೆದರು.

Latest Videos

undefined

ಪ್ರಿಯಾಂಕ್ ಬದಲು ಪ್ರಿಯಾಂಕಾ ಎಂದ ಆರ್ ಆಶೋಕ್ ಎಡವಟ್ಟು; ನಾನು ಪ್ರಿಯಾಂಕ್ ಎಂದ ಖರ್ಗೆ

ಈ ನಡುವೆ, ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌ ಮತ್ತು ಅಭಯ್ ಪಾಟೀಲ್‌ ಇಬ್ಬರು ಅಶೋಕ್‌ ನಡೆಗೆ ಕಿಡಿಕಾರಿದರು. ಎಸ್‌.ಆರ್‌.ವಿಶ್ವನಾಥ್‌ ಅವರಂತೂ ಅಶೋಕ್‌ ಅವರನ್ನು ‘ಅಡ್ಜಸ್ಟ್‌ಮೆಂಟ್‌ ಗಿರಾಕಿ’ ಎಂದು ಬೈಯ್ದುಕೊಂಡು, ಸದನಕ್ಕೆ ಆಗಮಿಸುವುದೇ ಇಲ್ಲ ಎಂದು ಕೋಪದಿಂದ ತೆರಳಿದರು. ಅಭಯ್‌ ಪಾಟೀಲ್‌, ಧರಣಿ ನಡೆಸುವ ಬದಲು ಸಭಾತ್ಯಾಗ ಮಾಡುವ ತೀರ್ಮಾನ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಉತ್ತರವನ್ನು ವಿರೋಧಿಸಿ ಧರಣಿ ಅಥವಾ ಸಭಾತ್ಯಾಗ ನಡೆಸುವ ಕುರಿತು ಸದನದಲ್ಲಿಯೇ ವಿಜಯೇಂದ್ರ, ಸುರೇಶ್‌ ಕುಮಾರ್‌, ಸುನೀಲ್‌ ಕುಮಾರ್‌ ಅವರು ಅಶೋಕ್‌ ಬಳಿ ಬಂದು ಚರ್ಚಿಸಿದರು. ಅಶೋಕ್‌ ಬಳಿಕ ಚರ್ಚಿಸಿದ ನಂತರ ಮತ್ತೊಮ್ಮೆ ಎಸ್‌.ಆರ್‌.ವಿಶ್ವನಾಥ್‌, ಬಸನಗೌಡ ಪಾಟೀಲ್‌ ಯತ್ನಾಳ್‌ ಸೇರಿದಂತೆ ಇತರೆ ನಾಯಕರು ಮಾತುಕತೆ ನಡೆಸಿದರು. ಆದರೆ, ಈ ವೇಳೆ ಅಶೋಕ್‌ ಬಳಿ ಯಾರೂ ಮಾತುಕತೆ ನಡೆಸಲಿಲ್ಲ. ಇದು ಪಕ್ಷದ ಸದಸ್ಯರಲ್ಲಿಯೇ ಒಮ್ಮತ ಮೂಡಲು ಸಾಧ್ಯವಾಗಲಿಲ್ಲ. ಪರಿಣಾಮ ಅಶೋಕ್‌ ಅವರು ಏಕಾಏಕಿ ಸಭಾತ್ಯಾಗ ಘೋಷಣೆ ಮಾಡಿದ್ದು ಇತರೆ ನಾಯಕರಲ್ಲಿ ಆಶ್ಚರ್ಯವನ್ನುಂಟು ಮಾಡಿತು.

ಸದನದಿಂದ ಹೊರಗೆ ಬರುತ್ತಿದ್ದಂತೆ ಮೊಗಸಾಲೆಯಲ್ಲಿ ಹಲವು ನಾಯಕರು ಅಶೋಕ್‌ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಕೋಪದಿಂದಲೇ ಹೊರಬಂದ ಎಸ್‌.ಆರ್‌.ವಿಶ್ವನಾಥ್‌, ಧರಣಿ ಮಾಡಬೇಕಲ್ಲವೇ. ಧರಣಿ ಮಾಡುವ ಕುರಿತು ಮಾತುಕತೆ ನಡೆಸಲಾಗಿತ್ತು ಎಂದು ಕಿಡಿಕಾರಿದರು. ಆದರೆ ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಂಡ ಅಶೋಕ್‌, ಸಭಾತ್ಯಾಗಕ್ಕೆ ತೀರ್ಮಾನ ಮಾಡಿದ್ದೇವೆ ಎಂದರು. ಆಗಲೂ ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ಮುಸ್ಲಿಂ ಓಲೈಕೆ ರಾಜಕಾರಣ ಹೊಸದಲ್ಲ: ಆರ್‌.ಅಶೋಕ್‌

ಇನ್ನು, ಅಭಯಪಾಟೀಲ್‌ ಸಹ ಕೋಪಗೊಂಡು, ಬಾವಿಗಿಳಿದು ಧರಣಿ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಸಭಾತ್ಯಾಗ ಮಾಡಲಾಯಿತು. ಇನ್ನು ಮುಂದೆ ಶಾಸಕಾಂಗ ಸಭೆಗೆ ಬರುವುದಿಲ್ಲ. ಇವರಿಂದ ನಾನು ರಾಜಕೀಯಕ್ಕೆ ಬಂದಿಲ್ಲ. ರಾಜಕಾರಣ ಮಾಡುವುದು ನನಗೆ ಗೊತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಭಯ್‌ ಪಾಟೀಲ್‌ ಅವರನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಮಾಧಾನ ಮಾಡಲು ಪ್ರಯತ್ನಿಸಿದರು. ‘ನಾನು ನಿನ್ನೊಂದಿಗೆ ಇದ್ದೇನೆ. ನಾನು ನಿನ್ನ ಜತೆ ಇದ್ದೇನೆ ಬಾ’ ಎಂದರು.

ಆದರೂ ಅಭಯ್‌ ಪಾಟೀಲ್‌, ನನಗೆ ಈ ರಾಜಕಾರಣವೇ ಬೇಕಿಲ್ಲ ಎಂದು ಹೇಳಿ ಕೋಪದಲ್ಲಿಯೇ ಅಲ್ಲಿಂದ ತೆರಳಿದರು.

click me!