ಮುಂದಿನ ಮೂರು ವರ್ಷಗಳ ಅವಧಿಯ ಒಳಗೆ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯೊಂದಿಗೆ ಸುಧಾರಣೆ ತರಲಾಗುವುದು. ಈ ಮೂಲಕ ಸರ್ಕಾರಿ ಶಾಲೆಯಲ್ಲಿಯೇ ನಮ್ಮ ಮಕ್ಕಳು ಕಲಿಯಬೇಕು ಎನ್ನುವ ಮನಸ್ಥಿತಿ ಬರುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೊರಬ (ಜ.24): ಮುಂದಿನ ಮೂರು ವರ್ಷಗಳ ಅವಧಿಯ ಒಳಗೆ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯೊಂದಿಗೆ ಸುಧಾರಣೆ ತರಲಾಗುವುದು. ಈ ಮೂಲಕ ಸರ್ಕಾರಿ ಶಾಲೆಯಲ್ಲಿಯೇ ನಮ್ಮ ಮಕ್ಕಳು ಕಲಿಯಬೇಕು ಎನ್ನುವ ಮನಸ್ಥಿತಿ ಬರುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ರಾತ್ರಿ ತಾಲೂಕಿನ ಹರೀಶಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 76 ಸಾವಿರ ಸರ್ಕಾರಿ ಶಾಲೆಗಳಿದ್ದು, 1.20 ಕೋಟಿ ಮಕ್ಕಳ ಹಾಜರಾತಿ ಇದೆ.
ಸಮುದ್ರದಂತಿರುವ ಶಿಕ್ಷಣ ಕ್ಷೇತ್ರದಲ್ಲಿ ಸಚಿವನಾಗಿ ಜವಾಬ್ದಾರಿ ಹೊತ್ತಿರುವುದು ನನ್ನ ಪುಣ್ಯದ ಕೆಲಸವಾಗಿದೆ. ಇದನ್ನು ನಾನು ಛಾಲೆಂಜಾಗಿ ತೆಗೆದುಕೊಂಡು ಪ್ರತಿ ಮನೆಯ ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಕಲಿಯುವಂತೆ ಮಾಡುವ ಶೈಕ್ಷಣಿಕ ಬದಲಾವಣೆ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು. ಒಂದು ಸರ್ಕಾರಿ ಶಾಲೆ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರೆ ಆ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದೇ ಅರ್ಥೈಸಿಕೊಳ್ಳಬಹುದು. ಇಂಥ ಶಾಲೆಯಲ್ಲಿ ಕಲಿತ ಮಕ್ಕಳು ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ.
ಗ್ರಾಮೀಣ ಸರ್ಕಾರಿ ಶಾಲೆಗಳ ಹಿರಿಮೆಯನ್ನು ಎತ್ತಿ ಹಿಡಿದು ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಗುರುವಂದನಾ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಸುಭಾಶ್ ಚಂದ್ರ ಸ್ಥಾನಿಕ್ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಅನಂತಕುಮಾರ ಹೆಗಡೆಗೆ ಟಿಕೆಟ್ ಕೊಡಲಿ...ನಾವೂ ಉಪಚಾರಕ್ಕೆ ಬರ್ತೀವಿ: ಸಚಿವ ಮಧು ಬಂಗಾರಪ್ಪ
ಎಸ್.ಡಿ.ಎಂ.ಸಿ. ಅಧ್ಯಕ್ಷ ಧನಂಜಯ ಜಿ. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಮೃತ ಮಹೋತ್ಸವ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಸುನೀಲ್ ಗೌಡ, ಜಿ.ಪಂ. ಮಾಜಿ ಸದಸ್ಯರಾದ ತಬಲಿ ಬಂಗಾರಪ್ಪ, ರಾಜೇಶ್ವರಿ, ತಾ.ಪಂ. ಮಾಜಿ ಅಧ್ಯಕ್ಷ ಹೆಚ್. ಗಣಪತಿ, ಸದಸ್ಯ ನಾಗರಾಜ ಚಂದ್ರಗುತ್ತಿ, ಗಾ.ಪಂ. ಅಧ್ಯಕ್ಷೆ ಅನಸೂಯಮ್ಮ, ಉಪಾಧ್ಯಕ್ಷ ರವಿಕುಮಾರ್, ಸದಸ್ಯರಾದ ಜಯಲಕ್ಷ್ಮೀ, ಮಂಜಮ್ಮ, ಸಾಕ್ಷಿ ಬಾಪಟ್, ವಜ್ರಕುಮಾರ್, ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸತ್ಯನಾರಾಯಣ, ಕ್ಷೇತ್ರ ಸಮನ್ವ ಯಾಧಿಕಾರಿ ದಯಾನಂದ ಕಲ್ಲೇರ್, ಬಿಆರ್‌ಪಿ ಪಿ.ಡಿ. ಮಂಜಪ್ಪ, ಮುಖ್ಯ ಶಿಕ್ಷಕ ವೆಂಕಟೇಶ ಎಂ. ಗಾವಡಿ, ಮುಖಂಡರಾದ ಕೆ.ವಿ. ಗೌಡ, ಉಮಾಪತಿ, ಪ್ರಶಾಂತ್ ನಾಯ್ಕ, ವಸುಂಧರ ಭಟ್, ಕೃಷ್ಣಪ್ಪ, ಟಿ.ಶಿವಣ್ಣ, ಚಂದ್ರಹಾಸ ನಾಯ್ಕ, ಸುಧಾಕರ ಮೊದಲಾದವರು ಹಾಜರಿದ್ದರು.