
ಗಿರೀಶ್ ಗರಗ
ಬೆಂಗಳೂರು(ಏ.04): ಲೋಕಸಭಾ ಚುನಾವಣೆ ಹಾಗೂ ಟೆಂಡರ್ ಪ್ರಕ್ರಿಯೆ ಆರಂಭಿಸುವಲ್ಲಿನ ವಿಳಂಬದಿಂದಾಗಿ ಕ್ಯೂಆರ್ ಕೋಡ್ ಆಧಾರಿತ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ವಾಹನ ನೋಂದಣಿ ಪ್ರಮಾಣ ಪತ್ರ (ಆರ್‌ಸಿ) ವಿತರಣೆ ಮತ್ತಷ್ಟು ವಿಳಂಬವಾಗುತ್ತಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ದೇಶನದಂತೆ ದೇಶದೆಲ್ಲೆಡೆ ಡಿಎಲ್ ಮತ್ತು ಆರ್‌ಸಿ ಸ್ವರೂಪ ಬದಲಿಸಲಾಗುತ್ತಿದೆ. ಅದರಂತೆ ರಾಜ್ಯದಲ್ಲಿ ಕಳೆದ ಫೆಬ್ರವರಿಯಲ್ಲಿಯೇ ವಿನೂತನ ರೀತಿಯ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿತ್ತು. ಆದರೆ, ಅದಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯಿಂದ ಯಾವುದೇ ಪ್ರಕ್ರಿಯೆಯನ್ನೂ ನಡೆಸಿರಲಿಲ್ಲ. ಅಲ್ಲದೆ, ಸ್ಮಾರ್ಟ್‌ಕಾರ್ಡ್ ಪೂರೈಕೆಗೆ ಸಂಬಂಧಿಸಿದಂತೆ ನಡೆಸಬೇಕಿರುವ ಟೆಂಡರ್ ಪ್ರಕ್ರಿಯೆಯ ದಾಖಲೆಗಳನ್ನು ಸಿದ್ಧಪಡಿಸಲು ಖಾಸಗಿ ಸಂಸ್ಥೆಯನ್ನು ನಿಗದಿ ಮಾಡಿಲ್ಲ. ಹೀಗಾಗಿಯೇ ಫೆಬ್ರವರಿಯಿಂದಲೇ ಆರಂಭವಾಗಬೇಕಿದ್ದ ಹೊಸಬಗೆಯ ಸ್ಮಾರ್ಟ್‌ಕಾರ್ಡ್ ವಿತರಣೆ ಕಾರ್ಯ ಇನ್ನೂ ನಾಲ್ಕೈದು ತಿಂಗಳು ಸಾಧ್ಯವಿಲ್ಲ ಎಂದು ಸ್ವತಃ ಸಾರಿಗೆ ಇಲಾಖೆ ಅಧಿಕಾರಿಗಳೇ ಹೇಳುತ್ತಿದ್ದಾರೆ.
ಅವಧಿ ಮುಗಿದ 30 ದಿನದಲ್ಲಿ ಡಿಎಲ್ ನವೀಕರಿಸಿ: ಹೈಕೋರ್ಟ್
15 ವರ್ಷಗಳ ನಂತರ ಸ್ವರೂಪ ಬದಲು:
ಪೇಪರ್ ಆರ್‌ಸಿ ಮತ್ತು ಡಿಎಲ್ ನೀಡಲಾಗುತ್ತಿದ್ದ ಸ್ಥಳದಲ್ಲಿ 2009ರಲ್ಲಿ ಸ್ಮಾರ್ಟ್‌ಕಾರ್ಡ್ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಅದಾದ ನಂತರ ಇದೀಗ 15 ವರ್ಷಗಳ ನಂತರ ಆರ್‌ಸಿ ಮತ್ತು ಡಿಎಲ್ ಸ್ವರೂಪ ಬದಲಿಸಲಾಗುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ನಿಯಮದಂತೆ ಡಿಎಲ್ ಮತ್ತು ಆರ್‌ಸಿಗಳ ಸ್ಮಾರ್ಟ್‌ಕಾರ್ಡ್‌ಗಳಲ್ಲಿ ಚಿಪ್‌ಗಳ ಜತೆಗೆ ಕ್ಯೂಆರ್ ಕೋಡ್‌ನ್ನು ಅಳವಡಿಸಲಾಗುತ್ತಿದೆ. ಡಿಎಲ್ ಮತ್ತು ಆರ್‌ಸಿ ಸ್ಮಾರ್ಟ್‌ಕಾರ್ಡ್‌ಗಳ ಮುಂಭಾಗ ಮತ್ತು ಹಿಂಭಾಗ ಒಂದೇ ವಿನ್ಯಾಸದೊಂದಿಗೆ ಮುದ್ರಿಸಲಾಗುತ್ತದೆ.
ಕ್ಯೂಆರ್ ಕೋಡ್‌ನಲ್ಲಿ ಸಂಪೂರ್ಣ ಮಾಹಿತಿ:
ನೂತನ ಸ್ವರೂಪದಲ್ಲಿ ಅಳವಡಿಸಲಾಗುವ ಕ್ಯೂಆರ್ ಕೋಡ್‌ನಲ್ಲಿ ಆರ್‌ಸಿ ಮತ್ತು ಡಿಎಲ್‌ನಲ್ಲಿ ಮಾಲೀಕರ ಸಂಪೂರ್ಣ ಮಾಹಿತಿಯಿರಲಿದೆ. ಪ್ರಮುಖರವಾಗಿ ಡಿಎಲ್‌ನ ಮುಂಭಾಗದಲ್ಲಿ ಕಾರ್ಡ್ ಹೊಂದಿರುವವರ ಹೆಸರು, ವಿಳಾಸ ಮತ್ತು ಭಾವಚಿತ್ರವನ್ನು ಮುದ್ರಿಸಲಾಗುತ್ತದೆ. ಅದೇ ಹಿಂಭಾಗ ಯಾವ ಪ್ರಕಾರದ ವಾಹನ ಚಾಲನೆ ಮಾಡಬಹುದು ಎಂಬುದು ಸೇರಿದಂತೆ ಇನ್ನಿತರ ಮಾಹಿತಿ ಇರಲಿದೆ. ಅಲ್ಲದೆ, ಸ್ಮಾರ್ಟ್‌ಕಾರ್ಡ್‌ನಲ್ಲಿ ಅಳವಡಿಸಲಾಗುವ ಕ್ಯೂಆರ್ ಕೋಡ್‌ನಲ್ಲಿ ಕಾರ್ಡ್ ಹೊಂದಿರುವವರ ಜನ್ಮದಿನಾಂಕ, ರಕ್ತದ ಗುಂಪು, ಪರ್ಯಾಯ ದೂರವಾಣಿ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿ ಇರಲಿದೆ. ಅಪಘಾತ ಸೇರಿದಂತೆ ಇನ್ನಿತರ ತುರ್ತು ಸಂದರ್ಭದಲ್ಲಿ ಕ್ಯೂಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿದರೆ ಕಾರ್ಡ್ ಹೊಂದಿರುವವರ ಮಾಹಿತಿಗಳೆಲ್ಲವೂ ಸಿಗುವಂತೆ ಮಾಡಲಾಗುತ್ತದೆ. ಅದೇ ರೀತಿ ಆರ್‌ಸಿಯಲ್ಲಿ ವಾಹನದ ಚಾಸ್ಸಿ, ಎಂಜಿನ್ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿಗಳಿರಲಿದೆ.
Smart Card ಕೊರತೆ: ಆರ್‌ಸಿ, ಡಿಎಲ್‌ಗೆ ಸವಾರರ ಪರದಾಟ!
4 ಕೋಟಿಗೂ ಹೆಚ್ಚಿನ ಸ್ಮಾರ್ಟ್‌ಕಾರ್ಡ್‌ಗಳು
ರಾಜ್ಯದಲ್ಲಿ ಸದ್ಯ 2 ಕೋಟಿಗೂ ಹೆಚ್ಚಿನ ಡಿಎಲ್ ಮತ್ತು 2 ಕೋಟಿಗೂ ಹೆಚ್ಚಿನ ಆರ್‌ಸಿ ವಿತರಿಸಲಾಗಿದೆ. ಅಲ್ಲದೆ, ಮಾಸಿಕ 4 ಸಾವಿರಕ್ಕೂ ಹೆಚ್ಚಿನ ಹೊಸ ಡಿಎಲ್ ಮತ್ತು 5 ಸಾವಿರಕ್ಕೂ ಹೆಚ್ಚಿನ ಹೊಸ ಆರ್‌ಸಿಯನ್ನು ವಿತರಿಸಲಾಗುತ್ತಿದೆ. ಹೊಸ ಸ್ವರೂಪದ ಆರ್‌ಸಿ ಮತ್ತು ಡಿಎಲ್‌ಗಳನ್ನು ಈಗಾಗಲೇ ಸ್ಮಾರ್ಟ್‌ಕಾರ್ಡ್ ಪಡೆದಿರುವವರಿಗೆ ನೀಡುವುದಿಲ್ಲ. ಬದಲಿಗೆ ಹೊಸದಾಗಿ ಡಿಎಲ್ ಮತ್ತು ಆರ್‌ಸಿ ಪಡೆಯುವವರಿಗೆ ಅದನ್ನು ನೀಡಲಾಗುತ್ತದೆ. ಒಂದು ವೇಳೆ ಈಗಾಗಲೆ ಸ್ಮಾರ್ಟ್‌ಕಾರ್ಡ್ ಪಡೆದಿರುವವರು ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ ಅದಕ್ಕೆ ತಗಲುವ ಶುಲ್ಕವನ್ನು ಪಡೆದು ಹೊಸಬಗೆಯ ಕಾರ್ಡ್‌ಗಳನ್ನು ಸಾರಿಗೆ ಇಲಾಖೆ ವಿತರಿಸಲಿದೆ.
ಹೊಸ ಬಗೆಯ ಆರ್‌ಸಿ ಮತ್ತು ಡಿಎಲ್ ವಿತರಣೆ ಕುರಿತಂತೆ ಪ್ರಸ್ತಾವನೆಯಿದೆ. ಸ್ಮಾರ್ಟ್‌ಕಾರ್ಡ್‌ಗಳಲ್ಲಿ ಚಿಪ್ ಜತೆಗೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಸಬೇಕಿದ್ದು, ಅದಕ್ಕೂ ಮುನ್ನ ಟೆಂಡರ್ ದಾಖಲೆ ಸಿದ್ಧಪಡಿಸಲು ಖಾಸಗಿ ಸಂಸ್ಥೆ ನೇಮಿಸಬೇಕಿದೆ. ಅವೆಲ್ಲ ಕಾರ್ಯಗಳು ಮುಗಿದ ನಂತರ ಗುತ್ತಿಗೆದಾರರನ್ನು ನೇಮಕ ಮಾಡಿ ಹೊಸ ಸ್ವರೂಪದ ಸ್ಮಾರ್ಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಆಯುಕ್ತ ಯೋಗೀಶ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ