3 ಕಾಂಗ್ರೆಸ್ ಕಾರ್ಪೊರೇಟರ್‌ಗಳ ಮೇಲೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಬಾಂಬ್..!

By Kannadaprabha NewsFirst Published Aug 20, 2020, 7:25 AM IST
Highlights

ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆಗೆ ಸ್ಥಳೀಯ ಕಾಂಗ್ರೆಸ್ಸಿಗರ ರಾಜಕೀಯ ಗುದ್ದಾಟ ಕಾರಣ ಎಂಬ ಆರೋಪಕ್ಕೆ ಬಲ ತುಂಬುವಂತಹ ಹೇಳಿಕೆಯನ್ನು ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಆ.20): ತಮ್ಮ ಮೇಲೆ ನಡೆದ ದಾಳಿಯ ಹಿಂದೆ ಸ್ಥಳೀಯ ಮೂವರು ಕಾಂಗ್ರೆಸ್‌ನ ಬಿಬಿಎಂಪಿ ಸದಸ್ಯರ ಸಂಚು ಅಡಗಿದ್ದು, ದಾಳಿ ನಡೆಸಲು ನಮ್ಮ ಪಕ್ಷದವರೇ ಒಂದು ತಿಂಗಳಿನಿಂದ ಸಿದ್ಧತೆ ಮಾಡಿಕೊಂಡಿದ್ದರು ಎಂದು ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಸಿಸಿಬಿ (ಕೇಂದ್ರ ಅಪರಾಧ ವಿಭಾಗ)ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

"

ಈ ಮೂಲಕ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆಗೆ ಸ್ಥಳೀಯ ಕಾಂಗ್ರೆಸ್ಸಿಗರ ರಾಜಕೀಯ ಗುದ್ದಾಟ ಕಾರಣ ಎಂಬ ಆರೋಪಕ್ಕೆ ಮತ್ತಷ್ಟು ಪುಷ್ಟಿಬಂದಿದ್ದು, ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ.

ಶಾಸಕರ ಈ ಹೇಳಿಕೆಯಿಂದ ಗಲಭೆಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿದ್ದ ಬಿಬಿಎಂಪಿ ಸದಸ್ಯರಾದ ಡಿ.ಜೆ.ಹಳ್ಳಿ ವಾರ್ಡ್‌ನ ಸಂಪತ್‌ ರಾಜ್‌ (ಮಾಜಿ ಮೇಯರ್‌), ಪುಲಿಕೇಶಿನಗರದ ಅಬ್ದುಲ್‌ ರಕೀಬ್‌ ಝಾಕೀರ್‌, ಸರ್ವಜ್ಞ ನಗರ ವಾರ್ಡ್‌ನ ಇರ್ಷಾದ್‌ ಬೇಗಂ ಅವರಿಗೆ ಸಂಕಷ್ಟಎದುರಾಗಿದ್ದು, ಗುರುವಾರ ಅವರನ್ನು ಸಿಸಿಬಿ ಬಂಧಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. ಸಿಸಿಬಿ ಸೂಚನೆ ಮೇರೆಗೆ ಪ್ರಕರಣದ ಸಂಬಂಧ ಶಾಸಕರು ಬುಧವಾರ ಆಯುಕ್ತರ ಕಚೇರಿಯಲ್ಲಿ ಡಿಸಿಪಿ ಕೆ.ಪಿ.ರವಿಕುಮಾರ್‌ ಅವರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

ಅವರೊಂದಿಗೆ ಸಂಬಂಧ ಚೆನ್ನಾಗಿರಲಿಲ್ಲ:

‘ನಾನು ಮೊದಲು ಜೆಡಿಎಸ್‌ ಪಕ್ಷದಲ್ಲಿದ್ದ ಕಾರಣ ಮೊದಲಿನಿಂದಲೂ ಕ್ಷೇತ್ರದ ಬಿಬಿಎಂಪಿ ಸದಸ್ಯರಾದ ಸಂಪತ್‌ ರಾಜ್‌, ಜಾಕೀರ್‌ ಹಾಗೂ ಇರ್ಷಾದ್‌ ಬೇಗಂ ಪತಿ ಖಲೀಂ ಪಾಷ ಜತೆ ರಾಜಕೀಯ ಕಾರಣಗಳಿಗೆ ಭಿನ್ನಾಭಿಪ್ರಾಯಗಳಿದ್ದವು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾನು ಕಾಂಗ್ರೆಸ್‌ ಪಕ್ಷ ಸೇರಿದೆ. ಆದರೆ ಆ ಮೂವರೊಂದಿಗೆ ಸಂಬಂಧ ಸುಧಾರಿಸಲಿಲ್ಲ. 2018ರ ವಿಧಾನಸಭಾ ಚುನಾವಣೆ ವೇಳೆ ಆಗ ಮೇಯರ್‌ ಆಗಿದ್ದ ಸಂಪತ್‌ ರಾಜ್‌ ಪುಲಿಕೇಶಿ ನಗರದ ಕ್ಷೇತ್ರದ ಟಿಕೆಟ್‌ ಬಯಸಿದ್ದರು. ಆದರೆ ಪಕ್ಷದ ಹೈಕಮಾಂಡ್‌ ನನಗೆ ಅವಕಾಶ ನೀಡಿತು. ಇದರಿಂದ ಸಂಪತ್‌ ರಾಜ್‌ ಅವರ ಅಸಮಾಧಾನ ಹೆಚ್ಚಾಯಿತು’ ಎಂದು ಅಖಂಡ ಶ್ರೀನಿವಾಸ್‌ ಮೂರ್ತಿ ಹೇಳಿದ್ದಾರೆ ಎನ್ನಲಾಗಿದೆ.

ಅಖಂಡ ಕಣ್ಣೀರು, ಮನೆ ಸುಟ್ಟಿದ್ದಕ್ಕಿಂತಲೂ ನೋವು ತಂದ ಬೇರೆ ವಿಚಾರ

ಪುಲಿಕೇಶಿನಗರ ಕ್ಷೇತ್ರದ ಟಿಕೆಟ್‌ ಸಿಗದೆ ಕೊನೆಗೆ ಪಕ್ಕದ ಸಿ.ವಿ.ರಾಮನ್‌ ನಗರ ಕ್ಷೇತ್ರದಿಂದ ಸಂಪತ್‌ ಸ್ಪರ್ಧಿಸಿ ಪರಾಜಿತರಾದರು. ನಾನು ದಾಖಲೆ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದು ವಿರೋಧಿಗಳ ಮನದಲ್ಲಿ ಅಸೂಯೆ ತಂದಿತು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ತಪ್ಪಿಸಿ ತಾವೇ ಸ್ಪರ್ಧಿಸಲು ಸಂಪತ್‌ ರಾಜ್‌ ಯೋಜಿಸಿದ್ದರು. ಇದಕ್ಕಾಗಿ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಜಾಕೀರ್‌ ಹಾಗೂ ಖಲೀಂ ಪಾಷ ಸೇರಿದಂತೆ ಮುಸ್ಲಿಂ ಮುಖಂಡರನ್ನು ಒಟ್ಟುಗೂಡಿಸಿದ್ದರು. ನನ್ನ ಮೇಲೆ ಏನಾದರೂ ಆಪಾದನೆ ಹೊರಿಸಿ ಮುಸ್ಲಿಂ ಸಮುದಾಯದ ಮೂಲಕ ಗಲಾಟೆ ಮಾಡಿಸಲು ಅವರು ಹೊಂಚು ಹಾಕಿದ್ದರು ಎಂಬ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಪತ್‌ ಬೆಂಬಲಿಗರೇ ಸುಳಿವು ಕೊಟ್ಟಿದ್ದರು:

ಒಂದು ತಿಂಗಳ ಹಿಂದೆಯೇ ನನಗೆ, ‘ನೀವು ಹುಷಾರಾಗಿರಿ. ನಿಮ್ಮ ವಿರುದ್ಧ ಮಸಲತ್ತು ನಡೆದಿದೆ’ ಎಂದು ಸಂಪತ್‌ ಹಾಗೂ ಜಾಕೀರ್‌ನ ಕೆಲವು ಆಪ್ತರು ಎಚ್ಚರಿಸಿದ್ದರು. ಆದರೆ ನಾನು ಮುಸ್ಲಿಂ ಸಮುದಾಯದೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರಿಂದ ವಿರೋಧಿಗಳು ಏನೂ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದೆ. ಆದರೆ ನನ್ನ ಅಕ್ಕನ ಮಗನ ಹೆಗಲ ಮೇಲೆ ಬಂದೂಕಿಟ್ಟು ನನ್ನ ಮೇಲೆ ಸ್ವಪಕ್ಷದ ಶತ್ರುಗಳು ಗುಂಡು ಹಾರಿಸಿದರು ಎಂದು ಶಾಸಕರ ಅಖಂಡ ಶ್ರೀನಿವಾಸ್‌ ಮೂರ್ತಿ ನೊಂದು ನುಡಿದ್ದಾರೆ.

2019ರ ಮೇ ತಿಂಗಳಿನಲ್ಲಿ ಸಗಾಯಪುರ ವಾರ್ಡ್‌ ಉಪ ಚುನಾವಣೆಯಲ್ಲಿ ಎಸ್‌ಡಿಪಿಐ ಮುಖಂಡ ಮುಜಾಮಿಲ್‌ ಪಾಷ ಸೋಲುಂಡಿದ್ದ. ಈ ಉಪ ಚುನಾವಣೆ ಬಳಿಕ ನನ್ನ ಮೇಲೆ ಮುಜಾಮಿಲ್‌, ಅಯಾಜ್‌, ಅಫ್ನಾನ್‌ ಸೇರಿದಂತೆ ಎಸ್‌ಡಿಪಿಐ ನಾಯಕರು ಹಗೆತನ ಸಾಧಿಸುತ್ತಿದ್ದರು. ಜೆಡಿಎಸ್‌ ತೊರೆದ ಬಳಿಕ ನನ್ನ ಮೇಲೆ ಪುಲಿಕೇಶಿನಗರ ಕ್ಷೇತ್ರದ ಜೆಡಿಎಸ್‌ ಅಧ್ಯಕ್ಷ ವಾಜಿದ್‌ ಕೂಡಾ ದ್ವೇಷ ಸಾಧಿಸುತ್ತಿದ್ದ. ಫೇಸ್‌ಬುಕ್‌ನಲ್ಲಿ ನನ್ನ ಅಕ್ಕನ ಮಗ ನವೀನ್‌ ಹಾಕಿದ್ದ ಪೋಸ್ಟ್‌ ಬಳಸಿಕೊಂಡು ಮುಜಾಮಿಲ್‌ ತಂಡ ಗಲಾಟೆಗೆ ನಿರ್ಧರಿಸಿದೆ. ಆಗ ಸಂಪತ್‌, ಜಾಕೀರ್‌ ಹಾಗೂ ಸರ್ವಜ್ಞ ವಾರ್ಡ್‌ನ ಇರ್ಷಾದ ಬೇಗಂ, ಖಲೀಂಪಾಷ ಬೆಂಬಲಿಸಿದ್ದಾರೆ. ಸಂಪತ್‌ ತನ್ನ ಆಪ್ತ ಸಹಾಯಕ ಅರುಣ್‌ ಮೂಲಕ ಮುಜಾಮಿಲ್‌ಗೆ ಸಹಕಾರ ನೀಡಿದ್ದಾರೆ. ನನ್ನ ಮೇಲಿನ ದಾಳಿಗೆ ರಾಜಕೀಯ ದ್ವೇಷವೇ ಕಾರಣವಾಗಿದೆ ಎಂದು ಶ್ರೀನಿವಾಸಮೂರ್ತಿ ಉಲ್ಲೇಖಿಸಿರುವುದಾಗಿ ಮೂಲಗಳು ವಿವರಿಸಿವೆ.

ಕಾವಲ್‌ಬೈರಸಂದ್ರದಲ್ಲೇ ನಾನು ಹುಟ್ಟಿಬೆಳೆದಿದ್ದೇನೆ. ಆ ಕ್ಷೇತ್ರದಲ್ಲೇ ಹತ್ತಾರು ವರ್ಷಗಳಿಂದ ನಮ್ಮ ಕುಟುಂಬ ರಾಜಕೀಯ ಮಾಡಿದೆ. ನಮ್ಮ ತಂದೆ ಗುತ್ತಿಗೆದಾರರಾಗಿದ್ದರು. ನನ್ನ ಪತ್ನಿ ಸೇರಿದಂತೆ ನಮ್ಮ ಕುಟುಂಬದ ನಾಲ್ವರು ಕಾರ್ಪೊರೇಟರ್‌ಗಳಾಗಿದ್ದರು. ನಾನು ಎರಡು ಬಾರಿ ಶಾಸಕನಾಗಿದ್ದೇನೆ. ಯಾವತ್ತಿಗೂ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿಲ್ಲ. ಎರಡು ಸಮುದಾಯಗಳು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಶಾಸಕರು ದೂರಿದ್ದಾರೆ ಎನ್ನಲಾಗಿದೆ.
 

click me!