ಚಂದ್ರಯಾನ-3 ಯಶಸ್ವಿಯಾಗುತ್ತಿದ್ದಂತೆ ನಗರದ ನೆಹರು ತಾರಾಲಯದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಬುಧವಾರ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು, ವಿಜ್ಞಾನದ ಕುತೂಹಲಿಗಳು, ಜನತೆ ಸಾಫ್ಟ್‌ಲ್ಯಾಂಡಿಂಗ್‌ನ್ನು ಕಣ್ತುಂಬಿಕೊಂಡರು.
ಬೆಂಗಳೂರು (ಆ.24): ಚಂದ್ರಯಾನ-3 ಯಶಸ್ವಿಯಾಗುತ್ತಿದ್ದಂತೆ ನಗರದ ನೆಹರು ತಾರಾಲಯದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಬುಧವಾರ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು, ವಿಜ್ಞಾನದ ಕುತೂಹಲಿಗಳು, ಜನತೆ ಸಾಫ್ಟ್‌ಲ್ಯಾಂಡಿಂಗ್‌ನ್ನು ಕಣ್ತುಂಬಿಕೊಂಡರು. ಸಂಜೆ 6.3 ಗಂಟೆ ಸುಮಾರಿಗೆ ಚಂದ್ರನನ್ನು ವಿಕ್ರಮ್ ಮಾಡ್ಯೂಲ್ ಸ್ಪರ್ಶಿಸುತ್ತಿದ್ದಂತೆ ನೆರೆದವರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಸಂಜೆ 5ಗಂಟೆಯಿಂದ ಸಾಫ್ಟ್ ಲ್ಯಾಂಡಿಂಗ್ ದೃಶ್ಯ ವೀಕ್ಷಣೆಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ತಾರಾಲಯದಲ್ಲಿ 8-10 ಅಡಿ ಎತ್ತರದ ಅಡಿಯ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು.
ಚಂದ್ರಯಾನದ ಕ್ಷಣ ಕ್ಷಣದ ಮಾಹಿತಿಯನ್ನು ವಿಜ್ಞಾನಿಗಳು ಕನ್ನಡದಲ್ಲೇ ವೀಕ್ಷಕ ವಿವರಣೆ ನೀಡುವ ಮೂಲಕ ಸಾಮಾನ್ಯರಿಗೂ ಅರ್ಥವಾಗುವಂತೆ ಮಾಡಿದ್ದು ವಿಶೇಷವಾಗಿತ್ತು. ಪಾಲಕರು ತಮ್ಮ ಪುಟ್ಟಮಕ್ಕಳನ್ನು ತಾರಾಲಯಕ್ಕೆ ಕರೆತಂದಿದ್ದರು. ಚಂದ್ರನ ಬಗ್ಗೆ ಇರುವ ಸಾಕಷ್ಟುಕುತೂಹಲಕಾರಿ ಅಂಶಗಳ ಮಾಹಿತಿಯಿರುವ ಸುಮಾರು 24 ಪೋಸ್ಟರ್ ಪ್ರದರ್ಶನ ಏರ್ಪಡಿಸಲಾಗಿತ್ತು. ಚಂದ್ರನ ಕುರಿತಾದ ವೈಜ್ಞಾನಿಕ ಮಾಹಿತಿಯುಳ್ಳ ಕೈಪಿಡಿಯನ್ನು ಜನತೆಗೆ ವಿತರಣೆ ಮಾಡಲಾಯಿತು.
ಸೋಮನಾಥ್... ನಿಮ್ಮ ಹೆಸರಲ್ಲೇ ಚಂದ್ರನ ನಂಟಿದೆ: ಮೋದಿ ಬಣ್ಣನೆ
ವಿಜ್ಞಾನಿಗಳು ಜನತೆಗೆ ಸಾಫ್ಟ್‌ಲ್ಯಾಂಡಿಂಗ್‌ನ ಪ್ರಕ್ರಿಯೆಗಳು ಹೇಗಿರುತ್ತವೆ? ಇಸ್ರೋ ವಿಜ್ಞಾನಿಗಳು ಇದಕ್ಕಾಗಿ ಕೈಗೊಂಡ ಕ್ರಮಗಳೇನು? ಅಂತಿಮ ಕ್ಷಣದಲ್ಲಿ ಏನಾಗುತ್ತದೆ ಎಂಬುದನ್ನು ವಿವರಿಸಿದರು. ಜೊತೆಗೆ ಪ್ರಗ್ಯಾನ್ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಸಂಶೋಧನೆಗಳು ಏನು ಎಂಬುದನ್ನೆಲ್ಲ ವಿವರಿಸಿದರು. ಜೊತೆಗೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಅವರು ನೆಹರು ತಾರಾಲಯದಲ್ಲಿ ಚಂದ್ರಯಾನ-3ರ ನೇರ ಪ್ರಸಾರ ವೀಕ್ಷಿಸಿದರು.
ಚಂದ್ರಯಾನ-3 ಯಶಸ್ಸಿಗಾಗಿ ನಗರದೆಲ್ಲೆಡೆ ವಿಶೇಷ ಪೂಜೆ: ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯಲೆಂದು ಪ್ರಾರ್ಥಿಸಿ ನಗರದ ಗವಿ ಗಂಗಾಧರೇಶ್ವರ ದೇವಸ್ಥಾನ, ಬನಶಂಕರಿ ದೇವಾಲಯ ಸೇರಿ ವಿವಿಧ ದೇವಸ್ಥಾನಗಳಲ್ಲಿ ಬುಧವಾರ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ನೇತೃತ್ವದಲ್ಲಿ ಒಂದು ಗಂಟೆ ಕಾಲ ನವಗ್ರಹ ಪೂಜೆ, ಚಂದ್ರ ಹೋಮವನ್ನು ನೆರವೇರಿಸಿದರು. ಚಂದ್ರಯಾನ-3 ನಿರ್ವಿಗ್ನವಾಗಿ ನೆರವೇರಲೆಂದು ಮಹಾಗಣಪತಿ ಹೋಮ, ಈಶ್ವರನ ಐದು ಮುಖ, ಚಂದ್ರಹೋಮ, ನವಗ್ರಹ ಪೂಜೆ ನಡೆಸಲಾಯಿತು.
ಶುಭಲಗ್ನದಲ್ಲಿ ಲ್ಯಾಂಡಿಂಗ್ ಆಗಲಿ ಎಂದು ವಿಶೇಷ ಪೂಜೆ ನಡೆಸಲಾಗಿದೆ ಎಂದು ದೀಕ್ಷಿತರು ಹೇಳಿದರು. ಬನಶಂಕರಿ ದೇವಾಲಯದಲ್ಲಿ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನ ಸಮಿತಿಯಿಂದ ಪೂಜೆ ನಡೆಯಿತು. ದೇವರೆದುರು ರಾಕೆಟ್ ಮಾಡೆಲ್ ಹಾಗೂ ಪ್ರಭಾವಳಿ ಹಿಂದೆ ರಾಷ್ಟ್ರಧ್ವಜವನ್ನಿಟ್ಟು ಪ್ರಾರ್ಥನೆ ಮಾಡಿಕೊಂಡರು. ಅಧ್ಯಕ್ಷ ಎ.ಎಚ್.ಬಸವರಾಜು ಹಾಗೂ ಪ್ರಧಾನ ಅರ್ಚಕ ಚಂದ್ರಮೋಹನ್ ಮತ್ತು ಅರ್ಚಕರ ವೃಂದದವರು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ಮೇಲ್ವಿಚಾರಕ ಶ್ರೀನಿವಾಸ್ ಮೂರ್ತಿ, ಆಡಳಿತ ಮಂಡಳಿಯ ಸದಸ್ಯ ಸದಸ್ಯ ವೆಂಕಟೇಶ್ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.
ಇನ್ನು, ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಗಣಪತಿಗೆ ಬೆಣ್ಣೆಯ ಅಲಂಕಾರ ಮಾಡಿ, ರಾಷ್ಟ್ರಧ್ವವಿಟ್ಟು ಪೂಜೆ ನೆರವೇರಿಸಲಾಯಿತು. ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಚಂದ್ರದೇವರ ಮೂರ್ತಿಯಿಟ್ಟು ಪೂಜೆ ನಡೆಯಿತು. ಮಹಾಲಕ್ಷ್ಮೇಪುರ ಬಡಾವಣೆಯ ಗಂಗಾಧರೇಶ್ವರ ದೇವಸ್ಥಾನದಲ್ಲೂ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಎಲ್ಲಡೆ ಜನತೆ ಪಾಲ್ಗೊಂಡು ವಿಜ್ಞಾನಿಗಳ ಪರಿಶ್ರಮಕ್ಕೆ ನಿರೀಕ್ಷಿತ ಫಲ ದೊರಕ ಲೆಂದು ಬೇಡಿಕೊಂಡರು.
ಇಷ್ಟು ದಿನ ಪಟ್ಟ ನೋವು ಫಲ ನೀಡಿದೆ: ಇಸ್ರೋ ಮುಖ್ಯಸ್ಥ ಸೋಮನಾಥ್
ಅಯ್ಯಪ್ಪನ ಮೊರೆ ಹೋದ ಇಸ್ರೋ ಅಧ್ಯಕ್ಷ: ಬೆಂಗಳೂರು:ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗುವಂತೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರು ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಾಫ್‌್ಟಲ್ಯಾಂಡಿಂಗ್‌ಗಾಗಿ ಚಂದ್ರಯಾನ-3 ಯಶಸ್ವಿಗಾಗಿ ಅವರು ವಿಜ್ಞಾನಿಗಳ ತಂಡದ ಜೊತೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಹಿಂದೆ ರಾಕೆಟ್ ಉಡಾವಣೆ ಸಂದರ್ಭದಲ್ಲಿ ವಿಜ್ಞಾನಿಗಳ ತಂಡ ತಿರುಪತಿಯ ಸುಲ್ಲೂರುಪೇಟೆಯ ಚೆಂಗಲಮ್ಮ ದೇವಿ ದರ್ಶನ ಪಡೆದು ಪ್ರಾರ್ಥನೆ ಮಾಡಿದ್ದರು.