ಚಂದ್ರಯಾನ-3 ಯಶಸ್ವಿ ಆಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, ಇದೇ ವೇಳೆ ಈ ಯಾನದ ಯಶಸ್ಸಿಗಾಗಿ ವಿಜ್ಞಾನಿಗಳು ಪಟ್ಟನೋವನ್ನು ಕೂಡ ಜ್ಞಾಪಿಸಿಕೊಂಡು, ಅವರಿಗೆ ಯಾನದ ಯಶಸ್ಸಿನ ಶ್ರೇಯಸ್ಸು ಸಲ್ಲುತ್ತದೆ ಎಂದಿದ್ದಾರೆ.
ಬೆಂಗಳೂರು (ಆ.24): ಚಂದ್ರಯಾನ-3 ಯಶಸ್ವಿ ಆಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, ಇದೇ ವೇಳೆ ಈ ಯಾನದ ಯಶಸ್ಸಿಗಾಗಿ ವಿಜ್ಞಾನಿಗಳು ಪಟ್ಟ ನೋವನ್ನು ಕೂಡ ಜ್ಞಾಪಿಸಿಕೊಂಡು, ಅವರಿಗೆ ಯಾನದ ಯಶಸ್ಸಿನ ಶ್ರೇಯಸ್ಸು ಸಲ್ಲುತ್ತದೆ ಎಂದಿದ್ದಾರೆ. ಇದೇ ವೇಳೆ, ಇಂಥದ್ದೇ ವ್ಯೋಮನೌಕೆಯನ್ನು ಮಂಗಳನ ಅನ್ವೇಷಣೆಗೂ ಹಾರಿ ಬಿಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬುಧವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿದ ಸೋಮನಾಥ್, ‘ದೇಶದ ಅಂತರಿಕ್ಷ ಕ್ಷೇತ್ರ ಅಭೂತಪೂರ್ವ ಪ್ರಗತಿ ಕಂಡಿದೆ. ಇಂದಿನ ಯಶಸ್ಸು ಹಿಂದೆಂದಿಗಿಂತ ದೊಡ್ಡದಾಗಿದೆ. ಇದು ಭವಿಷ್ಯದ ವ್ಯೋಮಯಾನಕ್ಕೆ ಉತ್ತೇಜನ ನೀಡಿದೆ’ ಎಂದು ಹರ್ಷಿಸಿದರು.
‘ಚಂದ್ರನ ಮೇಲೆ ಮೃದು ಭೂಸ್ಪರ್ಶ ಮಾಡುವುದು ಯಾವುದೇ ದೇಶಕ್ಕೆ ಅಷ್ಟು ಸುಲಭದ ಮಾತಲ್ಲ. ಎಷ್ಟೇ ಮುಂದುವರಿದ ತಂತ್ರಜ್ಞಾನ ಇದ್ದರೂ ಸುಲಭವಲ್ಲ. ಭಾರತ ಈ ಯಶಸ್ಸನ್ನು ಕೇವಲ 2 ಮಿಶನ್‌ಗಳಲ್ಲಿ ಕಂಡಿದೆ. ಚಂದ್ರಯಾನ-2ರಲ್ಲಿ ಕೂದಲೆಳೆ ಅಂತರದಲ್ಲಿ ವಿಫಲವಾದರೂ ಚಂದ್ರಯಾನ-3ರಲ್ಲಿ ಯಶ ಕಂಡಿದ್ದೇವೆ’ ಎಂದರು. ಚಂದ್ರಯಾನ-1, ಚಂದ್ರನ ಕಕ್ಷೆಗೆ ವ್ಯೋಮನೌಕೆಯನ್ನು ಸೇರಿಸುವ ಉದ್ದೇಶ ಮಾತ್ರ ಹೊಂದಿತ್ತು.
ತಿಂಗಳನ ಅಂಗಳದಲ್ಲಿ ಭಾ'ರಥ': ಇಸ್ರೋ ಮುಂದಿನ ಗುರಿ ಸೂರ್ಯ
ಇದೇ ವೇಳೆ, ,‘ಚಂದ್ರಯಾನ ಮಿಶನ್ ಯಶಸ್ಸಿಗೆ ಇಸ್ರೋದ ತಲೆಮಾರಿನ ನಾಯಕತ್ವ ಮತ್ತು ಅದರ ವಿಜ್ಞಾನಿಗಳ ಕೊಡುಗೆ ಸಾಕಷ್ಟಿದೆ. ಇದೊಂದು ಹೆಚ್ಚಿನ ಪ್ರಗತಿಯ ಬೃಹತ್ ಸಾಧನೆ. ಪ್ರಧಾನಿ ನರೇಂದ್ರ ಮೋದಿಯವರು ನನಗೆ ಕರೆ ಮಾಡಿ, ಇಸ್ರೋದಲ್ಲಿ ನೀವು ಮಾಡಿರುವ ಅದ್ಭುತ ಕಾರ್ಯಕ್ಕಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭಾಶಯಗಳನ್ನು ತಿಳಿಸಿದರು. ಅವರ ಬೆಂಬಲಕ್ಕೆ ಧನ್ಯವಾದಗಳು’ ಎಂದರು.