ಪಿಎಸ್‌ಐ ಅಕ್ರಮ: ಕಳಂಕಿತರ ಬಿಟ್ಟು ಇತರರಿಗೆ ಮರು ಪರೀಕ್ಷೆ ಇಲ್ಲ

By Kannadaprabha News  |  First Published Jul 6, 2023, 9:46 AM IST

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಅಕ್ರಮ ಸಂಬಂಧ ಆರೋಪ ಪಟ್ಟಿಯಲ್ಲಿ ಹೆಸರಿರುವ ಕಳಂಕಿತ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗಷ್ಟೇ ಮರು ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ. 


ಬೆಂಗಳೂರು (ಜು.06): ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಅಕ್ರಮ ಸಂಬಂಧ ಆರೋಪ ಪಟ್ಟಿಯಲ್ಲಿ ಹೆಸರಿರುವ ಕಳಂಕಿತ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗಷ್ಟೇ ಮರು ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ. ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರು ಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಜಿ. ನರೇಂದರ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರ ಅರ್ಜಿ ವಿಚಾರಣೆಗೆ ಬಂದಿತ್ತು. ಈ ವೇಳೆ ರಾಜ್ಯ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿಹಾಜರಾಗಿ, ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲಿ ದೋಷಾರೋಪ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರಿಗಷ್ಟೇ ಪರೀಕ್ಷೆ ನಡೆಸಲಾಗದು. ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ನಡೆದ ಚರ್ಚೆ ಕುರಿತ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ. 

Tap to resize

Latest Videos

ರಸ್ತೆ ಸುರಕ್ಷತೆ ಕಾಯ್ದೆ ವ್ಯಾಪ್ತಿಗೆ ಬಿಬಿಎಂಪಿ: ಮಸೂದೆ ಮಂಡಿಸಿದ ಸಚಿವ ಪ್ರಿಯಾಂಕ್‌ ಖರ್ಗೆ

ಯಾವ ಕಾರಣಕ್ಕೆ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂಬುದಕ್ಕೆ ವರದಿಯಲ್ಲಿ ಕಾರಣ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಆ ವರದಿ ಪರಿಶೀಲಿಸಿದ ಪೀಠ, ಹಾಗಿದ್ದರೆ ಅರ್ಜಿಗಳನ್ನು ಮೆರಿಟ್‌ ಆಧಾರದಲ್ಲಿ ಸೋಮವಾರ (ಜು.10) ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು. ಜತೆಗೆ, ಪ್ರಕರಣದ ಎಲ್ಲ ಪಕ್ಷಗಾರರ ಪರ ವಕೀಲರಿಗೆ ಲಿಖಿತ ವಾದಾಂಶ ಸಲ್ಲಿಸುವಂತೆ ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು. 

ಅರ್ಜಿಯನ್ನು ಕಳೆದ ಜೂ.15ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, 545 ಪಿಎಸ್‌ಐ ಹುದ್ದೆಗಳಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳಲ್ಲಿ ದೋಷಾರೋಪ ಪಟ್ಟಿಯಲ್ಲಿ ಹೆಸರಿರುವವರನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ಪರೀಕ್ಷೆ ನಡೆಸಬಹುದೇ, ಆ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ಅವರನ್ನು ಹುದ್ದೆಗೆ ಪರಿಗಣಿಸಲು ಸಾಧ್ಯವೇ ಎಂಬ ಬಗ್ಗೆ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ರಾಜ್ಯ ಅಡ್ವೋಕೇಟ್‌ ಜನರಲ್‌ ಸರ್ಕಾರದಿಂದ ಮಾಹಿತಿ ಪಡೆದು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಬುಧವಾರ ಸಲ್ಲಿಸಿದರು.

ನನ್ನ ಆಸ್ತಿ ತನಿಖೆ ಮಾಡಲಿ: ಕಾಂಗ್ರೆಸ್‌ಗೆ ಎಚ್‌.ಡಿ.ಕುಮಾರಸ್ವಾಮಿ ಸವಾಲು

545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವುದಾಗಿ 2022ರ ಏ.29ರಂದು ಅಂದಿನ ಬಿಜೆಪಿ ಸರ್ಕಾರ ಆದೇಶಿಸಿತ್ತು. ಈ ಆದೇಶ ರದ್ದುಪಡಿಸಬೇಕು. ಕಳಂಕರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಹಿಂದಿನ ಅಧಿಸೂಚನೆ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೆಲ ಅಭ್ಯರ್ಥಿಗಳು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಕೆಎಟಿ 2022ರ ಜು.19ರಂದು ವಜಾಗೊಳಿಸಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ 2022ರ ಸೆ.28ರಂದು ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿತ್ತು

click me!