ಶಿರಸಿ/ಬೆಂಗಳೂರು (ಜು.13): ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣದಲ್ಲಿ ಅಭ್ಯರ್ಥಿಗಳು ಹಾಗೂ ನೇಮಕಾತಿ ವಿಭಾಗದ ಪೊಲೀಸರ ನಡುವೆ ಮಧ್ಯವರ್ತಿಯಾಗಿದ್ದ ಎಂಬ ಶಂಕೆ ಮೇರೆಗೆ ಶಿರಸಿ ತಾಲೂಕಿನ ಸಾಮಾಜಿಕ ಕಾರ್ಯಕರ್ತರೊಬ್ಬನನ್ನು ವಿಚಾರಣೆ ನಡೆಸಿ ಸಿಐಡಿ ಬಿಡುಗಡೆಗೊಳಿಸಿದೆ. ಶಿರಸಿ ತಾಲೂಕಿನ ಸಾಮಾಜಿಕ ಕಾರ್ಯಕರ್ತ ಗಣಪತಿ ಭಟ್ ವಿಚಾರಣೆಗೊಳಪಟ್ಟಿದ್ದು, ಸಿದ್ದಾಪುರ ಸಮೀಪದ ಹೇರೂರು ಗ್ರಾಮದಲ್ಲಿರುವ ಅವರ ಮನೆಯಲ್ಲಿ ಸಿಐಡಿ ವಶಕ್ಕೆ ಪಡೆದಿತ್ತು. ಬಳಿಕ ನಗರಕ್ಕೆ ಕರೆತಂದು ಗಣಪತಿ ಭಟ್‌ರನ್ನು ವಿಚಾರಣೆಗೊಳಪಡಿಸಿದ ತನಿಖಾ ತಂಡ ಮಂಗಳವಾರ ಬಿಡುಗಡೆಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಣಪತಿ ಭಟ್ ರಾಜಕೀಯ ಹಿನ್ನೆಲೆವುಳ್ಳವರಾಗಿದ್ದು, ಸ್ಥಳೀಯವಾಗಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಸಿದ್ದಾಪುರ ತಾಲೂಕಿನ ಕೆಲ ರಾಜಕೀಯ ನಾಯಕರ ಆಪ್ತ ಒಡನಾಟ ಸಹ ಇದೆ. ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಬಂಧಿತನಾಗಿರುವ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಜತೆ ಗಣಪತಿ ಭಟ್ ಸಂಪರ್ಕದಲ್ಲಿದ್ದು, ಕೆಲ ಅಭ್ಯರ್ಥಿಗಳ ಮತ್ತು ಡಿವೈಎಸ್ಪಿ ನಡುವೆ ಮಧ್ಯವರ್ತಿಯಾಗಿ ಡೀಲ್ ಕುದುರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಈ ಮಾಹಿತಿ ಮೇರೆಗೆ ಶಿರಸಿಗೆ ತೆರಳಿದ ಸಿಐಡಿ ಪೊಲೀಸರು, ಹೇರೂರು ಸಮೀಪದ ಅವರ ಮನೆಗೆ ತೆರಳಿ ವಶಕ್ಕೆ ಪಡೆದಿದರು. ವಿಚಾರಣೆ ವೇಳೆ ‘ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನಾನೂ ಯಾವ ಅಭ್ಯರ್ಥಿಗೂ ಅನುಕೂಲ ಮಾಡಿಕೊಟ್ಟಿಲ್ಲ. ಯಾರಿಂದೂ ಹಣ ಪಡೆದಿಲ್ಲ’ ಎಂದು ಗಣಪತಿ ಭಟ್ ಹೇಳಿದ್ದಾರೆ ಎನ್ನಲಾಗಿದೆ.
undefined
ಇಂದು ಕೋರ್ಚ್‌ಗೆ ಅಮೃತ್ ಪಾಲ್: ಪೊಲೀಸ್ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ ಬುಧವಾರ ನ್ಯಾಯಾಲಯಕ್ಕೆ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಎಡಿಜಿಪಿ ಅಮೃತ್ ಪಾಲ್ ಅವರನ್ನು ಸಿಐಡಿ ಹಾಜರುಪಡಿಸಲಿದೆ.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅಭ್ಯರ್ಥಿಗಳ ಒಎಂಆರ್‌ಶೀಟ್ ತಿದ್ದಿದ ಆರೋಪಕ್ಕೆ ಎಡಿಜಿಪಿ ತುತ್ತಾಗಿದ್ದರು. ಈ ಸಂಬಂಧ ಅಮೃತ್ ಪಾಲ್ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಸಲುವಾಗಿ 10 ದಿನಗಳು ಸಿಐಡಿ ವಶಕ್ಕೆ ಪಡೆದಿತ್ತು. ವಿಚಾರಣೆ ವೇಳೆ ತನಿಖೆಗೆ ಎಡಿಜಿಪಿ ಸಕಾರಾತಾತ್ಮಕವಾಗಿ ಸ್ಪಂದಿಸಿಲ್ಲ. ತಾನು ಯಾವುದೇ ತಪ್ಪು ಮಾಡಿಲ್ಲ ಎನ್ನುತ್ತಾರೆ ಹೊರತು ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಅಕ್ರಮ ಹೇಗೆ ನಡೆಯಿತು ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿಲ್ಲ ಎಂದು ಸಿಐಡಿ ಹೇಳಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕನ ಪುತ್ರನ ಹೆಸರು..!
ಬಂಧಿತ ಗಣಪತಿ ಭಟ್ ಬೇರೆ, ನನ್ನ ಒಎಸ್‌ಡಿ ಗಣಪತಿ ಬೇರೆ: ಆರಗ ಜ್ಞಾನೇಂದ್ರ
‘ನನ್ನ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ಹೆಸರು ಗಣಪತಿ ಭಟ್. ಆದರೆ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣ ಪ್ರಕರಣ ಸಂಬಂಧ ಸಿಐಡಿ ವಿಚಾರಣೆಗೊಳಪಟ್ಟಿರುವ ಗಣಪತಿ ಭಟ್ ಅವರಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ನನ್ನ ಜೊತೆ ಕಾರ್ಯನಿರ್ವಹಿಸುತ್ತಿರುವ ಗಣಪತಿ ಭಟ್ ಸಜ್ಜನರು. ಕಾನೂನು ಬಾಹಿರ ಕೃತ್ಯಗಳಲ್ಲಿ ಪಾಲ್ಗೊಳ್ಳುವಂತಹ ವ್ಯಕ್ತಿಯಲ್ಲ’ ಎಂದರು.
‘ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಶಿರಸಿ ತಾಲೂಕಿನ ಗಣಪತಿ ಭಟ್ ಎನ್ನುವ ವ್ಯಕ್ತಿಯನ್ನು ಸಿಐಡಿ ವಶಕ್ಕೆ ಪಡೆದಿದೆ. ಸರ್ಕಾರಿ ಇಲಾಖೆಗಳಲ್ಲಿ ವರ್ಗಾವಣೆ ಮಾಡಿಸುವುದನ್ನೇ ವೃತ್ತಿ ಮತ್ತು ಪ್ರವೃತ್ತಿಯಾಗಿಸಿಕೊಂಡಿದ್ದ ಎನ್ನಲಾಗಿದೆ. ನನ್ನ ವಿಶೇಷಾಧಿಕಾರಿ ಹೆಸರು ಕೂಡಾ ಗಣಪತಿ ಭಟ್ ಅಂತ ಇದೆ. ಹೀಗಾಗಿ ಒಬ್ಬ ಗಣಪತಿಯಿಂದ ಇನ್ನೊಬ್ಬ ಗಣಪತಿಗೆ ಕಳಂಕ ಮುತ್ತಿಕೊಂಡಿತು. ನನ್ನ ವಿಶೇಷಾಧಿಕಾರಿ ನಿಷ್ಕಳಂಕರಾಗಿದ್ದಾರೆ’ ಎಂದು ಹೇಳಿದರು.
ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ: ಬಿಟ್ಟಿ ಇಟ್ಟಿಗೆ, ಕಬ್ಬಿಣಕ್ಕಾಗಿ ಎಸ್‌ಐ ಅಕ್ರಮದಲ್ಲಿ ಡಿವೈಎಸ್ಪಿ ಭಾಗಿ..!
‘ಪಿಎಸ್‌ಐ ನೇಮಕಾತಿ ಹಗರಣದ ಸಂಬಂಧ ಮಂಗಳವಾರ ಬಂಧನವಾಗಿರುವ ಗಣಪತಿ ಭಟ್‌ಗೂ ಗೃಹ ಸಚಿವರ ಕಚೇರಿಗೂ ಏನು ಸಂಬಂಧ ಎಂಬುದು ಬಹಿರಂಗಗೊಳ್ಳಬೇಕು. ಗೃಹ ಸಚಿವರ ಪಾಲುದಾರಿಕೆ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು’ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದರು.