ಜುಲೈನಲ್ಲಿ ಶೇ.114 ಹೆಚ್ಚು ಮಳೆಯಿಂದ ಹಾನಿ: ಸಿಎಂ ಬೊಮ್ಮಾಯಿ

By Kannadaprabha News  |  First Published Jul 13, 2022, 8:23 AM IST

*    ಕೊಡಗು, ದ.ಕ. ಭೇಟಿ, ಇಂದು ಉಡುಪಿ, ಉ.ಕ. ಪ್ರವಾಸ
*   ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ
*    ಮನೆ ಕಳೆದುಕೊಂಡವರಿಗೆ ಪರಿಹಾರಕ್ಕೆ ನಿರ್ದೇಶನ


ಮಡಿಕೇರಿ/ಮೈಸೂರು/ಮಂಗಳೂರು(ಜು.13):  ಈವರೆಗೆ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇ.114ರಷ್ಟು ಹೆಚ್ಚು ಮಳೆಯಾಗಿದ್ದರಿಂದ ಕೊಡಗು ಸೇರಿ ಹಲವೆಡೆ ಅಪಾರ ಹಾನಿಯಾಗಿದೆ. ಮಳೆ ಹಾನಿ ಬಗ್ಗೆ ವರದಿ ಸಿದ್ಧವಾಗುತ್ತಿದ್ದು, ಅದು ಕೈಸೇರಿದ ನಂತರ ಕೇಂದ್ರದಿಂದ ಪರಿಹಾರ ಕೇಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮಳೆ ಮತ್ತು ಕಡಲ್ಕೊರೆತದಿಂದ ಆದ ಹಾನಿ ಪರಿಶೀಲಿಸಿ ಹಾಗೂ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮಳೆಯಿಂದಾಗಿ ಉಂಟಾಗಿರುವ ಪರಿಸ್ಥಿತಿ ನಿರ್ವಹಿಸಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ. ಸದ್ಯ ಎನ್‌ಡಿಆರ್‌ಎಫ್‌ನಲ್ಲಿ ರಾಜ್ಯದ ಬಳಿ .739 ಕೋಟಿ ನಿಧಿ ಲಭ್ಯವಿದೆ. ಕೊಡಗಿನ ಜಿಲ್ಲಾಧಿಕಾರಿಗಳ ಬಳಿ ಹಣ ಇದೆ. ಜಿಲ್ಲೆಯ ನಾಲ್ಕು ತಹಸೀಲ್ದಾರ್‌ಗಳ ಬಳಿ .25 ಲಕ್ಷ ಮೀಸಲಿದೆ. ಎಲ್ಲ ಗ್ರಾಪಂಗಳಿಗೆ 50 ಸಾವಿರ ಹಣ ಬಿಡುಗಡೆ ಮಾಡಲಾಗಿದೆ ಎಂದು ಇದೇ ವೇಳೆ ಬೊಮ್ಮಾಯಿ ಮಾಹಿತಿ ನೀಡಿದರು.

Tap to resize

Latest Videos

ಚಿಕ್ಕಮಗಳೂರು ನೆರೆ ಪ್ರದೇಶಗಳಿಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ: ಪರಿಶೀಲನೆ

ರಾಜ್ಯದ ಹಲವೆಡೆ ಕಳೆದೆರಡು ವಾರಗಳಿಂದ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸಣ್ಣ ಪ್ರಮಾಣದ ಭೂಕುಸಿತವಾಗಿ ಸಂಚಾರ ಕಡಿತಗೊಂಡಿದೆ. ಹಲವು ಮನೆಗಳಿಗೂ ಹಾನಿಯಾಗಿದೆ. ನದಿ ಪಾತ್ರಗಳು ಉಕ್ಕಿ ಹರಿದು ಜಮೀನುಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಹಾನಿಗೊಳಗಾಗಿದ್ದು, ಸೇತುವೆಗಳು ಮಣ್ಣು ಮತ್ತು ಮರದ ದಿಮ್ಮಿಗಳಿಂದ ತುಂಬಿವೆ. ಗ್ರಾಮೀಣ ರಸ್ತೆ ದುರಸ್ತಿಗೆ ಆದ್ಯತೆ ನೀಡಲಾಗುವುದು. ಕೊಡಗಿನಲ್ಲಿ ಈವರೆಗೆ 2 ಮನೆಗಳು ಕುಸಿದಿವೆ, 15 ಮನೆಗಳಿಗೆ ತೀವ್ರ ಹಾನಿಗೀಡಾಗಿದ್ದರೆ, 63 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸಂಪೂರ್ಣ ಹಾನಿಗೊಳಗಾಗಿರುವ ಮನೆಗಳಿಗೆ .5 ಲಕ್ಷ, ತೀವ್ರ ಹಾನಿಯಾದ ಮನೆಗಳಿಗೆ .3 ಲಕ್ಷ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೆ .50 ಸಾವಿರ ಪರಿಹಾರವನ್ನು ಕೂಡಲೇ ನೀಡಲು ಸೂಚಿಸಲಾಗಿದೆ. ಬಿದ್ದು ಹೋಗಿರುವ ಮನೆಗಳಿಗೆ ತುರ್ತಾಗಿ ಈಗಾಗಲೇ .10 ಸಾವಿರ ನೀಡಲಾಗಿದೆ. ಮಳೆ, ಪ್ರವಾಹದಿಂದ ಅಪಾಯಕ್ಕೆ ಸಿಲುಕಿದವರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಊಟ, ತಿಂಡಿಗೆ ವ್ಯವಸ್ಥೆ ಮಾಡಲಾಗಿದೆ. ನೆಂಟರ, ಪರಿಚಿತರ ಮನೆಗೆ ತೆರಳಿದವರಿಗೂ ದಿನಸಿ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಸಮರ್ಥವಾಗಿ ಕೆಲಸ ಮಾಡ್ತಿದೆ ಸರ್ಕಾರ-ಸಿಎಂ

ಈ ಸಂಕಷ್ಟದ ಸಮಯದಲ್ಲಿ ನಾನು ಸೇರಿ ಇಡೀ ಸರ್ಕಾರ ಬೀದಿಗಿಳಿದು ಕೆಲಸ ಮಾಡುತ್ತಿದೆ ಎಂದು ಸಮರ್ಥಸಿಕೊಂಡ ಮುಖ್ಯಮಂತ್ರಿ ಬೊಮ್ಮಾಯಿ, ಉಸ್ತುವಾರಿ ಸಚಿವರು ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪಗಳೆಲ್ಲ ಸುಳ್ಳು ಎಂದರು.

ಸಚಿವರಾದ ಎಸ್‌.ಅಂಗಾರ, ಸುನಿಲ್‌ಕುಮಾರ್‌, ಕೋಟ ಶ್ರೀನಿವಾಸಪೂಜಾರಿ, ಎಸ್‌.ಟಿ.ಸೋಮಶೇಖರ್‌ ಸೇರಿ ಎಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕಂದಾಯ ಸಚಿವ ಆರ್‌.ಅಶೋಕ್‌ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಲೋಕೋಪಯೋಗಿ ಸಚಿವರು ಶಿರಾಡಿಘಾಟ್‌ಗೆ ಹೋಗಿ ಬಂದಿದ್ದಾರೆ. ಎಲ್ಲಾ ಸಚಿವರು ಸಂಕಷ್ಟದ ಸಮಯದಲ್ಲಿ ಜನರ ಜೊತೆ ನಿಂತಿದ್ದಾರೆ. ಸಂಕಷ್ಟದಲ್ಲಿರುವ ಜನತೆಯ ಜೊತೆ ನಾವು ನಿಲ್ಲುತ್ತೇವೆ ಎಂದರು.

ಮಹಾರಾಷ್ಟ್ರ, ಬೆಳಗಾವಿಯಲ್ಲಿ ಮಳೆಯ ಅಬ್ಬರ: ಕೃಷ್ಣಾ ಮಟ್ಟ ಹೆಚ್ಚಳ

ನಾಳೆಯಿಂದ ಮಳೆ ಅಬ್ಬರ ಇಳಿಮುಖ

ಜುಲೈ ಆರಂಭದಿಂದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಮಳೆ ಗುರುವಾರದಿಂದ ಸ್ವಲ್ಪ ಕಡಿಮೆಯಾಗಲಿದೆ. ಗುರುವಾರದವರೆಗೆ ಭಾರೀ ಮಳೆಯ ‘ಆರೆಂಜ್‌ ಅಲರ್ಚ್‌’ ಇರಲಿದ್ದು, ಆ ಬಳಿಕ ಸಾಧಾರಣ ಮಳೆಯ ‘ಯೆಲ್ಲೋ ಅಲರ್ಚ್‌’ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆ ಅನಾಹುತಕ್ಕೆ ಮತ್ತೆ ಮೂರು ಬಲಿ

ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಹಲವೆಡೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಇದೀಗ ಇಳಿಮುಖವಾಗಿದೆ. ಕೆಲವೆಡೆ ಸಣ್ಣಪುಟ್ಟಭೂಕುಸಿತ ಆಗಿದ್ದು, ಮಳೆ ಸಂಬಂಧಿ ಕಾರಣಗಳಿಗಾಗಿ ಮೂವರು ಮೃತಪಟ್ಟಿರುವ ಘಟನೆಗಳು ಉತ್ತರ ಕನ್ನಡ ಮತ್ತು ಚಿಕ್ಕಮಗಳೂರಿನಿಂದ ವರದಿಯಾಗಿವೆ.
 

click me!