PSI Recruitment Scam: ಕಲಬುರಗಿ ವ್ಯಾಪ್ತಿಯ ಎಲ್ಲ 8 ಕೇಸಲ್ಲೂ ಚಾರ್ಜ್‌ಶೀಟ್

By Kannadaprabha News  |  First Published Nov 1, 2022, 2:00 AM IST

ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡ ಸೋಮವಾರ ಐದು ಪ್ರಕರಣಗಳ ಚಾರ್ಜ್‌ಶೀಟ್ ಅನ್ನು ಐದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಗೂ ಮೂರನೇ ಹೆಚ್ಚುವರಿ ನ್ಯಾಯಾಲಯಕ್ಕೆ ಸಲ್ಲಿಸಿದೆ.


ಯಾದಗಿರಿ (ನ.01): ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡ ಸೋಮವಾರ ಐದು ಪ್ರಕರಣಗಳ ಚಾರ್ಜ್‌ಶೀಟ್ ಅನ್ನು ಐದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಗೂ ಮೂರನೇ ಹೆಚ್ಚುವರಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಒಂದು ಪ್ರಕರಣದ ಹೆಚ್ಚುವರಿ ದೋಷಾರೋಪಣ ಪಟ್ಟಿಸಹ ಇಲ್ಲಿ ಸೇರಿದೆ. ಈ ಮೂಲಕ ಕಲಬುರಗಿ ವ್ಯಾಪ್ತಿಯಲ್ಲಿ ಈವರೆಗೆ ದಾಖಲಾಗಿದ್ದ ಒಟ್ಟು 8 ಪ್ರಕರಣಗಳ ಪೈಕಿ ಮೂರು ಪ್ರಕರಣಗಳ ಚಾರ್ಜ್‌ಶೀಟ್ ಅನ್ನು ಈ ಮೊದಲು ಸಲ್ಲಿಸಿದ್ದ ಸಿಐಡಿ ಅಧಿಕಾರಿಗಳು, 90 ದಿನಗಳ ಅವಧಿಯೊಳಗೇ ಬಾಕಿಯಿದ್ದ ಇನ್ನೂ ಐದು ಪ್ರಕರಣಗಳ ದೋಷಾರೋಪಣ ಪಟ್ಟಿಸಲ್ಲಿಸಿದೆ.

ಕಲಬುರಗಿಯ ಅಶೋಕನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಶ್ರೀ ಶರಣ ಬಸವೇಶ್ವರ ಕಾಲೇಜ್‌ ಆಫ್‌ ಆಟ್ಸ್‌ರ್‍ ಪರೀಕ್ಷಾ ಕೇಂದ್ರದಲ್ಲಿ ಇದೇ ಆ.4 ರಂದು ದಾಖಲಾಗಿದ್ದ ಪ್ರಕರಣದ ಬಗ್ಗೆ 788 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಹಾಗೆಯೇ, ಇದೇ ಠಾಣಾ ವ್ಯಾಪ್ತಿಯ ಶ್ರೀಶರಣ ಬಸವೇಶ್ವರ ಕಾಲೇಜ್‌ ಆಫ್‌ ಕಾಮರ್ಸ್‌ ಪರೀಕ್ಷಾ ಕೇಂದ್ರದ ನಾಲ್ವರು ಆರೋಪಿಗಳ ವಿರುದ್ಧದ ಪ್ರಕರಣದಲ್ಲಿ 1318 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರೆ, ಶ್ರೀಶರಣ ಬಸವೇಶ್ವರ ಕಾಲೇಜ್‌ ಆಫ್‌ ಸೈನ್ಸ್‌ ಪರೀಕ್ಷಾ ಕೇಂದ್ರದ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ 1,048 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಪಿಎಸ್‌ಐ ನೇಮಕದಲ್ಲಿ ಒಎಂಆರ್‌ ಶೀಟ್‌ (ಪತ್ರಿಕೆ-2) ತಿದ್ದುಪಡಿ, ಬ್ಲೂಟೂತ್‌ ಅಕ್ರಮವೂ ಸೇರಿದಂತೆ ಪತ್ರಿಕೆ-1 ರಲ್ಲಿಯೂ ಅಕ್ರಮದ ಬಗ್ಗೆ ಚಾಜ್‌ರ್‍ಶೀಟಿನಲ್ಲಿ ಉಲ್ಲೇಖಿಸಲಾಗಿದೆ. ಐದು ಚಾರ್ಜ್‌ಶೀಟ್ಗಳ ಸಲ್ಲಿಸುವ ಸಾಧ್ಯತೆ ಬಗ್ಗೆ ಕನ್ನಡಪ್ರಭ ಅ.25 ರಂದು ವರದಿ ಮಾಡಿತ್ತು.

Tap to resize

Latest Videos

ಪಿಎಸ್‌ಐ ನೇಮಕಾತಿ ಅಕ್ರಮ: ಶೀಘ್ರ 5 ಚಾರ್ಜ್‌ಶೀಟ್‌ ಸಲ್ಲಿಕೆ

ಪ್ರಶ್ನೆಪತ್ರಿಕೆ 1ರಲ್ಲೂ ಅಕ್ರಮ: ಪಿಎಸ್‌ಐ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ-1ರಲ್ಲಿಯೂ (ಭಾಷಾಂತರ, ಪ್ರಬಂಧ ಹಾಗೂ ಸಾರಾಂಶ) ಅಕ್ರಮ ನಡೆದಿರುವ ಬಗ್ಗೆ ತಿಳಿದುಬಂದಿದೆ. ಸಿಐಡಿ ಪೊಲೀಸರು ಬಂಧಿಸಿದ ಮೂವರು ಆರೋಪಿ ಅಭ್ಯರ್ಥಿಗಳ ಪೈಕಿ, ಧಾರವಾಡದ ಶ್ರೀಮಂತ ಸತಾಪುರ ಈ ತರಹದ ಅಕ್ರಮ ನಡೆಸಿದ್ದ ಎಂಬುದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಇಷ್ಟುದಿನ ಪ್ರಶ್ನೆ ಪತ್ರಿಕೆ-2ರಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಯುತ್ತಿತ್ತು. ಈಗ ಮೊದಲ ಬಾರಿ ಪ್ರಶ್ನೆಪತ್ರಿಕೆ-1ರಲ್ಲೂ ಅಕ್ರಮ ಬೆಳಕಿಗೆ ಬಂದಿದೆ. ತಾಂತ್ರಿಕ ವಿಶ್ಲೇಷಣೆ ಹಾಗೂ ವೈಜ್ಞಾನಿಕ ವಿಧಾನದಿಂದ ಇಂತಹ ಅಕ್ರಮ ಪತ್ತೆ ಮಾಡಿರುವ ಸಿಐಡಿ ತಂಡ, ಧಾರವಾಡದ ಪರೀಕ್ಷಾ ಕೇಂದ್ರಕ್ಕೆ ಸಂಪರ್ಕಿಸುವ ಎಲ್ಲ ಮೊಬೈಲ್‌ ಕಂಪನಿಗಳ ಸೆಲ್‌ ಐಡಿ ಪಡೆದು, ಸಂಬಂಧಿಸಿದ ಎಲ್ಲ ಮೊಬೈಲ್‌ ಕಂಪನಿ ಸವೀರ್‍ಸ್‌ ಪ್ರೊವೈಡರ್‌ಗಳಿಗೆ ಕಳುಹಿಸಿ ಅಲ್ಲಿ ಬಂದ ಕರೆಗಳ ಸಾಕ್ಷ್ಯಾಧಾರಗಳ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ. 

PSI Recruitment Scam: ಪ್ರಿಯಾಂಕ್‌ ಖರ್ಗೆ ಕೊಟ್ಟ ಆಡಿಯೋದಿಂದ ಒಬ್ಬ ಬಲೆಗೆ..!

ಬೆಳಿಗ್ಗೆ ನಡೆದ ಪರೀಕ್ಷೆ ವೇಳೆ 4 ಬಾರಿ ಸಂಪರ್ಕ ನಡೆದಿರುವುದು ತಾಂತ್ರಿಕ ತನಿಖೆಯಲ್ಲಿ ಪತ್ತೆಯಾಗಿದೆ. ಸುಮಾರು ಅರ್ಧಗಂಟೆಗಳ ಕಾಲ ಸಂಪರ್ಕ ಏರ್ಪಟ್ಟಿತ್ತು. ಪ್ರಬಂಧ ಹಾಗೂ ಭಾಷಾಂತರದ ಈ ಪತ್ರಿಕೆಯಲ್ಲಿ ಉತ್ತರಗಳನ್ನು ಬ್ಲೂಟೂತ್‌ ಮೂಲಕ ಕೇಳಿಸಿಕೊಂಡು ಬರೆಯಲಾಗಿದೆ. ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತಷ್ಟುಆರೋಪಿಗಳ ಬಂಧನ ಸಾಧ್ಯತೆ ಹಾಗೂ ತುಮಕೂರು ದಾವಣಗೆರೆಗೂ ಇದರ ಲಿಂಕ್‌ ಕುರಿತು ಕನ್ನಡಪ್ರಭ ವರದಿ ಮಾಡಿತ್ತು. ಮುಂಬರುವ ದಿನಗಳಲ್ಲಿ ಇನ್ನೂ ಕೆಲವರನ್ನು ಬಂಧಿಸಲಾಗುತ್ತದೆ ಎಂದು ಸಿಐಡಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

click me!