ರಾಜ್ಯದಲ್ಲಿ ವಿದ್ಯುತ್ ಸ್ಪರ್ಶದಿಂದ ವನ್ಯಜೀವಿಗಳು ಹಾಗೂ ಮಾನವರು ಮೃತಪಡುವುದನ್ನು ತಪ್ಪಿಸಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸಲು ಉನ್ನತ ಮಟ್ಟದ ಸಮಿತಿ ರಚಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರು (ನ.01): ರಾಜ್ಯದಲ್ಲಿ ವಿದ್ಯುತ್ ಸ್ಪರ್ಶದಿಂದ ವನ್ಯಜೀವಿಗಳು ಹಾಗೂ ಮಾನವರು ಮೃತಪಡುವುದನ್ನು ತಪ್ಪಿಸಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸಲು ಉನ್ನತ ಮಟ್ಟದ ಸಮಿತಿ ರಚಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಹೈಕೋರ್ಟ್ ವಕೀಲ ಅಂಕುಶ್ ಎಣ್ಣೆ ಮಜಲು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಪಿ.ಬಿ .ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ನಂತರ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು.
ಭ್ರೂಣಲಿಂಗ ಪತ್ತೆ ಕೇಂದ್ರಗಳ ಮೇಲೆ ದಾಳಿಗೆ ಹೈಕೋರ್ಟ್ ಆದೇಶ
ಶಿವಮೊಗ್ಗ ಪ್ರಕರಣ: ಶಿವಮೊಗ್ಗದ ಆಯನೂರು ತಾಲೂಕಿನ ಚೆನ್ನಹಳ್ಳಿಯಲ್ಲಿ ರೈತರೊಬ್ಬರು ಬೆಳೆದಿದ್ದ ಮೆಕ್ಕೆಜೋಳ ರಕ್ಷಿಸಲು ತಮ್ಮ ಜಮೀನು ಸುತ್ತ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು. ಭದ್ರಾ ಸಂರಕ್ಷಿತ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿದ್ದ ಏಳು ಆನೆಗಳ ಪೈಕಿ ಎರಡು ಗಂಡು ಆನೆಗಳು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದವು. ಈ ಕುರಿತ ವರದಿ 2022ರ ಸೆ.26ರಂದು ಮಾಧ್ಯಮದಲ್ಲಿ ಪ್ರಕಟಗೊಂಡಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಚಾಮರಾಜನಗರದಲ್ಲಿ 36 ಆನೆಗಳು, ಮೈಸೂರಿನಲ್ಲಿ 12, ಕೊಡಗಿನಲ್ಲಿ 10, ಬೆಂಗಳೂರಿನಲ್ಲಿ 7, ಹಾಸನದಲ್ಲಿ 4 ಮತ್ತು ಚಿಕ್ಕಮಗಳೂರಿನಲ್ಲಿ 1 ಆನೆ ಈ ರೀತಿಯಲ್ಲಿ ಸಾವನ್ನಪ್ಪಿವೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಜಮೀನಿಗೆ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಬಗ್ಗೆ ಅರಣ್ಯ ಮತ್ತು ಇಂಧನ ಇಲಾಖೆ ವಿಚಕ್ಷಣಾ ವಿಭಾಗದ ಅಧಿಕಾರಿಗಳು ಹಾಗೂ ಕೆಪಿಟಿಸಿಎಲ್ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅನಧಿಕೃತ ವಿದ್ಯುತ್ ಸಂಪರ್ಕದಿಂದ ವನ್ಯಜೀವಿ ಮತ್ತು ಮನುಷ್ಯರನ್ನು ಸಂರಕ್ಷಣೆ ಮಾಡಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸಲು ವಿಶೇಷ ದಳ ರೂಪಿಸಬೇಕಿದೆ. ಆದ್ದರಿಂದ ಮಾರ್ಗಸೂಚಿ ರೂಪಿಸುವುದಕ್ಕೆ ಉನ್ನತ ಮಟ್ಟದ ಸಮಿತಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
11 ಲಕ್ಷಕ್ಕೆ ಒಪ್ಪದ ವಿಮಾ ಕಂಪನಿ ಈಗ 44 ಲಕ್ಷ ಕೊಡಬೇಕು: ಹೈಕೋರ್ಟ್ ಆದೇಶ
ವಿದ್ಯುತ್ ಪ್ರವಹಿಸಿ ಕಳೆದ ವರ್ಷಗಳಿಂದ ಹುಲಿ, ಆನೆ ಸೇರಿದಂತೆ ಎಷ್ಟುವನ್ಯಜೀವಿಗಳು ಮತ್ತು ಮಾನವರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು. ಇಂತಹ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ವಕೀಲ ಧರ್ಮಪಾಲ್ ವಾದ ಮಂಡಿಸಿದರು.