ಮೀಸಲಾತಿ ನೀಡದ 'ಲಾ ಸ್ಕೂಲ್‌' ವಿರುದ್ಧ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

By Kannadaprabha NewsFirst Published Jan 22, 2023, 8:06 AM IST
Highlights

ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಐಯು)ಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ವಕೀಲರು, ಕನ್ನಡಪರ ಹೋರಾಟಗಾರರು, ಸಂಘ-ಸಂಸ್ಥೆಗಳ ಮುಖಂಡರು ಬೃಹತ್‌ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು (ಜ.22): ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಐಯು)ಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ವಕೀಲರು, ಕನ್ನಡಪರ ಹೋರಾಟಗಾರರು, ಸಂಘ-ಸಂಸ್ಥೆಗಳ ಮುಖಂಡರು ಬೃಹತ್‌ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿ ಶನಿವಾರ ಬೆಳಿಗ್ಗೆ ಜ್ಞಾನಭಾರತಿ ಆವರಣದಲ್ಲಿರುವ ಕುಲಪತಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಬ್ಯಾರಿಕೇಡ್‌ ಹಾಕಿ ಪೊಲೀಸರು ಅಡ್ಡಗಟ್ಟಿದರು. ಆಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಕೊನೆಗೆ ಪೊಲೀಸರು ಕುಲಪತಿಗಳನ್ನು ಕರೆಸಿ ಮನವಿ ಸ್ವೀಕರಿಸಲು ಅವಕಾಶ ನೀಡಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.

ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಜ್ಞಾನಭಾರತಿ ಆವರಣದಲ್ಲಿ ಜಮಾಯಿಸಿದ ವಕೀಲರು, ಕನ್ನಡಪರ ಹೋರಾಟಗಾರರು, ಸಂಘ-ಸಂಸ್ಥೆಗಳ ಮುಖಂಡರು ರಾಜ್ಯದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಿಡಿಕಾರಿ, ಮೀಸಲಾತಿ ಕಲ್ಪಿಸದೇ ಬಿಡುಗಡೆ ಮಾಡಿರುವ 2023-24ನೇ ಸಾಲಿನ ತಾತ್ಕಾಲಿಕ ಪ್ರವೇಶ ಪಟ್ಟಿರದ್ದುಪಡಿಸಬೇಕು ಎಂದು ಆಗ್ರಹಿಸಿದರು. ವಿವಿಯ ಪ್ರವೇಶಾತಿಯಲ್ಲಿ ಕರ್ನಾಟಕದವರಿಗೆ ಶೇ.25ರಷ್ಟುಮೀಸಲಾತಿ ನೀಡಬೇಕಿದ್ದರೂ ಕುಲಪತಿಗಳು ಮೀಸಲಾತಿ ನೀಡದೇ ಅನ್ಯಾಯ ಮಾಡುತ್ತಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ (ರೆಗ್ಯೂಲರ್‌ ಮೆರಿಟ್‌) ಪ್ರವೇಶಕ್ಕೆ ಅರ್ಹರಾಗಿರುವ ವಿದ್ಯಾರ್ಥಿಗಳಿಗೆ ರಾಜ್ಯದ ನಿವಾಸಿ ವಿದ್ಯಾರ್ಥಿಗಳಿಗೆ ನೀಡುವ ಮೀಸಲಾತಿಯಲ್ಲಿ ಪ್ರವೇಶ ನೀಡಿ ರಾಜ್ಯದ ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿದೆ ಎಂದು ದೂರಿದರು.

ಯತ್ನಾಳ್‌ಗೆ ಬಿಜೆಪಿಯ ಶಿಸ್ತುಸಮಿತಿ ಬುಲಾವ್‌, ವಿವರಣೆ ಪಡೆದು ಕ್ರಮ: ನಳಿನ್‌ ಕಟೀಲ್‌

ಸದಸ್ಯರ ಸಂಖ್ಯೆ ಕಡಿತಗೊಳಿಸಲು ಆಗ್ರಹ: ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್‌ ಮಾತನಾಡಿ, ಯೂನಿವರ್ಸಿಟಿಯ ಕಾರ್ಯಕಾರಿ ಮಂಡಳಿ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಬೇರೆ ರಾಜ್ಯದವರು ಸ್ಥಾನ ಪಡೆದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ. ಆದ್ದರಿಂದ ಸುಪ್ರೀಂಕೋರ್ಚ್‌ ಮುಖ್ಯ ನ್ಯಾಯಮೂರ್ತಿಗಳ ಜೊತೆಗೆ ಮತ್ತೊಬ್ಬರು ನ್ಯಾಯಮೂರ್ತಿ, ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸೀಮಿತ ಸಂಖ್ಯೆಯ ಮಂಡಳಿ ರಚನೆಯಾಗಬೇಕು ಎಂದು ಆಗ್ರಹಿಸಿದರು. ಹೈದರಾಬಾದ್‌, ಕೊಲ್ಕೊತ್ತಾ, ವಿಶಾಖಪಟ್ಟಣಂ, ರಾಯಪುರದಲ್ಲಿರುವ ವಿವಿಗಳಲ್ಲಿ ಆಯಾ ರಾಜ್ಯದ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಆದರೆ ಬೆಂಗಳೂರಿನಲ್ಲಿರುವ ವಿವಿಯಲ್ಲಿ ಮಾತ್ರ ನಿಯಮ ಪಾಲನೆ ಮಾಡುತ್ತಿಲ್ಲ. ಇದರಿಂದ ರಾಜ್ಯದ ವಿದ್ಯಾರ್ಥಿಗಳು ಸೀಟು ಪಡೆಯದೆ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಪೊಲೀಸರೊಂದಿಗೆ ವಾಗ್ವಾದ: ಬಳಿಕ ಪ್ರತಿಭಟನಾಕಾರರು ಕುಲಪತಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟು ದಾರಿಗೆ ಅಡ್ಡವಾಗಿ ಪೊಲೀಸರು ಇಟ್ಟಿದ್ದ ಬ್ಯಾರಿಕೇಡ್‌ಗಳನ್ನು ಉರುಳಿಸಲು ಮುಂದಾದರು. ಇದಕ್ಕೆ ಪೊಲೀಸರು ತಡೆಯೊಡ್ಡಿದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ನಂತರ ಕುಲಪತಿ ಸುಧೀರ್‌ ಕೃಷ್ಣಸ್ವಾಮಿ ಅವರನ್ನು ಸ್ಥಳಕ್ಕೆ ಕರೆಸುವುದಾಗಿ ಭರವಸೆ ನೀಡಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪೊಲೀಸ್‌ ಭದ್ರತೆಯಲ್ಲಿ ಸ್ಥಳಕ್ಕಾಗಮಿಸಿದ ಸುಧೀರ್‌ ಕೃಷ್ಣಸ್ವಾಮಿ, ನಿಮ್ಮ ಬೇಡಿಕೆಗಳನ್ನು ಕಾರ್ಯಕಾರಿ ಮಂಡಳಿಯ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್‌ ಪಡೆಯಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್‌ ನಗರ ಘಟಕದ ಅಧ್ಯಕ್ಷ ಪ್ರಕಾಶ್‌ಮೂರ್ತಿ, ಮುಖಂಡ ಮಾವಳ್ಳಿ ಶಂಕರ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಿಜೆಐಗೆ ವಕೀಲರ ಪತ್ರ: ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟುಮೀಸಲಾತಿ ನೀಡುತ್ತಿಲ್ಲ. ಬೇರೆ 8 ರಾಷ್ಟ್ರೀಯ ಕಾನೂನು ವಿವಿಗಳಿರುವ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ನಿಯಮಗಳಂತೆ ಮೀಸಲಾತಿ ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಮಾತ್ರ ಇದು ಪಾಲನೆಯಾಗುತ್ತಿಲ್ಲ. ಆದ್ದರಿಂದ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸುಪ್ರೀಂ ಕೋರ್ಚ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್‌, ಪ್ರಧಾನ ಕಾರ್ಯದರ್ಶಿ ಎ.ಎನ್‌.ಗಂಗಾಧರಯ್ಯ ಮತ್ತಿತರರು ಪತ್ರ ಬರೆದಿದ್ದಾರೆ.

ಕನಕಪುರ ಬಾಲಕ ನಾಪತ್ತೆ ಪ್ರಕರಣ: ಬ್ರೈನ್‌ ಮ್ಯಾಪಿಂಗ್‌ನಿಂದ ಕೊಲೆ ರಹಸ್ಯ ಬಯಲು

ಬೇಡಿಕೆಗಳನ್ನು ಕಾರ್ಯಕಾರಿ ಮಂಡಳಿಯ ಗಮನಕ್ಕೆ ತರಲಾಗುವುದು. ಮಂಡಳಿಯು ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸಲಿದೆ.
-ಸುಧೀರ್‌ ಕೃಷ್ಣಸ್ವಾಮಿ, ಎನ್‌ಎಲ್‌ಎಸ್‌ಐಯು ಕುಲಪತಿ

ಕನ್ನಡ ಮತ್ತು ಕನ್ನಡಿಗರ ಹಿತಕ್ಕೆ ಧಕ್ಕೆಯಾದರೂ ರಾಜ್ಯದ ಸಂಸದರು ತುಟಿ ಬಿಚ್ಚುತ್ತಿಲ್ಲ. ಜಿಎಸ್‌ಟಿ ಹಂಚಿಕೆ, ನೆರೆ ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ತಾರತಮ್ಯಮಾಡಲಾಗುತ್ತಿದ್ದರೂ ಸಂಸದರು ವಿರೋಧವನ್ನೇ ವ್ಯಕ್ತಪಡಿಸದಿರುವುದು ಖಂಡನೀಯ.
-ರಘು ಜಾಣಗೆರೆ, ಕೆಆರ್‌ಎಸ್‌ ಪಕ್ಷದ ಯುವ ಘಟಕದ ಅಧ್ಯಕ್ಷ

click me!