ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ಪಡಿತರ ಅಕ್ಕಿ ವಿತರಣೆ ಪ್ರಮಾಣವನ್ನು ಮತ್ತೆ 10 ಕೆ.ಜಿ.ಗೆ (ಹಾಲಿ 5 ಕೆ.ಜಿ.) ಹೆಚ್ಚಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ.
ವಿ.ಮಂಜುನಾಥ್ ಸೂಲಿಬೆಲೆ
ಹೊಸಕೋಟೆ (ಜ.22): ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ಪಡಿತರ ಅಕ್ಕಿ ವಿತರಣೆ ಪ್ರಮಾಣವನ್ನು ಮತ್ತೆ 10 ಕೆ.ಜಿ.ಗೆ (ಹಾಲಿ 5 ಕೆ.ಜಿ.) ಹೆಚ್ಚಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ರಾಗಿಯ ರಾಶಿಗೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬರುತ್ತಿದ್ದ ಪಡಿತರ ಸ್ಥಗಿತವಾದ ಕಾರಣ ಪಡಿತರ ವಿತರಣೆ ಪ್ರಮಾಣ ಇಳಿಕೆಯಾಗಿದೆ. ಪುನಃ ಈ ಪ್ರಮಾಣ ಹೆಚ್ಚಿಸಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಬಡ ನಿವೇಶನ ರಹಿತರ ಹಕ್ಕುಗಳನ್ನು ಕಾಯಲು ಸರ್ಕಾರ ಬದ್ಧವಾಗಿದೆ. ಸರ್ಕಾರಿ ಜಮೀನು ಹಾಗೂ ಅರಣ್ಯದಂಚಿನ ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಅರ್ಹ ಬಡವರನ್ನು ಎತ್ತಂಗಡಿ ಮಾಡಲು ಸರ್ಕಾರ ಅವಕಾಶ ನೀಡುವುದಿಲ್ಲ. 94ಸಿ ಹಾಗೂ 94 ಸಿಸಿ ಅಡಿ ಅವರು ಅರ್ಜಿ ನೀಡಿದರೆ ನಿವೇಶನದ ಹಕ್ಕುಗಳನ್ನು ನೀಡಲಾಗುವುದು ಎಂದರು.
ಯತ್ನಾಳ್‌ಗೆ ಬಿಜೆಪಿಯ ಶಿಸ್ತುಸಮಿತಿ ಬುಲಾವ್, ವಿವರಣೆ ಪಡೆದು ಕ್ರಮ: ನಳಿನ್ ಕಟೀಲ್
ಸಂಪರ್ಕ ಸೇತುವೆ: ರಾಜ್ಯ ಸರ್ಕಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ನಡೆಸುವ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದಿಂದ ಅಧಿಕಾರಿಗಳ ಪರಿಚಯದ ಜೊತೆಗೆ ಗ್ರಾಮಗಳ ಚಿತ್ರಣ ಬದಲಾಗಿ, ಸಾರ್ವಜನಿಕರ ಹಾಗೂ ಅಧಿಕಾರಿಗಳ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.
ಸರ್ಕಾರ ಈ ಕಾರ್ಯಕ್ರಮ ಅನುಷ್ಠಾನಕ್ಕೆ ತರುವ ಮೊದಲು ಆಯಾ ಜಿಲ್ಲೆಯ ಜನರಿಗೆ ಜಿಲ್ಲಾಧಿಕಾರಿ ಯಾರೆಂದೇ ತಿಳಿಯದ ಪರಿಸ್ಥಿತಿ ಇತ್ತು. ಸವಲತ್ತುಗಳಿಗೆ ಅರ್ಜಿ ಸಲ್ಲಿಸಲು ಕೆಲಸ ಕಾರ್ಯ ಬಿಟ್ಟು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿತ್ತು. ಇಲ್ಲವಾದಲ್ಲಿ ಮಧ್ಯವರ್ತಿಗಳ ಕೈಗೆ ಅರ್ಜಿ ಕೊಡಬೇಕಿತ್ತು. ಇಂಥ ಸಮಸ್ಯೆಗಳಿಗೆ ಮುಕ್ತಿ ಕೊಡಿಸಿ ಎಲ್ಲಾ 29 ಇಲಾಖೆಗಳ ಸವಲತ್ತುಗಳನ್ನು ಗ್ರಾಪಂ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಕಂದಾಯ ಸಚಿವರು ಬದಲಾಗಬಹುದು. ಆದರೆ ಜಿಲ್ಲಾಧಿಕಾರಿಗಳು ನಿರಂತರವಾಗಿ ಇರುತ್ತಾರೆ. ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂಬ ಮಹತ್ವಾಕಾಂಕ್ಷೆಯಿಂದ ‘ಜಿಲ್ಲಾಕಾರಿಗಳ ನಡೆ ಹಳ್ಳಿ ಕಡೆ’ ಶೀರ್ಷಿಕೆ ನೀಡಲಾಗಿದೆ. ಈ ಕಾರ್ಯಕ್ರಮ ಇರದಿದ್ದರೆ ಯಾವುದೇ ಜಿಲ್ಲಾಧಿಕಾರಿಗಳು ಗ್ರಾಮಗಳಿಗೆ ಬಂದು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಿರಲಿಲ್ಲ. ರಾಜ್ಯದ ಎಲ್ಲಾ ಕಡೆ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಅನೇಕ ಸೌಕರ್ಯಗಳು ಬಡ, ಅರ್ಹ ಫಲಾನುಭವಿಗಳಿಗೆ ಅವರಿರುವ ಕಡೆಗಳಲ್ಲೇ ದೊರೆಯುತ್ತಿವೆ ಎಂದರು.
15 ಗ್ರಾಮ ವಾಸ್ತವ್ಯ: ಈವರೆಗೆ ಸುಮಾರು 15 ಗ್ರಾಮವಾಸ್ತವ್ಯ ಕೈಗೊಳ್ಳಲಾಗಿದ್ದು, ಸುಮಾರು 1 ಲಕ್ಷ 18 ಸಾವಿರಕ್ಕೂ ಅಕ ಫಲಾನುಭವಿಗಳಿಗೆ ವೈಯಕ್ತಿಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಹೊಸಕೋಟೆಗೂ ಮೆಟ್ರೋ ರೈಲು, ಕಾವೇರಿ ನೀರು!: ಬೆಂಗಳೂರಿಗೆ ಹೊಂದಿಕೊಂಡು ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಹೊಸಕೋಟೆಯವರೆಗೂ ಮುಂಬರುವ ದಿನಗಳಲ್ಲಿ ಮೆಟ್ರೋ ರೈಲು ವಿಸ್ತರಣೆ ಹಾಗೂ ಕಾವೇರಿ ನೀರು ಪೂರೈಕೆ ವಿಸ್ತರಣೆ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಅಶೋಕ್ ಇದೇ ವೇಳೆ ಭರವಸೆ ನೀಡಿದರು.
ಜಡಿಗೇನಹಳ್ಳಿ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯಕ್ಕಾಗಿ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಬೆಂಗಳೂರಿನಿಂದ ಆಗಮಿಸಿದ ಸಚಿವರು ಮೊದಲಿಗೆ ಗ್ರಾಮದ ಶ್ರೀಅಭಯ ಆಂಜನೇಯಸ್ವಾಮಿ ಹಾಗೂ ಐತಿಹಾಸಿಕ ಶ್ರೀಚಂದ್ರಮೌಳೇಶ್ವರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು. ನಂತರ ಅಲಕೃಂತ ಟ್ರಾಕ್ಟರ್ ಏರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಚಿತ್ತಾಕರ್ಷಕ ಕಲಾತಂಡಗಳ ಮೆರಗಿನೊಂದಿಗೆ ಸಚಿವರನ್ನು ಮೆರವಣಿಗೆಯ ಮೂಲಕ ಕಾರ್ಯಕ್ರಮದ ವೇದಿಕೆಯತ್ತ ಕರೆತರಲಾಯಿತು.
ಚಂಡೆ ಮದ್ದಳೆ, ತಮಟೆ, ಡೊಳ್ಳು, ಕೀಲುಕುದುರೆ, ಮರಗಾಲು, ಬೊಂಬೆ ಕುಣಿತ, ಮಹಿಳೆಯರ ವೀರಗಾಸೆ, ಪಟ ಕುಣಿತ, ಪೂಜಾ ಕುಣಿತ ಮೊದಲಾದ ಜನಪದ ಕಲಾತಂಡಗಳ ಮೆರವಣಿಗೆ ನೆರೆದ ಜಸಮೂಹವನ್ನು ಆಕರ್ಷಿಸಿತು. ಈ ವೇಳೆ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜ್, ಶಾಸಕ ಶರತ್ ಬಚ್ಚೇಗೌಡ, ಜಿಲ್ಲಾಧಿಕಾರಿ ಆರ್.ಲತಾ ಇತರರಿದ್ದರು.
ಕೃಷಿಗೆ ಔಟ್‌ಲುಕ್ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಬೇಕು: ಸಿಎಂ ಬೊಮ್ಮಾಯಿ
28 ಸಾವಿರ ಮಂದಿಗೆ ಸೌಲಭ್ಯಗಳ ವಿತರಣೆ: ವಿಕಲಚೇತನರಿಗೆ ಕೃತಕ ಕಾಲುಗಳ ಜೋಡಣೆ, ಗಾಲಿ ಖುರ್ಚಿಗಳು, ಮುಜರಾಯಿ ಇ-ಸ್ವತ್ತು ದಾಖಲೆಗಳು, 94ಸಿ ಹಾಗೂ 94 ಸಿಸಿ ಅಡಿ ಅಕ್ರಮ-ಸಕ್ರಮ ಹಕ್ಕು ಪತ್ರಗಳು, ಮಾಜಿ ಸೈನಿಕರಿಗೆ ನಿವೇಶನ, ಹೊಸಕೋಟೆ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಉಚಿತ ವಸತಿ ಸೌಕರ್ಯ ಕಲ್ಪಿಸಲು ಗುರುತಿಸಿರುವ 20 ಗುಂಟೆ ನಿವೇಶನದ ವರ್ಗಾವಣೆ, ಇಂದಿರಾ ಗಾಂಧಿ ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ ವೇತನ, ವಿವಿಧ ಮಾಸಾಶನಗಳ ಮಂಜೂರಾತಿ ಸೇರಿ ಸುಮಾರು 28 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಈ ವೇಳೆ ವಿತರಿಸಲಾಯಿತು.
ಹಸು ವಿತರಣೆ: ಹೈನುಗಾರಿಕೆಗೆ ಉತ್ತೇಜಿಸಲು ಹಾಗೂ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಮೃತ ಸಿರಿ ಯೋಜನೆಯಡಿ ನೀಡಿದ ಏಳು ಮಿಶ್ರತಳಿ ಜರ್ಸಿ ಕರುಗಳನ್ನು ಸಚಿವರು ಫಲಾನುಭವಿಗಳಿಗೆ ಇದೇ ವೇಳೆ ಹಸ್ತಾಂತರಿಸಿದರು.