ಕನಕಪುರ ಬಾಲಕ ನಾಪತ್ತೆ ಪ್ರಕರಣ: ಬ್ರೈನ್ ಮ್ಯಾಪಿಂಗ್‌ನಿಂದ ಕೊಲೆ ರಹಸ್ಯ ಬಯಲು
ಕನಕಪುರದ ವಕೀಲ ಹಾಗೂ ಆತನ ಗೆಳೆಯ ಕಳೆದ ಎಂಟು ತಿಂಗಳ ಹಿಂದೆ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ನಿಗೂಢವಾಗಿ ಮಾಡಿದ್ದ ಬಾಲಕನ ‘ಹತ್ಯೆ ರಹಸ್ಯ’ವನ್ನು ಬ್ರೈನ್ ಎಲೆಕ್ಟ್ರಿಕಲ್ ಆಸಿಲೇಶನ್ ಸಿಗ್ನೇಚರ್ ಪ್ರೊಫೈಲಿಂಗ್ (ಬಿಇಓಎಸ್) ಅಥವಾ ಮೆದುಳು ಪರೀಕ್ಷೆ (ಬ್ರೈನ್ ಮ್ಯಾಫಿಂಗ್) ಮೂಲಕ ರಾಮನಗರ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಜ.22): ಕನಕಪುರದ ವಕೀಲ ಹಾಗೂ ಆತನ ಗೆಳೆಯ ಕಳೆದ ಎಂಟು ತಿಂಗಳ ಹಿಂದೆ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ನಿಗೂಢವಾಗಿ ಮಾಡಿದ್ದ ಬಾಲಕನ ‘ಹತ್ಯೆ ರಹಸ್ಯ’ವನ್ನು ಬ್ರೈನ್ ಎಲೆಕ್ಟ್ರಿಕಲ್ ಆಸಿಲೇಶನ್ ಸಿಗ್ನೇಚರ್ ಪ್ರೊಫೈಲಿಂಗ್ (ಬಿಇಓಎಸ್) ಅಥವಾ ಮೆದುಳು ಪರೀಕ್ಷೆ (ಬ್ರೈನ್ ಮ್ಯಾಫಿಂಗ್) ಮೂಲಕ ರಾಮನಗರ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ದಲ್ಲಿರುವ ಹೊಸ ತಂತ್ರಜ್ಞಾನ ಬಿಇಓಎಸ್ ಬಳಸಿಕೊಂಡು ಪತ್ತೆಹಚ್ಚಿದ ಮೊದಲ ಅಪರಾಧ ಪ್ರಕರಣ ಇದಾಗಿದೆ.
ರಾಮನಗರ ಜಿಲ್ಲೆ ಕನಕಪುರದ ನಿವಾಸಿ 17 ವರ್ಷದ ಬಾಲಕನ ಹತ್ಯೆಯಾದ ದುರ್ವೈವಿ. ಈ ಕೊಲೆ ರಹಸ್ಯವನ್ನು ಮೆದುಳು ಪತ್ತೆ ಪರೀಕ್ಷೆಯಲ್ಲಿ ಆರೋಪಿಯಾದ ವಕೀಲ ಶಂಕರೇಗೌಡ (40) ಹಾಗೂ ಆತನ ಸಹಚರ ಅರುಣ್ (24)ನಿಂದ ಹೊರ ತೆಗೆಯಲಾಗಿದೆ. ಈ ತಾಂತ್ರಿಕ ಪುರಾವೆ ಲಭ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳ ಮೇಲೆ ಐಪಿಸಿ 377 (ಅಸಹಜ ಲೈಂಗಿಕ ಕ್ರಿಯೆ) ಜೊತೆಗೆ ಐಪಿಸಿ 302 (ಕೊಲೆ) ಸೆಕ್ಷನ್‌ನಡಿ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪಿಪಟ್ಟಿ ಸಲ್ಲಿಸುತ್ತೇವೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಸ್ಯಾಂಟ್ರೋ ರವಿಯಿಂದ ನನಗೆ ಮಾರಕ ಸೋಂಕು: ಪತ್ನಿಯಿಂದ ಹೇಳಿಕೆ
ಎರಡು ತಿಂಗಳ ಹಿಂದೆ ಬೆಂಗಳೂರಿನ ಮಡಿವಾಳದಲ್ಲಿರುವ ಎಫ್‌ಎಸ್‌ಎಲ್‌ನಲ್ಲಿ ಅಪರಾಧ ಪ್ರಕರಣಗಳ ಆರೋಪಿಗಳಿಂದ ಮಾಹಿತಿ ಕಲೆ ಹಾಕಲು ಬಿಇಓಎಸ್ ತಾಂತ್ರಿಕ ವ್ಯವಸ್ಥೆ ಯನ್ನು ರಾಜ್ಯ ಪೊಲೀಸ್ ಇಲಾಖೆಗೆ ಆರಂಭಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಎಸ್ಪಿ ಸಂತೋಷ್ ಬಾಬು ಅವರು, ಕಳೆದ ಮೇ ತಿಂಗಳಲ್ಲಿ ಕನಕಪುರ ನಗರದಲ್ಲಿ ನಡೆದಿದ್ದ 17 ವರ್ಷ ಬಾಲಕನ ನಿಗೂಢ ನಾಪತ್ತೆ ಪ್ರಕರಣದ ಪತ್ತೆಗೆ ಬಿಇಓಎಸ್ ಬಳಸಿಕೊಂಡು ಯಶಸ್ಸು ಕಂಡಿದ್ದಾರೆ.
ಕಚೇರಿಗೆ ಕರೆದು ಪ್ರಜ್ಞೆ ತಪ್ಪಿಸಿ ಸೆಕ್ಸ್?: ಹಲವು ವರ್ಷಗಳಿಂದ ಆರೋಪಿ ಶಂಕರೇಗೌಡನಿಗೆ ಮೃತ ಬಾಲಕನ ಪರಿಚಯವಿತ್ತು. ತನ್ನ ತಾಯಿ ಜತೆ ನೆಲೆಸಿದ್ದ ಬಾಲಕ, ಸಣ್ಣಪುಟ್ಟಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹೀಗಿರುವಾಗ 2022ರ ಮೇ 19 ರಂದು ತನ್ನ ಕಚೇರಿಯಲ್ಲಿ ಕೆಲಸವಿದೆ ಎಂದು ಹೇಳಿ ಬಾಲಕನನ್ನು ವಕೀಲ ಶಂಕರೇಗೌಡ ಕರೆಸಿಕೊಂಡಿದ್ದ. ಬಳಿಕ ಆತನಿಗೆ ಮತ್ತು ಭರಿಸುವ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಲೈಂಗಿಕವಾಗಿ ವಕೀಲ ಶೋಷಿಸಿದ್ದ. ಅಲ್ಲದೆ ಆತನ ಸಂಗಾತಿ ಅರುಣ್ ಕೂಡ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಇದಾದ ನಂತರ ಬಾಲಕ ದಿಢೀರ್ ಮಾಯವಾಗಿದ್ದ.
ಇತ್ತ ವಕೀಲರ ಕಚೇರಿಗೆ ಕೆಲಸಕ್ಕೆ ಎಂದು ಹೋದ ಮಗ ಮನೆಗೆ ಬಾರದೆ ಹೋದಾಗ ಆತಂಕಗೊಂಡ ಮೃತನ ತಾಯಿ, ಮೇ.22 ರಂದು ಕನಕಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಐಪಿಸಿ 377 (ಅಸ್ವಾಭಾವಿಕ ಲೈಂಗಿಕ ಕ್ರಿಯೆ) ಹಾಗೂ ಬೆದರಿಕೆ ಆರೋಪಗಳಡಿ ವಕೀಲ ಶಂಕರೇಗೌಡ ಹಾಗೂ ಆತನ ಸಹಚರ ಅರುಣ್ ಬಂಧಿಸಿದ್ದರು. ಆದರೆ ವಿಚಾರಣೆಗೆ ಬಾಲಕನ ನಾಪತ್ತೆ ಬಗ್ಗೆ ಆರೋಪಿಗಳು ಬಾಯ್ಬಿಡಲಿಲ್ಲ ಎಂದು ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ. ಕೊನೆಗೆ ಆರೋಪಿಗಳ ಮೇಲೆ ಐಪಿಸಿ 377ರಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿ ಬಾಲಕನ ಪತ್ತೆಗೆ ತನಿಖೆ ಮುಂದುವರೆಸಲಾಯಿತು.
ತನಿಖೆ ವೇಳೆ ಬಾಲಕನ ಕೊಲೆಯಾಗಿರುವ ಬಗ್ಗೆ ಸುಳಿವು ಸಿಕ್ಕಿತು. ಆದರೆ ಮೃತದೇಹ ಪತ್ತೆಯಾಗದೆ ಕೊಲೆ ಖಚಿತವಾಗಲಿಲ್ಲ. ಇತ್ತ ಆರೋಪಿಗಳು ಕೂಡ ಬಾಲಕನ ಕಣ್ಮರೆ ಬಗ್ಗೆ ಬಾಯಿ ಬಿಡಲಿಲ್ಲ. ಇದರಿಂದ ಪ್ರಕರಣ ವು ಸವಾಲಾಗಿ ಪರಿಣಿಸಿತು. ಹೀಗಿರುವಾಗ ಆರು ತಿಂಗಳ ಬಳಿಕ ಎಫ್‌ಎಸ್‌ಎಲ್‌ನಲ್ಲಿ ಬಿಓಇಎಸ್ ಎಂಬ ಹೊಸ ತಂತ್ರಜ್ಞಾನ ಅಳವಡಿಕೆ ಬಗ್ಗೆ ಮಾಹಿತಿ ಸಿಕ್ಕಿತು. ಕೂಡಲೇ ಆ ಪರೀಕ್ಷೆ ಗೆ ಆರೋಪಿಗಳನ್ನು ಒಳಪಡಿಸಿದಾಗ ಬಾಲಕನ ಕೊಲೆಗೆ ವೈಜ್ಞಾನಿಕ ಪುರಾವೆ ಸಿಕ್ಕಿದೆ. ನೀರಿನಲ್ಲಿ ಮುಳುಗಿಸಿ ಬಾಲಕನ ಹತ್ಯೆ ನಡೆಸಲಾಗಿದೆ ಎಂಬುದು ಗೊತ್ತಾಯಿತು ಎಂದು ಎಸ್ಪಿ ಹೇಳಿದ್ದಾರೆ.
ಏನಿದು ಮೆದಳು ಪತ್ತೆ ಪರೀಕ್ಷೆ: ಇಂತಹ ಪ್ರಕರಣಗಳಲ್ಲಿ ಈ ಮೊದಲು ಬ್ರೈನ್ ಮ್ಯಾಫಿಂಗ್ ಸಂಬಂಧ ಗುಜರಾತ್‌ನ ಅಹಮದಬಾದ್‌ನ ಎಫ್‌ಎಸ್‌ಎಲ್‌ಗೆ ಆರೋಪಿಗಳನ್ನು ರಾಜ್ಯ ಪೊಲೀಸರು ಕರೆದೊಯ್ಯುತ್ತಿದ್ದರು. ಇದೀಗ ರಾಜ್ಯದಲ್ಲಿ ಮೆದುಳಿನ ಫಿಂಗರ್ ಪ್ರಿಂಟಿಂಗ್ ಎಂದು ಕರೆಯಲಾಗುವ ಬಿಇಓಎಸ್ ವೈಜ್ಞಾನಿಕ ಪರೀಕ್ಷಾ ವಿಧಾನ ಪರಿಚಯಿಸಲಾಗಿದೆ. ಇದು ಇಇಜಿ (ಎಲೆಕ್ಟ್ರೋ ಎನ್ಸೆಫೆಲೋಗ್ರಾಮ) ಆಧಾರಿತ ತಂತ್ರಜ್ಞಾನದ ಮೂಲಕ ಮೆದುಳಿನಲ್ಲಿ ಸಂಗ್ರಹವಾಗಿರುವ ಅಪರಾಧಕ್ಕೆ ಸಂಬಧಿಸಿದ ಅನುಭವದ ಜ್ಞಾನ ಮತ್ತು ಭಾಗವಹಿಸುವಿಕೆಯನ್ನು ಪತ್ತೆ ಹಚ್ಚುತ್ತದೆ. ಈ ಪರೀಕ್ಷೆಯು ಆರೋಪಿ ಅಥವಾ ಶಂಕಿತರ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ. ಈ ಪರೀಕ್ಷೆಗೆ ಆರೋಪಿಗಳ ಸ್ವಯಂ ಒಪ್ಪಿಗೆ ಸಹ ಇರುತ್ತದೆ. ಯಾವುದೇ ರೀತಿಯ ರಾಸಾಯನಿಕ ಚುಚ್ಚುಮದ್ದು ನೀಡುವುದಿಲ್ಲ. ಅಲ್ಲದೆ ಈ ಪರೀಕ್ಷೆಯು ಅಕ್ರಮಣಕಾರಿಯಾಗಿ ನಡೆಯುವುದಿಲ್ಲ. ವ್ಯಕ್ತಿಗೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ. ನ್ಯಾಯಾಲಯದ ಅನು ಮತಿ ಪತ್ರದ ಮೇರೆಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Grama Vastavya: ಜನರಿಗೆ ಮತ್ತೆ 10 ಕೆ.ಜಿ ಪಡಿತರ ಅಕ್ಕಿ: ಸಚಿವ ಅಶೋಕ್
ಕನಕಪುರದ ಅಪ್ರಾಪ್ತ ಬಾಲಕ ನಿಗೂಢ ಕೊಲೆಯನ್ನು ಎಫ್‌ಎಸ್‌ಎಲ್‌ನಲ್ಲಿ ಬಿಇಓಎಸ್ ಪರೀಕ್ಷೆಗೆ ಆರೋಪಿಗಳನ್ನು ಒಳಪಡಿಸಿ ಪತ್ತೆ ಹಚ್ಚಿದ್ದೇವೆ. ಇದೂ ತನಿಖೆಗೆ ಮಹತ್ವದ ವೈಜ್ಞಾನಿಕ ವರದಿಯಾಗಿದ್ದು, ರಾಜ್ಯದಲ್ಲೇ ಬಿಇಓಎಸ್ ಮೂಲಕ ಪತ್ತೆಯಾದ ಮೊದಲ ಪ್ರಕರಣವಾಗಿದೆ.
-ಕೆ.ಸಂತೋಷ್ ಬಾಬು ಎಸ್ಪಿ, ರಾಮನಗರ ಜಿಲ್ಲೆ