
, ವಿಧಾನಸಭೆ (ಜು.14) : ‘ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ರಾಜಕೀಯ ಅಸೂಯೆಯಿಂದ ಹಣ ನೀಡಿದರೂ ಹೆಚ್ಚುವರಿ ಅಕ್ಕಿ ನೀಡಿಲ್ಲ. ಬಡವರ ಅಕ್ಕಿ ಕಿತ್ತುಕೊಂಡ ಬಿಜೆಪಿಗೆ ನಾಚಿಕೆಯಾಗಬೇಕು’ ಎಂದು ಕಾಂಗ್ರೆಸ್ ಸರ್ಕಾರ ಆರೋಪಿಸಿದರೆ, ‘ಕೇಂದ್ರ ನೀಡಿರುವ ಅಕ್ಕಿಯಲ್ಲೂ 2 ಕೆಜಿ ಕಡಿತ ಮಾಡಿ 3 ಕೇಜಿ ಮಾತ್ರ ನೀಡುತ್ತಿರುವ ನಿಮಗೆ ನಾಚಿಕೆಯಾಗಬೇಕು’ ಎಂದು ಬಿಜೆಪಿ ತಿರುಗೇಟು ನೀಡಿದೆ.
ವಿಧಾನಸಭೆಯಲ್ಲಿ ಈ ಅನ್ನಭಾಗ್ಯ ಅಕ್ಕಿ ಬಗ್ಗೆ ಉಭಯ ಪಕ್ಷಗಳ ನಡುವೆ ಗದ್ದಲದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಘಟನೆಯೂ ನಡೆಯಿತು.
ಮೊದಲಿಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸ್ತುತ ಆಹಾರ ಭದ್ರತಾ ಕಾಯ್ದೆಯಡಿ 5 ಕೆ.ಜಿ. ಕೇಂದ್ರ ಸರ್ಕಾರ 360 ಲಕ್ಷ ಟನ್ ನೀಡಬೇಕು. ಜತೆಗೆ 5 ಕೆ.ಜಿ. ಹೆಚ್ಚುವರಿಯಾಗಿ ಸೇರಿ ಒಟ್ಟು 10 ಕೆಜಿ ಅಕ್ಕಿ ನೀಡಲು ಹೆಚ್ಚುವರಿಯಾಗಿ 220 ಲಕ್ಷ ಟನ್ ಅಕ್ಕಿ ಕೇಳಿದ್ದೆವು. ಇದಕ್ಕೆ ಕೆಜಿಗೆ 34 ರು.ಗಳಂತೆ ಹಣ ನೀಡುವುದಾಗಿಯೂ ಹೇಳಿದ್ದೆವು. ನಮಗೆ ಅಕ್ಕಿ ನೀಡದೆ ಕಡಿಮೆ ದರಕ್ಕೆ ಖಾಸಗಿಯವರಿಗೆ ನೀಡುತ್ತಿದ್ದಾರೆ. ಆ ಮೂಲಕ ರಾಜ್ಯದ ಬಡವರಿಗೆ ದ್ರೋಹ ಮಾಡಿದ ಬಿಜೆಪಿಗೆ ನಾಚಿಕೆಯಾಗಬೇಕು. ಬಡವರ ಅನ್ನ ಕಿತ್ತುಕೊಂಡಿದ್ದಾರೆ ಎಂದು ಬಿಜೆಪಿಯನ್ನು ಉದ್ದೇಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅನ್ನಭಾಗ್ಯ ಅಕ್ಕಿ ಕುಟ್ಟಿ ಪುಡಿ ಮಾಡಿ ರಂಗೋಲಿಗೆ ಬಳಕೆ!
ಬೇರೆ ರಾಜ್ಯಗಳಿಂದ ಅಕ್ಕಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೇಂದ್ರ ಅಕ್ಕಿ ನೀಡಿಲ್ಲ ಎಂದು ಕೊಟ್ಟಮಾತಿಗೆ ತಪ್ಪದೆ ತಾತ್ಕಾಲಿಕವಾಗಿ ಪ್ರತಿಯೊಬ್ಬರಿಗೆ 170 ರು.ಗಳಂತೆ ಹಣ ನೀಡುತ್ತಿದ್ದೇವೆ. ತನ್ಮೂಲಕ ನುಡಿದಂತೆ ನಡೆಯುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಅಶೋಕ್ ತಿರುಗೇಟು:
ಈ ವೇಳೆ ಬಿಜೆಪಿ ಸದಸ್ಯ ಆರ್. ಅಶೋಕ್, ‘ನೀವು ಅನ್ನಭಾಗ್ಯ ಯೋಜನೆ ಯಾರನ್ನು ಕೇಳಿ ಘೋಷಣೆ ಮಾಡಿದ್ದಿರಿ. ಅರ್ಜಿ ಹಾಕಿದ ಕೂಡಲೇ ಅಕ್ಕಿ ಕೊಡಲು ಕೇಂದ್ರ ನಿಮ್ಮ ಅತ್ತೆ ಮನೆಯೇ? ಘೋಷಣೆ ಮಾಡುವ ಮೊದಲು ನೀವು ಮೋದಿಯನ್ನು ಕೇಳಿದ್ದಿರಾ?’ ಎಂದು ಗರಂ ಆದರು.
ಇದಕ್ಕೆ ಸಿದ್ದರಾಮಯ್ಯ, ‘ತಾಳ್ಮೆಯಿಂದ ಮಾತನಾಡಪ್ಪ ಅಶೋಕ್. ನಾನು ಮೋದಿ ಹೆಸರೇ ಹೇಳಿಲ್ಲ. ನಮಗೆ ಆಗಿರುವ ಅನ್ಯಾಯವನ್ನು ಹೇಳಿದ್ದೇನೆ. ನೀವು ಇನ್ನೂ ರಾಜ್ಯದ ಬಡವರ ಪರವಾಗಿ ಧ್ವನಿ ಎತ್ತಬೇಕು’ ಎಂದು ಟೀಕಿಸಿದರು.
ಅಕ್ಕಿ ಕಡಿತ ಮಾಡಿದ ನಿಮಗೆ ನಾಚಿಕೆಯಾಗಬೇಕು: ಬೊಮ್ಮಾಯಿ
ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆ ಪ್ರಕಾರ ಐದು ಕೆಜಿ ಅಕ್ಕಿ ಕೊಟ್ಟಿದ್ದು, ನೀವು ಮೂರು ಕೆಜಿ ಕೊಡುತ್ತಿದ್ದೀರಿ. ನಿಮಗೆ ಮೊದಲು ನಾಚಿಕೆಯಾಗಬೇಕು’ ಎಂದು ವಾಗ್ದಾಳಿ ನಡೆಸಿದರು.
‘ಅಕ್ಕಿ ಕೇಳಲಿಕ್ಕೆ ಕೇಂದ್ರ ಸರ್ಕಾರದ ಜತೆ ಮಾತನಾಡದೇ ಡೆಪ್ಯುಟಿ ಮ್ಯಾನೇಜರ್ ಹತ್ತಿರ ಹೋಗಿ ಕೇಳಿದರೆ ಅವರಿಗೆ ಅಕ್ಕಿ ಕೊಡುವ ಅಧಿಕಾರ ಇದೆಯಾ? ಎಫ್‌ಸಿಐ ಕೇಂದ್ರ ಸರ್ಕಾರದ ಏಜೆನ್ಸಿ, ಐದು ವರ್ಷ ಅಧಿಕಾರ ನಡೆಸಿದ್ದಾರೆ. ಯಾರೊಂದಿಗೆ ಮಾತನಾಡಬೇಕು ಅನ್ನುವ ಸಾಮಾನ್ಯ ಜ್ಞಾನ ಇಲ್ಲ’ ಎಂದು ವಾಗ್ದಾಳಿ ನಡೆಸಿ ಮುಖ್ಯಮಂತ್ರಿಗಳ ಉತ್ತರ ಖಂಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಅನ್ನಭಾಗ್ಯ ಬಗ್ಗೆ ಬಿಜೆಪಿ ಅಸೂಯೆ: ಡಿಸಿಎಂ
ಬಿಜೆಪಿ ಸಭಾತ್ಯಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ರಾಜ್ಯದ ಬಡ ಜನರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆ ಜಾರಿಯನ್ನು ಸಹಿಸಲಾಗದೇ ಅಸೂಯೆಯಿಂದ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಹೀಗಾಗಿಯೇ ಸಭಾತ್ಯಾಗ ಮಾಡಿದ್ದಾರೆ. ಇವರನ್ನು ಜನತೆ ಎಂದೂ ಕ್ಷಮಿಸುವುದಿಲ್ಲ’ ಎಂದು ಟೀಕಿಸಿದರು.
‘ಬಿಜೆಪಿಯವರು ಪ್ರತಿಭಟನೆ ಮಾಡಿ, ಸಭಾತ್ಯಾಗ ಮಾಡಿ ಹೋದರೆ ನಮಗೂ ಸಮಾಧಾನವೇ. ಕಾರಣ, ನಮ್ಮ ಸರ್ಕಾರ ಜನರ ಹಸಿವನ್ನು ನೀಗಿಸಲು ತೆಗೆದುಕೊಂಡಿರುವ ಕಾರ್ಯಕ್ರಮವನ್ನು ಅವರೇ ಪ್ರಚಾರ ಮಾಡುತ್ತಿದ್ದಾರೆ. ಇವರು ಸಹಕಾರ ನೀಡಲಿ ಅಥವಾ ನೀಡದೇ ಇರಲಿ ನಮಗೆ ಸಾಮಾಜಿಕ ಬದ್ಧತೆ ಇದೆ. ಹೇಗಾದರೂ ನೀಡೇ ನೀಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.
‘ಮಂಗಳೂರಿನ ಭಾಗದ ಜನ ಆ ಭಾಗದ ಅಕ್ಕಿ ಕೇಳಿದರೆ, ಉತ್ತರ ಕರ್ನಾಟಕ ಭಾಗದ ಜನ ಜೋಳ ಕೇಳುತ್ತಿದ್ದಾರೆ. ಹಳೇ ಮೈಸೂರು ಭಾಗದ ಜನ ರಾಗಿ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ 10 ಕೆ.ಜಿ ಆಹಾರ ಧಾನ್ಯ ನೀಡಲು ಬದ್ಧವಾಗಿದೆ’ ಎಂದರು.
ಉಚಿತ ಅಕ್ಕಿ ಕೊಡುವ ಪ್ರಮೇಯ ಏನಿದೆ?: ಸಿಎಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಅಕ್ಕಿ ಖರೀದಿಗಾಗಿ ನಾನು ಹಾಗೂ ಮುಖ್ಯಮಂತ್ರಿಗಳು, ಅಧಿಕಾರಿಗಳು ಎಲ್ಲಾ ರೀತಿಯ ಪ್ರಯತ್ನ ಮಾಡಿದೆವು. ಕೇಂದ್ರ ಸಹಕರಿಸಲಿಲ್ಲ. ಮುಂದೆ ಎಲ್ಲ ರೀತಿಯ ಪ್ರಯತ್ನ ಮಾಡಿ ಕೊಟ್ಟಮಾತಿನಂತೆ ಅಕ್ಕಿ ನೀಡುತ್ತೇವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ