
ರಾಯಚೂರು (ಜ.13): ಹಿಂದೂ ಧರ್ಮ ದೇವರುಗಳನ್ನು ಟೀಕಿಸುತ್ತಲೇ ಸುದ್ದಿಯಾಗಿರುವ ಚಿಂತಕ ಭಗವಾನ್ ಇದೀಗ ಮತ್ತೊಮ್ಮೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕನಕ ಗುರುಪೀಠದ ತಿಂಥಿಣಿ ಬ್ರಿಡ್ಜ್‌ನಲ್ಲಿ ನಡೆದ ಹಾಲುಮತ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಹಿಂದೂ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಂದೂ ಅನ್ನೋದೇ ಅವಮಾನಕರ ಶಬ್ದ:
ನಾವು ಹಿಂದೂ ಎಂದು ಹೇಳಿಕೊಳ್ಳುವುದೇ ಒಂದು ಅವಮಾನಕರ ಶಬ್ದ. ಯಾರು ಹೀನರಾಗಿದ್ದಾರೋ, ಯಾರು ದೂಷಣೆಗೆ ಒಳಗಾಗಿದ್ದಾರೋ ಅವರೇ ಹಿಂದೂ. ಈ ಹಿಂದೂ ಶಬ್ದ ಬಂದಿದ್ದು 1030ನೇ ಇಸವಿಯಲ್ಲಿ. ಅದಕ್ಕೂ ಮೊದಲು ಹಿಂದೂ ಶಬ್ದವೇ ಇರಲಿಲ್ಲ. ಪರ್ಷಿಯನ್ ಲೇಖಕ ಆಲ್ಬೆರೊನಿ ಭಾರತದ ಬಗ್ಗೆ ಬರೆಯುತ್ತ ಸಿಂಧೂ ನದಿಯನ್ನ ಹಿಂದೂ ಅಂತ ಕರೆದರು ಎಂದಿದ್ದಾರೆ. ಪರ್ಷಿಯನ್ ಭಾಷೆಯಲ್ಲಿ 'ಸ' ಕಾರ ಇಲ್ವಂತೆ, 'ಸ' ಕಾರ 'ಹ' ಕಾರ ಆಗುತ್ತಂತೆ. ಮುಂದೆ ಸಿಂಧೂ ಹೋಗಿ ಹಿಂದೂ ಆಗಿದೆ. ಅದು ಅಕ್ಬರನ ಕಾಲದಲ್ಲಿ ಹಿಂದೂಸ್ತಾನ್ ಆಗಿ ಹೆಸರು ಬಂದಿದೆ. ಹೀಗಾಗಿ ರಾಮಾಯಣ, ಮಹಾಭಾರತ, ಪುರಾಣ, ವೇದ ಗ್ರಂಥಗಳಲ್ಲಿ ಹಿಂದೂ ಅನ್ನೋ ಹೆಸರೇ ಇಲ್ಲ. ಕಾಶ್ಮೀರ ಶೈವ ಗ್ರಂಥದಲ್ಲಿ ಹಿಂದೂ ಪದಕ್ಕೆ ಯಾರೂ ಹೀನನಾಗಿದ್ದಾರೊ, ಯಾರು ದೂಷಣೆಗೆ ಒಳಗಾಗಿದ್ದಾರೋ ಅವನು ಹಿಂದೂ ಅಂತಲೇ ಇದೆ. ಹೀಗಿರುವಾ ಹಿಂದೂ ಅಂತಾ ಹೇಳ್ಕೊಬೇಕಾ? ಹಿಂದೂ ಅನ್ನೋದೇ ಒಂದು ಅವಮಾನಕರವಾಗಿದೆ ಎಂದರು.
ಇದನ್ನೂ ಓದಿ: ಪಾಪಿಷ್ಟರು ಮಾತ್ರ ಕುಂಭಮೇಳಕ್ಕೆ ಹೋಗ್ತಾರೆ.. ಭೀಮ್ ಆರ್ಮಿ ಚಂದ್ರಶೇಖರ ಆಜಾದ್ ವಿವಾದಾತ್ಮಕ ಹೇಳಿಕೆ!
ಚಾತುರ್ವಣದಲ್ಲಿ ಶೂದ್ರ ಅನ್ನೋ ಶಬ್ದ ಸಹ ಮನುಸ್ಮೃತಿ ಪ್ರಕಾರ ಅಪಮಾನಕ್ಕೆ ಒಳಗಾಗಿದೆ. ಸಂವಿಧಾನದಲ್ಲಿ ಸಮಾನತೆ ಸ್ವಾತಂತ್ರ್ಯ ಸೇರಿ ದೊಡ್ಡ ತತ್ವವನ್ನ ಬಾಬಾ ಸಾಹೇಬರು ಅಳವಡಿಸಿದ್ದಾರೆ. ಅಂಥ ಸಂವಿಧಾನ ತೆಗೆದು ಹಾಕಲು ಕುತಂತ್ರ ಮಾಡುತ್ತಿದ್ದಾರೆ. ನಾವು ಇದಕ್ಕೆ ಅವಕಾಶ ಕೊಡಬಾರದು, ಮತ್ತೆ ಮನಸ್ಮೃತಿ ವಾಪಸ್ ತರದಂತೆ ತಡೆಯಬೇಕಿದೆ. ಮನಸ್ಮೃತಿಯಿಂದ ಶೂದ್ರರನ್ನ ಅನಾಗರಿಕರಂತೆ ನೋಡಲಾಯಿತು. ಈ ಕಾರಣಕ್ಕಾಗಿಯೇ ಬಾಬಾ ಸಾಹೇಬರು, ಪೆರಿಯಾರ್ ಮನಸ್ಮೃತಿಯನ್ನ ಸುಟ್ಟು ಹಾಕಿದರು. ಸಂವಿಧಾನ ಪರ ಹೋರಾಡಬೇಕು ಮನು ಸ್ಮೃತಿಯನ್ನ ತಿರಸ್ಕರಿಸಬೇಕು ಎಂದು ಕರೆ ನೀಡಿದರು.
ಮಠಗಳ ವಿರುದ್ಧವೂ ಕಿಡಿಕಾರಿದ ಭಗವಾನ್, ಇಂದು ಒಂದೊಂದು ಮಠ ಒಂದೊಂದು ಸಮುದಾಯಕ್ಕೆ ಸೀಮಿತವಾಗಿವೆ. ಜನರ ಮನಸು ಬಹಳ ಸಂಕುಚಿತವಾಗುತ್ತಿದೆ. ಎಲ್ಲರೂ ಸಮಾನರು ಅನ್ನೋ ಭಾವನೆಗೆ ಜಾತಿಗೊಂದು ಮಠಗಳು ಅಡ್ಡಿಯಾಗಿವೆ. ಜನರು ಇದನ್ನು ದಾಟಿ ಬರಬೇಕು. ದೇಶದಲ್ಲಿ ಭೌದ್ದ ಧರ್ಮ 1500 ವರ್ಷಕಾಲ ಹರಡಿತ್ತು. ಬುದ್ದ ಈ ಮಣ್ಣಿನ ಮಗ, ಒಬ್ಬ ರೈತನ ಮಗ. ಬೌದ್ಧ ಸ್ತೂಪಗಳು, ದೇವಾಲಯಗಳು ಎಲ್ಲವನ್ನೂ ಒಡೆದು ಹಾಕಿದವರು ಯಾರು? ಮೊದಲು ಅದನ್ನ ಪತ್ತೆ ಹಚ್ಚಿ ಮೂಲ ವ್ಯಕ್ತಿಗಳಿಗೆ ವಾಪಸ್ ಕೊಡಬೇಕು ಆಮೇಲೆ ಮುಸ್ಲಿಮರು ಮಂದಿರ ಮಸೀದಿಗಳ ಮಾತು ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ