ಎಲ್&ಟಿ ಮುಖ್ಯಸ್ಥರ 'ವಾರಕ್ಕೆ 90 ಗಂಟೆ ಕೆಲಸ' ಹೇಳಿಕೆಯನ್ನು ವಾಟಾಳ್ ನಾಗರಾಜ್ ಖಂಡಿಸಿದ್ದಾರೆ. ಉದ್ಯೋಗಿಗಳ ಆರೋಗ್ಯ ಹಾಳುಮಾಡುವ ಮತ್ತು ದಾಂಪತ್ಯ ಹಾಳುಗೆಡುವುವ ಈ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರು (ಜ.13): 'ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು' ಎಂಬ ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ಹೇಳಿಕೆ ದೇಶದ್ಯಾಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧಗಳು ವ್ಯಕ್ತವಾಗಿವೆ. ದೇಶಾದ್ಯಂತ ಐಟಿ ಉದ್ಯೋಗಿಗಳು ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಕೆಲವರು ಖಂಡಿಸಿದ್ದಾರೆ. ಇದೀಗ ಸುಬ್ರಮಣಿಯನ್ ಹೇಳಿಕೆ ಖಂಡಿಸಿ ವಾಟಾಳ ನಾಗರಾಜ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ ನಾಗರಾಜ ಅವರು, ಆ ರೀತಿ 90 ಗಂಟೆ ಕೆಲಸ ಮಾಡಿಸಿ ಉದ್ಯೋಗಿಗಳ ಆರೋಗ್ಯ ಹಾಳುಮಾಡಲು ಚಿಂತನೆ ಮಾಡ್ತಿದ್ದಾರೆ. ಆ ಮೂಲಕ ಉದ್ಯಮಿಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳುವ ಮೂಲಕ ನೌಕರರ ಬೆನ್ನು ಮೂಳೆ ಮುರಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: News Hour: 90 ಗಂಟೆ ಕೆಲಸದ ಹೇಳಿಕೆ ನೀಡಿ, ದಿನದ 24 ಗಂಟೆಯೂ ಚಡಪಡಿಸುವಂಥಾದ L&T ಚೇರ್ಮನ್!
ಇನ್ನು ಗಂಡ ಹೆಂಡತಿ ಮುಖ ನೋಡದೇ ಕೆಲಸ ಮಾಡಬೇಕು ಎಂಬ ಸುಬ್ರಮಣಿಯನ್ ಹೇಳಿಕೆಗೆ ತೀವ್ರವಾಗಿ ಖಂಡಿಸಿದ ವಾಟಾಳ್ ನಾಗರಾಜ್ ಅವರು, ಇದು ಪತಿ-ಪತ್ನಿಯರ ದಾಂಪತ್ಯ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿ ಕೂಡ ವಾರಕ್ಕೆ 70ಗಂಟೆ ಕೆಲಸ ಮಾಡುವಂತೆ ಹೇಳಿದ್ದಾರೆ. ಇದು ನೌಕರರನ್ನ ಜೀತದಾಳುಗಳನ್ನಾಗಿ ಮಾಡುವ ಹುನ್ನಾರ. ಕೂಡಲೇ ಸುಬ್ರಮಣಿಯನ್ ಹಾಗೂ ನಾರಾಯಣ ಮೂರ್ತಿ ದೇಶದ ಪ್ರಜೆಗಳ ಕ್ಷಮೆ ಕೇಳಬೇಕು. ನೌಕರರಿಗೆ ಹೆಚ್ಚಿಗೆ ಕೆಲಸ ಮಾಡಿಸುವ ಚಿಂತನೆ ಕೈಬಿಡಬೇಕು ಎಂದು ವಾಟಾಳ್ ಆಗ್ರಹಿಸಿದ್ದಾರೆ.