* ಪಿಎಸ್‌ಐ ನೇಮಕ ಮರುಪರೀಕ್ಷೆ ಪ್ರಕಟಿಸಿದ ಸರ್ಕಾರಕ್ಕೆ ಪ್ರಶ್ನೆ
* ಕಲಬುರಗಿಗೆ ಸೀಮಿತವಲ್ಲ
* ತಪ್ಪಿತಸ್ಥರು ಪತ್ತೆ ಹಚ್ಚಿ ಶಿಕ್ಷಿಸಲಿ
ಕಲಬುರಗಿ(ಏ.30): ಪಿಎಸ್ಸೈ ನೇಮಕಾತಿ ಪರೀಕ್ಷೆಯ ಅಕ್ರಮ(PSI Recruitment Scam) ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಮರುಪರೀಕ್ಷೆಗೆ ಆದೇಶಿರುವುದನ್ನು ಸರ್ಕಾರದ ಆತುರದ ಕ್ರಮ ಎಂದು ಟೀಕಿಸಿರುವ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ(Priyank Kharge), ಮರು ಪರೀಕ್ಷೆ ವೇಳೆ ಲಿಖಿತ ಪರೀಕ್ಷೆಯೊಂದಿಗೆ ಅಕ್ರಮ ನಡೆದಿದೆ ಎನ್ನಲಾಗಿರುವ ದೈಹಿಕ ಪರೀಕ್ಷೆ ಕೂಡ ನಡೆಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಅಭ್ಯರ್ಥಿಯ(Candidate) ಅರ್ಹತೆಗೆ ನಿಗದಿಪಡಿಸಲಾಗಿರುವ ಎತ್ತರನ್ನು ತೋರಿಸುವ ಸಲುವಾಗಿ ತಲೆಗೆ ವಿಗ್ ಹಾಕಿ ಸೇರಿದಂತೆ ಇನ್ನೂ ಬೇರೆ ಬೇರೆ ರೀತಿಯಲ್ಲಿ ಮೋಸ ಮಾಡಿ ದೈಹಿಕ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಾರೆಂಬ ದೂರುಗಳಿವೆ. ಹಾಗಾಗಿ ದೈಹಿಕ ಪರೀಕ್ಷೆಯನ್ನೂ(Physical Test) ನಡೆಸಲಾಗುತ್ತಿದೆಯಾ ಎಂಬ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಸಿಐಡಿ ಪೊಲೀಸರಿಗೇ ಚಳ್ಳೆ ಹಣ್ಣು ತಿನಿಸಿದ್ದ ಹಾಗರಗಿ: 18 ದಿನದಿಂದ ದಿವ್ಯಾ ಎಲ್ಲಿದ್ರು? ಇಂಚಿಂಚು ಮಾಹಿತಿ ಇಲ್ಲಿದೆ
ನಗರದಲ್ಲಿ ಶನಿವಾರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆ 545 ಪಿಎಸ್‌ಐ ಹುದ್ದೆ ನೇಮಕಾತಿ ಅಕ್ರಮ ಪಟ್ಟಿಯನ್ನು ರದ್ದುಗೊಳಿಸಿ ಮರು ಪರೀಕ್ಷೆಗೆ ಆದೇಶಿಸಿರುವುದು ಸ್ವಾಗತಾರ್ಹ. ಆದರೆ ಇದು ಅಸ್ಪಷ್ಟವಾಗಿದ್ದು ಸರ್ಕಾರದ ನಿರ್ಧಾರ ಗೊಂದಲಕ್ಕೆ ಕಾರಣವಾಗಿದೆ. ಮರುಪರೀಕ್ಷೆ ಎಂದರೆ ಲಿಖಿತ ಪರಿಕ್ಷೆಯೋ ಅಥವಾ ದೈಹಿಕ ಪರೀಕ್ಷೆಯೂ ಸೇರಿದೆಯಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾದರೆ ಪ್ರಾಮಾಣಿಕರಿಗೆ ನ್ಯಾಯ ಸಿಗುವುದಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ವಿಗ್ ಹಾಕಿ ವಂಚನೆ:
ಸಿಐಡಿ(CID) ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಓಎಂಆರ್ ಶಿಟ್‌ನಿಂದ ಶುರುವಾದ ಅಕ್ರಮ ಇದೀಗ ಬ್ಲೂಟೂತ್‌ಗೆ(Bluetooth) ಬಂದು ನಿಂತಿದೆ. ಕೇವಲ ಲಿಖಿತ ಪರೀಕ್ಷೆ ಅಲ್ಲದೆಯೂ ಬೆಳಗಾವಿಯಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ವರದಿಗಳಿವೆ. ಹಲವು ಅನರ್ಹರೂ ದೈಹಿಕ ಪರೀಕ್ಷೆ ವೇಳೆ ಪಾಸಾಗಿದ್ದು ಇದಕ್ಕೆ ಪೋಲಿಸ್ ಅಧಿಕಾರಿಗಳೇ ಸಹಕರಿಸಿದ್ದಾರೆಂಬ ಆರೋಪಗಳಿವೆ. ತಲೆಗೆ ವಿಗ್ ಹಾಕಿಕೊಂಡು ಬಂದು, ಇನ್ನೇನೇನೋ ಮೋಸ ಮಾಡಿ ದೈಹಿಕ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಾರೆಂಬ ದೂರುಗಳಿವೆ. ಹಾಗಾಗಿ ದೈಹಿಕ ಪರೀಕ್ಷೆಯೂ ನಡೆಸಲಾಗುತ್ತಿದೆಯಾ ಎನ್ನುವುದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
PSI ಮರು ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ, ಹೈಕೋರ್ಟ್ ಮೆಟ್ಟಿಲೇರಲು ಅಭ್ಯರ್ಥಿಗಳು ತೀರ್ಮಾನ
ಕಲಬುರಗಿಗೆ ಸೀಮಿತವಲ್ಲ:
ಈ ಹಗರಣ ಕಲಬುರಗಿ(Kalaburagi) ಪರೀಕ್ಷಾ ಕೇಂದ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಬೆಳಗಾವಿ, ಬೆಂಗಳೂರು ಸೇರಿದಂತೆ ಬಹುತೇಕ ಕೇಂದ್ರಗಳಿಗೂ ವ್ಯಾಪಿಸಿದೆ. ಪರೀಕ್ಷೆ ಬರೆದ 57,000 ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಆದರೆ ಕೇವಲ ಕಲಬುರಗಿ ಕೇಂದ್ರವೊಂದನ್ನೇ ಪರಿಗಣಿಸಲಾಗಿದೆ. ಅಂದರೆ ಏಳೆಂಟು ಆರೋಪಿಗಳನ್ನು ಹೊರತುಪಡಿಸಿ ಉಳಿದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವ ಸರ್ಕಾರದ ನಿರ್ಧಾರ ಜನರ ಗಮನವನ್ನು ಬೇರೆಡೆ ತಿರುಗಿಸಿ ಪ್ರಕರಣ ಮುಚ್ಚಿಹಾಕುವ ಯತ್ನವಾಗಿ ತೋರುತ್ತಿದೆ. ಹೀಗಾಗಿ ಸರ್ಕಾರ ತನಿಖೆಯನ್ನು ಕಲಬುರಗಿಗೆ ಮಾತ್ರ ಸೀಮಿತಗೊಳಿಸದೆ ರಾಜ್ಯಾದ್ಯಂತ(Karnataka) ಇರುವ ಪರೀಕ್ಷಾ ಕೇಂದ್ರಗಳಲ್ಲೆಲ್ಲಾ ನಡೆಸಲಿ. ತಪ್ಪಿತಸ್ಥರು ಪತ್ತೆ ಹಚ್ಚಿ ಶಿಕ್ಷಿಸಲಿ ಎಂದಿದ್ದಾರೆ.