* ಮುಂದೆ ಸರಿಯಾಗಿ ಪರೀಕ್ಷೆ ನಡೆಸುತ್ತೀರಿ ಎಂಬ ಗ್ಯಾರಂಟಿ ಏನು?
* ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ; ಪ್ರಾಮಾಣಿಕ ಪರೀಕ್ಷೆ ಬರೆದವರಿಗೆ ಏಕೆ ಶಿಕ್ಷೆ
* ಕುಮಾರಸ್ವಾಮಿ ಭೇಟಿಯಾಗಿ ಮರು ಪರೀಕ್ಷೆ ನಡೆಸದಂತೆ ಅಭ್ಯರ್ಥಿಗಳ ಮನವಿ
ಹುಬ್ಬಳ್ಳಿ(ಏ.30): ಪಿಎಸ್‌ಐ ಅಕ್ರಮ ನೇಮಕಾತಿಯಾದ(PSI Recruitment Scam) ಹಿನ್ನೆಲೆಯಲ್ಲಿ ಆಯ್ಕೆ ಪಟ್ಟಿ ರದ್ದುಪಡಿಸಿ ಮರುಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ(HD Kumarasway) ಆಕ್ಷೇಪಿಸಿದ್ದಾರೆ. ಮುಂದೆಯಾದರೂ ಸರಿಯಾಗಿ ಪರೀಕ್ಷೆ ನಡೆಸುತ್ತೀರಿ ಎಂಬ ಗ್ಯಾರಂಟಿ ಏನು? ಎಂದು ಪ್ರಶ್ನಿಸಿದ್ದಾರೆ.
ಪಿಎಸ್‌ಐ ಮರುಪರೀಕ್ಷೆಗೆ ಸರ್ಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿಯಾದ ಪಿಎಸ್‌ಐ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳ(Candidates) ಮನವಿ ಸ್ವೀಕರಿಸಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು.
ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈಗಲೇ ಮರುಪರೀಕ್ಷೆ ಎಂದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಹಗಲು-ರಾತ್ರಿ ಓದಿ ಬಡ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈಗ ಮತ್ತೆ ಪರೀಕ್ಷೆ ಮಾಡುವುದು ಎಷ್ಟುಸರಿ. ಯಾವ ಆಧಾರದ ಮೇಲೆ ಈ ರೀತಿ ಮಾಡುತ್ತಿದ್ದಾರೆ ಎಂಬುದು ಬಹಿರಂಗಪಡಿಸಬೇಕು ಎಂದರು.
PSI ಮರು ಪರೀಕ್ಷೆ: ಸರ್ಕಾರ ತೀರ್ಮಾನಕ್ಕೆ ಪಾಸಾದ ಅಭ್ಯರ್ಥಿಗಳ ಕಣ್ಣೀರು..!
ಯಾರೋ ಕೆಲವರು ಮಾಡಿರುವ ತಪ್ಪಿಗೆ ಎಲ್ಲರಿಗೂ ಏಕೆ ಶಿಕ್ಷೆ. ಮೊದಲು ತನಿಖೆಯಾಗಲಿ(Probe), ತಪ್ಪು ಮಾಡಿದವರನ್ನು ಬಯಲಿಗೆಳೆಯರಿ. ಅದು ಬಿಟ್ಟು ಯಾರದೋ ತಪ್ಪಿಗೆ ಬಡ ಅಭ್ಯರ್ಥಿಗಳಿಗೆ ಶಿಕ್ಷೆ ನೀಡಬಾರದು. ಯಾರೋ ಕೊಟ್ಟಿರುವ ದೂರಿನ ಆಧಾರದ ಮೇಲೆ ಈ ರೀತಿ ಮಾಡಬಾರದು. ಈ ಪ್ರಕರಣದಲ್ಲಿ ಹಣ ಮಾಡಲು ಹೊರಟವರು ಪಿಶಾಚಿಗಳು. ಅವರಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಸರಿಯಾದ ಮುಂಜಾಗ್ರತಾ ಕ್ರಮವಹಿಸಿ ಪರೀಕ್ಷೆ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ರೇವಣ್ಣ ಅವರ ಕಾಲದಲ್ಲಿ ಹಣ ಪಡೆದಿರುವ ಬಗ್ಗೆ ಒಂದೇ ಒಂದು ಉದಾಹರಣೆ ಕೊಡಿ ಎಂದ ಅವರು, ಈ ವ್ಯವಸ್ಥೆ ಸರಿಪಡಿಸದಿದ್ದರೆ ಕೇವಲ ದುಡ್ಡಿದ್ದವರು ಮಾತ್ರ ಇರುತ್ತಾರೆ. ಹಣ ಕೊಟ್ಟು ಕೆಲಸ ಪಡೆದವರು ಬಡವರ ಪರವಾಗಿ ಹೇಗೆ ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದರು.
2011ರ ಕೆಪಿಎಸ್ಸಿ(KPSC) ಬ್ಯಾಚ್ ಅಭ್ಯರ್ಥಿಗಳು ಹೇಗೆ ವಂಚಿತರಾಗಿದ್ದರು ಎಂಬುದೆಲ್ಲವೂ ಗೊತ್ತು. ಅದು ಇಂದಿಗೂ ಮುಕ್ತಾಯವಾಗಿಲ್ಲ ಎಂದ ಅವರು, ಇದೀಗ ಮರುಪರೀಕ್ಷೆ ನಡೆಸುವುದು ಸರಿಯಲ್ಲ. ಪಾಸಾದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದರು.
ಕರ್ನಾಟಕದಲ್ಲಿ 'ಸಿಂಘಂ'ನಂಥ ಅಧಿಕಾರಿಗಳಿದ್ರೂ ಪಿಎಸ್‌ಐ ಅಕ್ರಮ ಹೇಗಾಯ್ತು?: ಡಿ. ರೂಪಾ ಪ್ರಶ್ನೆ
ನಾನು ಮುಖ್ಯಮಂತ್ರಿಗೆ ಕರೆ ಮಾಡಿ ಮಾತನಾಡುತ್ತೇನೆ. ಯಾರು ಇದರಲ್ಲಿ ನಿಜವಾದ ಆರೋಪಿಗಳಿದ್ದಾರೆ ಅವರ ವಿರುದ್ಧ ಕ್ರಮವಾಗಲಿ. ತನಿಖೆಯ ಆಧಾರದ ಮೇಲೆ ಕ್ರಮಕೈಗೊಳ್ಳಲಿ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಅಭ್ಯರ್ಥಿಗಳಿಗೆ ಭರವಸೆ ನೀಡಿದರು.
ಮನವಿ ಸಲ್ಲಿಕೆ:
ಇದಕ್ಕೂ ಮೊದಲು ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ ಪಾಸಾದ ಅಭ್ಯರ್ಥಿಗಳು, ನಮಗೆ ನ್ಯಾಯ ಬೇಕು. ಯಾವುದೇ ಕಾರಣಕ್ಕೂ ಮರು ಪರೀಕ್ಷೆಯಾಗಬಾರದು. ನಾವು ಕಷ್ಟಪಟ್ಟು ಓದಿ ಪರೀಕ್ಷೆ ಪಾಸ್ ಮಾಡಿದ್ದೇವೆ. ಇದೀಗ ಮತ್ತೆ ಎಕ್ಸಾಂ ಎಂದರೆ ಹೇಗೆ? ಸರ್ಕಾರ ತಮ್ಮ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಈ ರೀತಿ ಮಾಡುತ್ತಿದೆ. ಈಗ ಮರುಪರೀಕ್ಷೆ ಮಾಡುತ್ತೇವೆ ಎಂದರೆ ಪರೀಕ್ಷೆಯಲ್ಲಿ ಪಾಸಾದವರೆಲ್ಲರೂ ಕಳ್ಳರು ಎಂದಾಗುತ್ತದೆ. ಹಾಗಾದರೆ ನಾವು ಕಳ್ಳರಾಗಿದ್ದರೆ ಅದನ್ನು ಫä್ರವ್ ಮಾಡಲಿ ಎಂದು ಅಭ್ಯರ್ಥಿ ಮಲ್ಲಪ್ಪ ಶಿವೂರ ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಮರು ಪರೀಕ್ಷೆಯಾಗಬಾರದು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು. ಬಾಗಲಕೋಟೆ, ಗದಗ, ಬೆಳಗಾವಿ ಸೇರಿದಂತೆ ವಿವಿಧೆಡೆಯಿಂದ ಪರೀಕ್ಷೆ ಕುಳಿತು ಪಾಸಾದ ಅಭ್ಯರ್ಥಿಗಳಿದ್ದರು.