
ಬೆಂಗಳೂರು (ಮೇ.16): ‘ಪ್ರಧಾನಮಂತ್ರಿ ಮೋದಿ ಅವರು ಒಬ್ಬ ಹೇಡಿ, ಜವಾಬ್ದಾರಿಯಿಂದ ಓಡಿ ಹೋಗುವವರು. ಅವರಿಗೆ ಧೈರ್ಯವಿದ್ದರೆ ಅಚ್ಛೇದಿನ್ ಬಗ್ಗೆ ಹಾಗೂ 12 ವರ್ಷದಲ್ಲಿ ಮೋದಿ ಅವರು ನೀಡಿರುವ ಮಾಸ್ಟರ್ ಸ್ಟ್ರೋಕ್‌ಗಳು ಹಾಗೂ ಅದರಿಂದ ದೇಶಕ್ಕೆ ಆಗಿರುವ ಲಾಭದ ಬಗ್ಗೆ ಶ್ವೇತಪತ್ರ ಹೊರಡಿಸಲಿ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಆರ್ಥಿಕತೆ ದಿವಾಳಿ ಆಗಿದೆ ಎಂದು ನಾವು ಹಲವು ಬಾರಿ ಹೇಳಿದ್ದೇವೆ. ಇದರ ಬಗ್ಗೆ ಸಂಸತ್‌ನಲ್ಲಿ ಚರ್ಚೆ ಮಾಡಬೇಕು ಅಂದಾಗಲೆಲ್ಲಾ ಪ್ರಧಾನಿ ಮೋದಿ ಓಡಿ ಹೋಗಿದ್ದಾರೆ. ಪಂಚರಾಜ್ಯ ಚುನಾವಣೆ ಆದ ಬೆನ್ನಲ್ಲೇ ಅವರು ವಿದೇಶಕ್ಕೆ ಹಾರುತ್ತಾರೆ ಎಂದು ಟೀಕಿಸಿದರು.
ಕಂಪನಿಗಳು ಮುಚ್ಚಿ ಹೋಗುತ್ತಿವೆ. ರುಪಾಯಿ ಮೌಲ್ಯ ಕುಸಿದಿದೆ. ಬೆಲೆ ಏರಿಕೆಗಳ ದುಷ್ಪರಿಣಾಮ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಬೀರುತ್ತಿದೆ. ಹೋಟೆಲ್‌ಗಳು ಮುಚ್ಚುತ್ತಿವೆ. ಇದರ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ದೇಶದಲ್ಲಿ ಕೊರೋನಾ ಬಂದರೆ, ಪಾಕಿಸ್ತಾನದ ಜತೆ ಯುದ್ಧ ನಡೆದರೆ, ನೋಟು ಅಮಾನ್ಯೀಕರಣವಾದರೆ ನಾಗರಿಕರು ಜವಾಬ್ದಾರಿ ಅಂತಾರೆ. ಹಾಗಾದರೆ ಮೋದಿ ಅವರ ಜವಾಬ್ದಾರಿ ಏನು? ಬರೀ ಚುನಾವಣಾ ಪ್ರಚಾರ ಮಾಡುವುದಕ್ಕಾಗಿಯೇ ಪ್ರಧಾನಿ ಆಗಿದ್ದಾರೆಯೇ? ಪ್ರತಿಪಕ್ಷಗಳ ವಿರುದ್ಧ ಎಸ್‌ಐಆರ್ ಮಾಡುವುದು, ಇ.ಡಿ, ಐಟಿ, ಸಿಬಿಐ ಛೂ ಬಿಡುವುದು ಇಷ್ಟೇನಾ ಅವರ ಜವಾಬ್ದಾರಿ ಎಂದು ಪ್ರಶ್ನಿಸಿದರು.
ವಿದೇಶ ಪ್ರವಾಸಕ್ಕೆ 800 ಕೋಟಿಗಿಂತ ಹೆಚ್ಚು ಹಣ ಮೋದಿ ಖರ್ಚು ಮಾಡಿದ್ದಾರೆ. ಇದರಿಂದ ದೇಶಕ್ಕೆ ಆಗಿರುವ ಲಾಭವೇನು ಎಂಬುದು ಬಹಿರಂಗಪಡಿಸಲಿ ಎಂದು ಹೇಳಿದರು.
ರಾಹುಲ್ ಗಾಂಧಿ ವಿದೇಶಿ ಪ್ರವಾಸದ ಬಗ್ಗೆ ಬಿಜೆಪಿಯವರು ಲೆಕ್ಕ ಕೇಳುತ್ತಿದ್ದಾರೆ. ಮೋದಿ ಅವರು ಸಾಮಾನ್ಯ ಕುಟುಂಬದಿಂದ ಬಂದವರು, ತನ್ನನ್ನು ತಾನು ಫಕೀರ ಎಂದು ಕರೆಸಿಕೊಂಡವರು. ಅವರು ಪ್ರಧಾನಿಯಾಗುವ ಮೊದಲು ಮಾಡಿರುವ ವಿದೇಶ ಪ್ರವಾಸಗಳಿಗೆ ಹಣ ಎಲ್ಲಿಂದ ಬಂತು? ಅಮೇರಿಕ, ಜರ್ಮನಿ, ಇಂಗ್ಲೆಂಡ್‌ಗೆ ಹೋಗುವ ಆರ್‌ಎಸ್‌ಎಸ್‌ನ ಹೊಸಬಾಳೆ ಅವರಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಆರ್‌ಎಸ್‌ಎಸ್‌ನವರು ದೊಡ್ಡ ದೇಶದ್ರೋಹಿಗಳು, ಬ್ರಿಟಿಷ್ ಹಾಗೂ ಪಾಕಿಸ್ತಾನದ ಏಜೆಂಟರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಸಾವರ್ಕರ್ ಬ್ರಿಟಿಷರ ಏಜೆಂಟರಾಗಿ 60 ರು.ಪಿಂಚಣಿ ತೆಗೆದುಕೊಳ್ಳುತ್ತಿದ್ದರು. ಈಗ ಆರ್‌ಎಸ್‌ಎಸ್ ನಾಯಕ ಪಾಕಿಸ್ತಾನ ಜತೆ ಮಾತುಕತೆ ಮಾಡುವಂತೆ ಹೇಳಿದ್ದಾರೆ. ನಾವು ಪಾಕಿಸ್ತಾನದ ಜತೆ ಮಾತನಾಡಿದರೆ, ಕ್ರಿಕೆಟ್ ಆಡಿದರೆ ದೇಶದ್ರೋಹಿ ಇವರು ಯಾಕೆ ಅಲ್ಲ ಎಂದು ಪ್ರಶ್ನಿಸಿದರು.
ಆದಾಯ ತೆರಿಗೆ ಪಾವತಿಸದವರು ದೇಶದ್ರೋಹಿಗಳು ಎಂದು ಮೋದಿ ಹೇಳುತ್ತಾರೆ. ಆರ್‌ಎಸ್‌ಎಸ್‌ನವರು ಐಟಿ ಪಾವತಿಸಲ್ಲ, ನೋಂದಣಿಯೇ ಆಗಿಲ್ಲ. ಅವರು ದೇಶದ್ರೋಹಿಗಳು ಅಲ್ಲವೇ? ನೀಟ್ ಪರೀಕ್ಷೆಯಲ್ಲಿ ಪೇಪರ್ ಸೋರಿಕೆ ಮಾಡಿದ ಎ-1 ಆರೋಪಿ ಆರ್‌ಎಸ್‌ಎಸ್ ಸಂಘಟನೆಯವನು. ಹೀಗಾಗಿ ಆರ್‌ಎಸ್‌ಎಸ್‌ನ್ನು ಎಲ್ಲರೂ ಪ್ರಶ್ನಿಸಬೇಕಿದೆ ಎಂದರು.
- 12 ವರ್ಷದ ಸಾಧನೆ ಶ್ವೇತಪತ್ರ ಹೊರಡಿಸಲಿ
- ಆರೆಸೆಸ್‌ನವರು ದೇಶದ್ರೋಹಿಗಳು: ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ