ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್!

By Kannadaprabha NewsFirst Published Dec 14, 2020, 7:42 AM IST
Highlights

ಸಾರ್ವಜಿಕರಿಗೆ ಇಲ್ಲಿದೆ ಗುಡ್ ನ್ಯೂಸ್.. ಇಷ್ಟು ದಿನಗಳ ಸಂಕಷ್ಟ ಎದುರಿಸಿದ್ದ ಪ್ರಯಾಣಿಕರು ಕೊಂಚ ನಿರಾಳವಾಗುವ ಸುದ್ದಿ ಇಲ್ಲಿದೆ. 

ಬೆಂಗಳೂರು (ಡಿ.14):  ಸಾರಿಗೆ ನೌಕರರು ಮುಷ್ಕರ ಮುಂದುವರೆಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಖಾಸಗಿ ಬಸ್ಸುಗಳು, ಸರಕು ಸಾಗಾಣೆ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳಿಗೂ ಪ್ರಯಾಣಿಕರ ಸಾಗಾಣೆಗೆ ಮುಕ್ತ ಅವಕಾಶ ನೀಡಲು ಭಾನುವಾರ ತಡರಾತ್ರಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆ ಬಳಿಕ ಮಾಹಿತಿ ನೀಡಿದ ಕಂದಾಯ ಸಚಿವ ಆರ್‌. ಅಶೋಕ್‌, ‘ಖಾಸಗಿ ಬಸ್ಸುಗಳು ಸೇರಿದಂತೆ ಪ್ರಯಾಣಿಕರನ್ನು ಸಾಗಿಸುವ ಯಾವ ವಾಹನಗಳಿಗೂ ಆರ್‌.ಟಿ.ಒ ಅಧಿಕಾರಿಗಳು ಪರವಾನಗಿ ಕೇಳುವಂತಿಲ್ಲ. ಇನ್ನು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಓಡಿಸಲು ಮುಂದೆ ಬರುವ ಸಿಬ್ಬಂದಿಗೆ ಸೂಕ್ತ ಭದ್ರತೆ ಕಲ್ಪಿಸಲು ಪ್ರತಿ ಬಸ್ಸಿಗೆ ಇಬ್ಬರು ಪೊಲೀಸ್‌ ಸಿಬ್ಬಂದಿ ನೇಮಿಸಲೂ ಸಹ ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಸರ್ಕಾರಕ್ಕೆ ಮತ್ತೆ ಶಾಕ್​ ಕೊಟ್ಟ ಸಾರಿಗೆ ನೌಕರರು: ಬಸ್ ಬಂದ್...!

ಯಡಿಯೂರಪ್ಪ ನಿವಾಸದಲ್ಲಿ ಭಾನುವಾರ ರಾತ್ರಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌. ಅಶೋಕ್‌ ಸೇರಿದಂತೆ ಪ್ರಮುಖರೊಂದಿಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದರು. ಈ ನಡುವೆ, ಸೋಮವಾರ ಬೆಳಗ್ಗೆ 9.30 ಗಂಟೆಗೆ ಪುನಃ ಸಿಎಂ ಸಭೆ ನಡೆಸಿ ‘ಎಸ್ಮಾ’ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ.

ಜನರಿಗೆ ತೊಂದರೆ ಕೊಟ್ರೆ ಪರಪ್ಪನ ಅಗ್ರಹಾರಕ್ಕೆ : ಸೋಮವಾರ ಯಾವೊಬ್ಬ ಸಾರ್ವಜನಿಕರಿಗೆ ತೊಂದರೆಯಾದರೂ, ಹನಿ ರಕ್ತ ಹೊರ ಬಂದರೂ ಸಹಿಸುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕರಿಗೆ ತೊಂದರೆ ನೀಡುವ ಪ್ರತಿಯೊಬ್ಬರನ್ನೂ ಪರಪ್ಪನ ಅಗ್ರಹಾರಕ್ಕೆ ಕಳುಹಿಸುತ್ತೇವೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಎಚ್ಚರಿಕೆ ನೀಡಿದರು.

ಭಾನುವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿ, ‘ಮುಷ್ಕರ ಹೂಡಿರುವ ಹೋರಾಟಗಾರರು ಮಾನವೀಯತೆ ದೃಷ್ಟಿಯಿಂದ ನಡೆದುಕೊಳ್ಳಬೇಕು. ಕೊರೋನಾ ಇರುವಾಗ ಯಾರಾದರೂ ಮುಷ್ಕರ ಮಾಡುತ್ತಾರಾ? ಸಾರಿಗೆ ಮುಷ್ಕರ ಹೂಡಿದರೆ ಬಡವರು, ರೋಗಿಗಳು ಆಸ್ಪತ್ರೆಗಳಿಗೆ ಹೇಗೆ ಹೋಗಬೇಕು? ತಮಗೆ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್‌ ಈ ರೀತಿ ನಡೆದುಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.

click me!