ಗ್ಯಾರಂಟಿ ಎಂಟಾಣೆ ತೋರಿಸಿ ಜನರನ್ನ ಲಂಗೋಟಿ ಮೇಲೆ ನಿಲ್ಲಿಸಿದ ಸರ್ಕಾರ, 22 ತಿಂಗಳ ಅಧಿಕಾರದಲ್ಲಿ 'ಬೆಲೆ ಏರಿಕೆ'ಯದ್ದೇ ಕಾರುಬಾರು!

ಕೇವಲ 22 ತಿಂಗಳ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಗತ್ಯ ವಸ್ತುಗಳ ದರ ಏರಿಕೆ, ನಂದಿನಿ ಹಾಲಿನ ದರ ಏರಿಕೆ ಸೇರಿದಂತೆ ಸಾರ್ವಜನಿಕರು ತತ್ತರಿಸುವಂತಾಗಿದೆ. ಯಾವ ವಸ್ತುಗಳ ಬೆಲೆ ಎಷ್ಟೆಷ್ಟು ಏರಿಕೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Price Hikes in karnatana in Last 22 Months Overview San

ಬೆಂಗಳೂರು (ಮಾ.27): ಕೇವಲ 22 ತಿಂಗಳ ಅಧಿಕಾರವಧಿಯಲ್ಲಿ ಕಾಂಗ್ರೆಸ್‌ ಸರ್ಕಾರ ಜನರಿಂದ ಕ್ಯಾಕರಸಿ ಉಗಿಸಿಕೊಳ್ಳುತ್ತಿದೆ. ಅದಕ್ಕೆ ಕಾರಣ ಬೆಲೆ ಏರಿಕೆ. ಅಧಿಕಾರಕ್ಕೆ ಬಂದ ದಿನದಿಂದ ಪ್ರತಿ ತಿಂಗಳೂ ಎನ್ನುವಂತೆ ಅಗತ್ಯ ವಸ್ತುಗಳ ದರ ಏರಿಕೆ ಮಾಡುತ್ತಲೇ ಬಂದಿದೆ. ಗುರುವಾರ ನಂದಿನಿ ಹಾಲಿನ ಬೆಲೆಯನ್ನು ದಾಖಲೆಯ ಮಟ್ಟದಲ್ಲಿ ನಾಲ್ಕು ರೂಪಾಯಿ ಏರಿಕೆ ಮಾಡಿದೆ. 22 ತಿಂಗಳ ಹಿಂದೆ ನಡೆದ ಚುನಾವಣೆಯ ಸಮಯದಲ್ಲಿ 'ಉಚಿತ, ಖಚಿತ, ನಿಶ್ಚಿತ..', 'ಕಾಕಾಪಾಟೀಲ್‌ ನಿಂಗೂ ಫ್ರೀ, ಮಹದೇವಪ್ಪ ನಿಂಗೂ ಫ್ರೀ..' ಎನ್ನುತ್ತ ಗ್ಯಾರಂಟಿ ಆಸೆ ತೋರಿಸಿ ವೋಟಿ ಹಾಕಿಸಿಕೊಂಡಿದ್ದ ಕಾಂಗ್ರೆಸ್‌ ಸರ್ಕಾರ ಈಗ ಜನರನ್ನು ಅಕ್ಷರಶಃ ದಿವಾಳಿ ಮಾಡಿಸಿದೆ. ತಿಂಗಳಿಗೆ ಒಂದಷ್ಟು ನೂರು ರೂಪಾಯಿ ಸೇವಿಂಗ್ಸ್‌ ಮಾಡುತ್ತಿದ್ದ ಬಡಜನರ ಕಿಸೆಗೆ ನೇರವಾಗಿ ಕೈಹಾಕಿದೆ. ಗ್ಯಾರಂಟಿ ಎಂಟಾಣೆ ತೋರಿಸಿ ಸಾಮಾನ್ಯ ಜನರನ್ನು ಲಂಗೋಟಿ ಮೇಲೆ ನಿಲ್ಲಿಸುವ ಕೆಲಸ ಮಾಡಿದೆ.

ಈ ಬಾರಿ ನಂದಿನ ಹಾಲಿನ ದರ ಏರಿಕೆಗೂ ಮುನ್ನ ಮೆಟ್ರೋ, ವಿದ್ಯುತ್‌ ದರ ಹಾಗೂ ಮದ್ಯದ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿತ್ತು. ಪ್ರತಿ ಬಾರಿ ಬೆಲೆ ಏರಿಕೆ ಮಾಡುವಾಗಲೂ ಪಕ್ಕದ ರಾಜ್ಯದಲ್ಲಿ ಅಷ್ಟಿದೆ, ಈ ರಾಜ್ಯದಲ್ಲಿ ಇಷ್ಟಿದೆ ಎನ್ನುವ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಎಷ್ಟೆಲ್ಲಾ ಬೆಲೆ ಏರಿಕೆ ಮಾಡಿದೆ ಅನ್ನೋದರ ರಿಪೋರ್ಟ್‌ ಇಲ್ಲಿದೆ.

Latest Videos

ಕರ್ನಾಟಕದಲ್ಲಿ ಪರಿಷ್ಕೃತ ತೆರಿಗೆಗಳು ಅಥವಾ ದರಗಳಿಂದಾಗಿ ಈಗ ದುಬಾರಿಯಾಗಿರುವ ವಸ್ತುಗಳ ಪಟ್ಟಿ ಇಲ್ಲಿದೆ

ಸಾರ್ವಜನಿಕ ಸಾರಿಗೆ: ರಾಜ್ಯ ಸರ್ಕಾರ 2025 ರ ಹೊಸ ವರ್ಷದ ಉಡುಗೊರೆ ಎನ್ನುವ ರೀತಿಯಲ್ಲಿ, ಎಲ್ಲಾ ಸರ್ಕಾರಿ ಬಸ್‌ಗಳ ದರವನ್ನು ಶೆ. 15ರಷ್ಟು ಹೆಚ್ಚಳ ಮಾಡಿತ್ತು. ಹೆಚ್ಚಳದ ವ್ಯಾಪ್ತಿಯು 3 ರಿಂದ 50 ರೂ.ಗಳ ನಡುವೆ ಇತ್ತು. 11 ವರ್ಷಗಳಿಂದ ಬಸ್‌ ದರ ಪರಿಷ್ಕರಣೆ ಮಾಡಿಲ್ಲ ಅನ್ನೋ ಕಾರಣ ನೀಡಿ ಭಾರೀ ಪ್ರಮಾಣದಲ್ಲಿ ಜನರ ಕಿಸೆಗೆ ಕನ್ನ ಹಾಕಿತು. ಇದರಿಂದಾಗಿ ಇಂದು ರಾಜ್ಯದಲ್ಲಿ ಖಾಸಗಿ ಬಸ್‌ಗಳಿಗಿಂತ ಸರ್ಕಾರಿ ಬಸ್‌ಗಳೇ ದುಬಾರಿಯಾಗಿದೆ.

ಇಂಧನ: ಜೂನ್ 2024 ರಲ್ಲಿ, ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕ್ರಮವಾಗಿ ಶೇಕಡಾ 3.92 ಮತ್ತು ಶೇಕಡಾ 4.1 ರಷ್ಟು ಹೆಚ್ಚಿಸಿತು. ಇದರಿಂದಾಗಿ ಇಡೀ ದೇಶದಲ್ಲಿ ಪೆಟ್ರೋಲ್‌ ಬೆಲೆ 100 ರೂಪಾಯಿಗಿಂತ ಕಡಿಮೆ ಇದ್ದರೆ, ರಾಜ್ಯದಲ್ಲಿ ಪೆಟ್ರೋಲ್ ಬೆಲೆ 101 ರೂ.ಗಳಿಗಿಂತ ಹೆಚ್ಚು. ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 95 ರೂಪಾಯಿ ಇದೆ. ಹಾಗೂ ಪೆಟ್ರೋಲ್‌-ಡೀಸೆಲ್‌ ಬೆಲೆಯಲ್ಲಿ ಭಾರೀ ಏರಿಕೆಯಾಗದೇ ಈಗಾಗಲೇ 4 ವರ್ಷಗಳು ಕಳೆದಿವೆ.

ಹಾಲು/ಮೊಸರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ, ಆಗಸ್ಟ್ 2023 ರಲ್ಲಿ, ಹಾಲಿನ ಬೆಲೆಗಳು ಲೀಟರ್‌ಗೆ 3 ರೂ.ಗಳಷ್ಟು ಏರಿಕೆಯಾದವು. ಅದಾದ ಬಳಿಕ 2024ರ ಜೂನ್‌ 26ಕ್ಕೆ ನಂದಿನಿಯ ಎಲ್ಲಾ ಹಾಲಿನ ಬೆಲೆಯನ್ನು 2 ರೂಪಾಯಿ ಏರಿಕೆ ಮಾಡಿತು. ಈಗ ಮತ್ತೊಂದು ಸುತ್ತಿನ ಹಾಲಿ ಬೆಲೆ ಏರಿಕೆಯಾಗಿದೆ. ಏಪ್ರಿಲ್‌ 1 ರಿಂದ ಹಾಲಿನ ದರ ಲೀಟರ್‌ 4 ರೂಪಾಯಿ ಏರಿಕೆ ಘೋಷಣೆ ಮಾಡಿದೆ. ಅದರೊಂದಿಗೆ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲೀಟರ್ fಹಾಲಿನ ಬೆಲೆಯಲ್ಲಿ 9 ರೂಪಾಯಿ ಏರಿಕೆ ಮಾಡಿದಂತಾಗಿದೆ. ಇನ್ನೊಂದು ವಿಚಾರವೇನೆಂದರೆ ಬರೀ ಹಾಲು ಮಾತ್ರವಲ್ಲ ಮೊಸರು ಕೂಡ ಲೀಟರ್‌ಗೆ 4 ರೂಪಾಯಿ ಏರಿಕೆ ಮಾಡಿದೆ.

ಮದ್ಯ: ಅಧಿಕಾರಕ್ಕೆ ಬಂದ ನಂತರದ ಮೊದಲ ಬಜೆಟ್ ಭಾಷಣದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಮದ್ಯ ವಿಭಾಗಗಳಲ್ಲಿ ಹೆಚ್ಚಳವನ್ನು ಘೋಷಿಸಿದರು. ಭಾರತೀಯ ನಿರ್ಮಿತ ಮದ್ಯದ (IML) ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಎಲ್ಲಾ 18 ಸ್ಲ್ಯಾಬ್‌ಗಳ ಮೇಲೆ ಶೇ. 20 ರಷ್ಟು ಹೆಚ್ಚಿಸಲಾಗಿದೆ. ಮತ್ತು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ. 175 ರಿಂದ ಶೇ. 185 ಕ್ಕೆ ಹೆಚ್ಚಿಸಲಾಗಿದೆ. ಕಳೆದ ಬಜೆಟ್‌ ಸಮಯದಲ್ಲೂ ಮದ್ಯದ ದರವನ್ನು ಏರಿಕೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಮದ್ಯದ ಉತ್ಪನ್ನಗಳ ಬೆಲೆ ಇತರ ಎಲ್ಲಾ ರಾಜ್ಯಗಳಿಗಿಂತ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರತಿ ಬಾರಿ ಮದ್ಯ ಏರಿಕೆ ವಿಚಾರದ ಸಮಯದಲ್ಲಿ 10 ರಿಂದ 50 ರೂಪಾಯಿವರೆಗೆ ಏರಿಕೆ ಮಾಡಿದೆ.

ದಾಖಲೆಗಳು: 2022-23 ರಿಂದ 2023-24 ರವರೆಗೆ ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು, ಮಾರಾಟ ತೆರಿಗೆ/ವ್ಯಾಟ್ ಮತ್ತು ವಾಹನಗಳ ಮೇಲಿನ ತೆರಿಗೆಗಳು ಶೇ. 13-47 ರಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕೇವಲ 5 ರೂಪಾಯಿಗೆ ಸಿಗುತ್ತಿದ್ದ ಜನನ/ಮರಣ ಪ್ರಮಾಣಪತ್ರದ ದಾಖಲೆಗಳು ಈಗ 50 ರೂಪಾಯಿ ಆಗಿದೆ. ಇನ್ನೂ ಕೆಲವು ದಾಖಲೆಗಳಿಗೆ ಶೇ. 200 ರಿಂದ 300ರಷ್ಟು ದರ ಏರಿಕೆ ಮಾಡಲಾಗಿದೆ.

ಸ್ಥಿರ ಆಸ್ತಿಗಳು: ಮಾರ್ಚ್ 2024 ರಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ತಿದ್ದುಪಡಿಯು ಮನೆಗಳನ್ನು ಖರೀದಿಸುವುದನ್ನು ಇನ್ನಷ್ಟು ದುಬಾರಿಯನ್ನಾಗಿ ಮಾಡಿದೆ. ಏಕೆಂದರೆ ಮನೆ ಖರೀದಿದಾರರು ಆಸ್ತಿಯನ್ನು ಇನ್ನೂ ತಲುಪಿಸದಿರುವಾಗ ಮಾರಾಟ ಒಪ್ಪಂದವನ್ನು ನೋಂದಾಯಿಸಲು ಆಸ್ತಿ ಮೌಲ್ಯದ 0.5 ಪ್ರತಿಶತವನ್ನು ಸ್ಟಾಂಪ್ ಡ್ಯೂಟಿಯಾಗಿ ಪಾವತಿಸಬೇಕಾಗುತ್ತದೆ. ಮತ್ತು ಈ ನೋಂದಣಿಗೆ ಕನಿಷ್ಠ ಶುಲ್ಕವನ್ನು 500 ರೂ.ಗಳಿಗೆ ನಿಗದಿಪಡಿಸಲಾಗಿದೆ.

ಮೂಲಭೂತ ಆರೋಗ್ಯ ಸೇವೆ: ನವೆಂಬರ್‌ನಲ್ಲಿ, ಕರ್ನಾಟಕ ಸರ್ಕಾರವು ರಾಜ್ಯ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವಾ ಶುಲ್ಕವನ್ನು ಶೇಕಡಾ 50-100 ರಷ್ಟು ಹೆಚ್ಚಿಸಿತು, ಇದರಲ್ಲಿ ಒಪಿಡಿ ನೋಂದಣಿ ಶುಲ್ಕ, ರಕ್ತ ಪರೀಕ್ಷಾ ಶುಲ್ಕಗಳು, ವಾರ್ಡ್ ಶುಲ್ಕಗಳು ಸೇರಿವೆ. ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 10 ರೂಪಾಯಿಗೆ ಸಿಗುತ್ತಿದ್ದ ಸೇವೆಗಳಿಗೆ ಈಗ 50 ರಿಂದ 100 ರೂಪಾಯಿ ಆಗಿದೆ.

ಮೆಟ್ರೋ ದರ: ಬೆಂಗಳೂರನಲ್ಲಿ ಮೆಟ್ರೋ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಜನರ ಭಾರೀ ಪ್ರತಿಭಟನೆಯ ಹೊರತಾಗಿಯೂ ಸಿಎಂ ಸಿದ್ಧರಾಮಯ್ಯ ಸೂಚನೆಯ ಹೊರತಾಗಿಯೂ ಬೆಲೆ ಇಳಿಕೆ ಮಾಡುವ ವಿಚಾರದಲ್ಲಿ ಬಿಎಂಆರ್‌ಸಿಎಲ್‌ ಕ್ಯಾರೇ ಎನ್ನುತ್ತಿಲ್ಲ. ಇದರಿಂದಾಗಿ ನಗರದ ಜನ ಮೆಟ್ರೋ ಬಿಟ್ಟು ಮತ್ತೆ ಬೈಕ್‌ ಮೂಲಕವೇ ಕಚೇರಿ ತಲುಪಿವಂತಾಗಿದೆ.
 

ವಿದ್ಯುತ್‌: ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆಗೆ ಲೆಕ್ಕವೇ ಇಲ್ಲ. ಜನರಿಗೆ ಗೃಹಜ್ಯೋತಿ ಬಟ್ಟೆ ಕಟ್ಟಿ, ವಿದ್ಯುತ್‌ ಬೆಲೆಯನ್ನು ಬಾಯಿಗೆ ಬಂದಂತೆ ಸರ್ಕಾರ ಏರಿಕೆ ಮಾಡಿದೆ. ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ಪ್ರತಿ ಯುನಿಟ್‌ಮೇಲೆ 2.89 ರೂಪಾಯಿ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ, 2025ರ ಫೆಬ್ರವರಿಯಲ್ಲಿ ಪ್ರತಿ ಯುನಿಟ್‌ನ ಮೇಲೆ 36 ಪೈಸೆ ಏರಿಕೆ ಮಾಡಿದೆ. ಇದು ಅಲ್ಲಿನ ನೌಕರರ ಪಿಂಚಣಿ ಹಾಗೂ ಗ್ರ್ಯಾಚುಟಿಗಾಗಿ ಹೋಗಲಿದೆ. ಇನ್ನೇನು ಕೆಲವೇ ದಿನಗಳಲ್ಲಿ 2ನೇ ಹಂತದ ವಿದ್ಯುತ್‌ ದರ ಏರಿಕೆ ಕೂಡ ಘೋಷಣೆ ಆಗುವ ಹಾದಿಯಲ್ಲಿದೆ. 

ಇದೆಲ್ಲದರ ನಡುವೆ ಶೀಘ್ರದಲ್ಲಿಯೇ ನೀರಿದ  ದರ ಏರಿಕೆಯಾಗಲಿದೆ. ಲೀಟರ್‌ಗೆ ಬರೀ 1 ಪೈಸೆ ಏರಿಕೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳೀದ್ದಾರೆ. ಅದರರ್ಥ ಸರಾಸರಿ 3 ಸಾವಿರ ಲೀಟರ್‌ ಬಳಕೆ ಮಾಡುವ ಗ್ರಾಹಕ ತಿಂಗಳಿಗೆ 30 ರೂಪಾಯಿ ಹಣ ಹೆಚ್ಚುವರಿಯಾಗಿ ಪಾವತಿ ಮಾಡಬೇಕಿದೆ.

ಪ್ರಯಾಣಿಕರ ದರ ಏರಿಕೆ ಬೆನ್ನಲ್ಲೇ ಮೆಟ್ರೋ ಅಧಿಕಾರಿಗಳಿಗೆ ದುಬಾರಿ ಕಾರು: ಚರ್ಚೆಗೆ ಗ್ರಾಸ

ಇದೆಲ್ಲದರ ನಡುವೆ ಉಪಮುಖ್ಯಮಂತ್ರಿಗಳು, ನಮ್ಮ ಸರ್ಕಾರವು ವಿದ್ಯುತ್, ಪ್ರಯಾಣ ಮತ್ತು ಆಹಾರವನ್ನು "ಉಚಿತವಾಗಿ" ನೀಡುತ್ತಿದೆ ಎಂದು ಜನರ ಕಿವಿಗೆ ಲಾಲ್‌ಬಾಗ್‌ ಇಡುತ್ತಿದ್ದಾರೆ. ರಾಜ್ಯದ ಅಸ್ತಿತ್ವದಲ್ಲಿರುವ ಗ್ಯಾರಂಟಿ ಯೋಜನೆಗಳಿಂದ ಖಜಾನೆಯು ಹಣದ ಹೊರಹರಿವನ್ನು ತಡೆಯಲು ಸಾಧ್ಯವಿಲ್ಲ ಎಂದು ನಿಮ್ಮ ಸರ್ಕಾರ ಅರಿತುಕೊಂಡಿರುವುದು ಕರ್ನಾಟಕದಲ್ಲಿ ಜೀವನ ವೆಚ್ಚವನ್ನು ತುಂಬಾ ದುಬಾರಿಯನ್ನಾಗಿ ಮಾಡಿದೆ.

ಬೇರೆ ಕಡೆ ತೆರಿಗೆ ಪಡೆದು, ಇನ್ನೊಂದು ಕಡೆ ಕೊಡುತ್ತೇವೆ; ದೇಶ ಇರೋದೇ ಹೀಗೆ ಎಂದ ಸಂತೋಷ್‌ ಲಾಡ್‌!

ಒಟ್ಟಾರೆ ಬೆಲೆ ಏರಿಕೆ ಮೂಲಕ ಕಳೆದ 22 ತಿಂಗಳಲ್ಲಿ ರಾಜ್ಯ ಸರ್ಕಾರ ಜನರ ರಕ್ತ ಹೀರಿದ್ದು ಬಿಟ್ಟರೆ ಬೇರೇನನ್ನೂ ಮಾಡಿಲ್ಲ ಅನ್ನೋದು ಈಗ ಢಾಳಾಗಿ ಕಾಣುತ್ತಿದೆ.

vuukle one pixel image
click me!