ಸುಳ್ಳು ಸುದ್ದಿಗಳಿಂದ ಜನರ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ: ವಸುಧಾ ಗುಪ್ತ

Kannadaprabha News   | Asianet News
Published : Aug 19, 2020, 09:45 AM IST
ಸುಳ್ಳು ಸುದ್ದಿಗಳಿಂದ ಜನರ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ: ವಸುಧಾ ಗುಪ್ತ

ಸಾರಾಂಶ

ಸುಳ್ಳು ಸುದ್ದಿಗಳನ್ನು ಪರಿಶೀಲಿಸುವ ವ್ಯವಸ್ಥೆ ಮಾಧ್ಯಮಗಳಲ್ಲಿ ಆರಂಭ|  ಕನ್ನಡದಲ್ಲಿ ‘ಕನ್ನಡ ಪ್ರಭ’ ಮೊದಲ ಬಾರಿಗೆ ಇಂತಹ ಸಂದೇಶಗಳನ್ನು ಪರಿಶೀಲಿಸುವ ’ವೈರಲ್‌ ಚೆಕ್‌’ ಅಂಕಣ ಪ್ರಾರಂಭಿಸಿತ್ತು| ಡಿಜಿಟಲ್‌ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ವ್ಯವಸ್ಥೆಗಳಿಲ್ಲ| 

ಬೆಂಗಳೂರು(ಆ.19): ತಪ್ಪು ಮಾಹಿತಿಯಿಂದ ರೂಪುಗೊಂಡ ಸುದ್ದಿಗಿಂತ ಸುಳ್ಳು ಸುದ್ದಿಗಳು ಅಪಾಯಕಾರಿ. ಖರೇ ಅಂಕಿ ಅಂಶವನ್ನೇ ಬಳಸಿಕೊಂಡು ಪ್ರಚೋದನಾಕಾರಿ ಭಾಷೆಯನ್ನು ಬಳಸಿ ಸುದ್ದಿ ಮಾಡಲಾಗುತ್ತದೆ. ಇಂತಹ ಸುಳ್ಳು ಹಾಗೂ ಪ್ರಚೋದನಾಕಾರಿ ಸುದ್ದಿಗಳಿಂದ ಜನರ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದ್ದು, ಸರ್ಕಾರ ಇದರಿಂದ ಜನರನ್ನು ರಕ್ಷಿಸುವ ಪ್ರಯತ್ನದಲ್ಲಿದೆ ಎಂದು ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ (ಪಿಐಬಿ)ಯ ಮಹಾನಿರ್ದೇಶಕಿ ಡಾ. ವಸುಧಾ ಗುಪ್ತ ಹೇಳಿದ್ದಾರೆ.

ಪಿಐಬಿ ಮಂಗಳವಾರ ಆಯೋಜಿಸಿದ್ದ ‘ಸುಳ್ಳು ಸುದ್ದಿ ಮತ್ತು ಮಾಧ್ಯಮ’ ವೆಬಿನಾರ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಉದ್ದೇಶಪೂರ್ವಕವಾಗಿ ಸತ್ಯವನ್ನು ಮುಚ್ಚಿಟ್ಟು ತಪ್ಪು ಮಾಹಿತಿ ಬಿಂಬಿಸುವ ಮಾಧ್ಯಮಗಳ ಪ್ರಯತ್ನ ಅಕ್ಷಮ್ಯ. ಸಂವಹನದ ಸಿದ್ಧಾಂತಗಳಲ್ಲಿ ಸುಳ್ಳು ಸುದ್ದಿಗೆ ಮಾನ್ಯತೆಯಿಲ್ಲ. ಹೀಗಾಗಿ, ಇದೇ ವೇಳೆ ಸುಳ್ಳು ಸುದ್ದಿ ಹರಡುತ್ತಿರುವ ರೀತಿ, ಅದನ್ನು ನಿಯಂತ್ರಿಸುವ ಬಗೆ ಮತ್ತು ಕೇಂದ್ರ ಸರ್ಕಾರವು ತನ್ನ ವಾರ್ತಾ ಶಾಖೆಯಲ್ಲಿ ನಿಜಾಂಶ ಪತ್ತೆ ತಂಡವನ್ನು ನಿಯೋಜಿಸಿದೆ. ಇದರಿಂದ ಮಾಹಿತಿಯ ದೃಢೀಕರಣ ಆಗುತ್ತಿದೆ. ಮಾಧ್ಯಮಗಳಲ್ಲಿ ಬಂದಿರುವ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂಬ ಮಾಹಿತಿಯನ್ನು ವಸುಧಾ ಗುಪ್ತ ನೀಡಿದರು.

ಸುಳ್ಳು ಸುದ್ದಿ ಸೃಷ್ಟಿಸಾಮಾಜಿಕ ಅಪರಾಧ:

ವೆಬಿನಾರ್‌ನಲ್ಲಿ ‘ಸುಳ್ಳು ಸುದ್ದಿ- ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣ’ ವಿಷಯದ ಬಗ್ಗೆ ಅವರು ಮಾತನಾಡಿದ ‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರು, ತಂತ್ರಜ್ಞಾನದ ಫಲವಾಗಿ ವೇಗವಾಗಿ ಹಬ್ಬುವ ಸಾಮರ್ಥ್ಯ ಗಿಟ್ಟಿಸಿಕೊಂಡಿರುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌) ಆಧಾರಿತ ತಂತ್ರಜ್ಞಾನ ಅಭಿವೃದ್ಧಿಗೊಳ್ಳುತ್ತಿದೆ. ನಿಕಟ ಭವಿಷ್ಯದಲ್ಲಿ ಸುಳ್ಳು ಸುದ್ದಿಗಳನ್ನು ತಂತ್ರಜ್ಞಾನವೇ ತಡೆಗಟ್ಟುವ ಕಾಲ ಬರುತ್ತದೆ ಎಂದರು.

ಡಿಡಿಯಲ್ಲಿ ಮಕ್ಕಳಿಗೆ ಬೋಧನೆ: ಸುಳ್ಳು ಸುದ್ದಿಯಿಂದ ಪೋಷಕರು ಬೇಸ್ತು

ಮುದ್ರಣ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುವ ಪ್ರಮಾಣ ಕಡಿಮೆ. ಮುದ್ರಣ ಮಾಧ್ಯಮದಲ್ಲಿ ಹಿರಿಯ ಸಂಪಾದಕರು ಸುದ್ದಿಗಳನ್ನು ಪರಿಶೀಲಿಸುವ ವ್ಯವಸ್ಥೆಯಿದೆ. ಆದರೆ ವಿದ್ಯುನ್ಮಾನ ಮಾಧ್ಯಮದಲ್ಲಿ ಬ್ರೇಕಿಂಗ್‌ ನ್ಯೂಸ್‌ ಎಂಬುದು ಒಂದು ರೀತಿಯ ಗಡಿಬಿಡಿಯ ಸುದ್ದಿ. ಇಲ್ಲಿ ಕೆಲವು ಸುಳ್ಳು ಸುದ್ದಿಗಳು ಉದ್ದೇಶಪೂರ್ವಕವಾಗಿಯೂ ಇನ್ನು ಕೆಲವು ಉದ್ದೇಶಪೂರ್ವಕವಲ್ಲದ್ದು ಇರುತ್ತದೆ. ಆದರೆ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡುತ್ತಿದೆ ಎಂದರು.

ಈ ಸುಳ್ಳು ಸುದ್ದಿಗಳನ್ನು ಪರಿಶೀಲಿಸುವ ವ್ಯವಸ್ಥೆ ಮಾಧ್ಯಮಗಳಲ್ಲಿ ಆರಂಭವಾಗಿದೆ. ಕನ್ನಡದಲ್ಲಿ ‘ಕನ್ನಡ ಪ್ರಭ’ ಮೊದಲ ಬಾರಿಗೆ ಇಂತಹ ಸಂದೇಶಗಳನ್ನು ಪರಿಶೀಲಿಸುವ ’ವೈರಲ್‌ ಚೆಕ್‌’ ಅಂಕಣ ಪ್ರಾರಂಭಿಸಿತ್ತು. ಈಗ ಪ್ರತಿ ಮಾಧ್ಯಮ ಸಂಸ್ಥೆ ಕೂಡ ’ಫ್ಯಾಕ್ಟ್ ಚೆಕ್‌’ ತಂಡವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಮಾಧ್ಯಮಗಳಿಗೆ ಜನರ ವಿಶ್ವಾಸ ಮುಖ್ಯ

ಈ ಸಂದರ್ಭದಲ್ಲಿ ‘ಪತ್ರಿಕಾರಂಗ- ನೈತಿಕತೆ ಮತ್ತು ಸುಳ್ಳು ಸುದ್ದಿ’ ವಿಷಯದ ಮಂಡನೆ ಮಾಡಿದ ಬೆಂಗಳೂರು ವಿವಿಯ ಸಂವಹನ ವಿಭಾಗದ ಮುಖ್ಯಸ್ಥ ಬಿ.ಕೆ.ರವಿ ಅವರು, ಸಂವಹನ ಎಂದರೆ ಸಂವಹನಕಾರ ಮೊದಲು ಮಾಹಿತಿಯನ್ನು ಅರಗಿಸಿಕೊಂಡು ಆ ಬಳಿಕ ಅದನ್ನು ದಾಟಿಸುವುದು. ಈ ಮಾದರಿಯಲ್ಲಿ ಮುದ್ರಣ ಮಾಧ್ಯಮದಲ್ಲಿ ಸುದ್ದಿಯನ್ನು ಪರಿಶೀಲಿಸುವ ವ್ಯವಸ್ಥೆಯಿದೆ. ಆದರೆ ಡಿಜಿಟಲ್‌ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ವ್ಯವಸ್ಥೆಗಳಿಲ್ಲ. ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳು ಸ್ಪರ್ಧಾತ್ಮಕತೆಯ ನಾಗಲೋಟಕ್ಕೆ ಬಿದ್ದು ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹೋಗುತ್ತಿಲ್ಲ. ಇದರಿಂದ ಮಾಧ್ಯಮಗಳ ಮೇಲಿನ ಜನರ ವಿಶ್ವಾಸಾರ್ಹತೆಗೆ ಕುಂದುಂಟಾಗುತ್ತಿದೆ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಧರ್ಮಸ್ಥಳ ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌: ಬಿಜೆಪಿ ನಾಯಕರ ತೀವ್ರ ಆರೋಪ
ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ