ಬೆಂಗಳೂರು: 'ಹಸಿಕಸ ಟೆಂಡರ್‌ ಹಿಂದೆ ಅವ್ಯವಹಾರದ ಸಂಶಯ’

By Kannadaprabha NewsFirst Published Aug 19, 2020, 9:25 AM IST
Highlights

ಪ್ರತ್ಯೇಕ ಟೆಂಡರ್‌ ಬೇಡವೆಂದರೂ ನೀಡಿದ್ದೇಕೆ: ಮಾಜಿ ಮೇಯರ್‌ ಮಂಜುನಾಥ ರೆಡ್ಡಿ| ಇನ್ನು ಮೂರು ದಿನಗಳಲ್ಲಿ ಈ ವಿಷಯ ಚರ್ಚೆ ಮಾಡಿ ತಿಳಿಸಲಾಗುವುದು ಎಂದ ಆಯುಕ್ತ ಮಂಜುನಾಥ್‌ ಪ್ರಸಾದ್‌| ಲ್ಯಾಪ್‌ಟಾಪ್‌ ವಿತರಿಸಲು ಪಾಲಿಕೆ ಸದಸ್ಯರ ತೀವ್ರ ಒತ್ತಡ| 

ಬೆಂಗಳೂರು(ಆ.19): ಹಸಿ ಕಸ ಟೆಂಡರ್‌ ಕುರಿತು ಮೇಯರ್‌ ಅಧ್ಯಕ್ಷತೆಯ ರಚಿಸಲಾದ ಪರಿಶೀಲನಾ ಸಮಿತಿ ಸದಸ್ಯರ ಅಭಿಪ್ರಾಯದ ವಿರುದ್ಧವಾಗಿ ಹಸಿ ಟೆಂಡರ್‌ ಆಹ್ವಾನಿಸಿ ಗುತ್ತಿಗೆ ನೀಡಿರುವ ಹಿಂದೆ ಕೋಟ್ಯಂತರ ರುಪಾಯಿ ಅವ್ಯವಹಾರದ ಸಂಶಯ ವ್ಯಕ್ತವಾಗುತ್ತಿದೆ ಎಂದು ಮಾಜಿ ಮೇಯರ್‌ ಆರೋಪಿಸಿದ್ದಾರೆ.

ಮಂಗಳವಾರ ನಡೆದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿದ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ, ಹಸಿ ತ್ಯಾಜ್ಯಕ್ಕೆ ಪ್ರತ್ಯೇಕ ಟೆಂಡರ್‌ ಆಹ್ವಾನಿಸುವ ಸಂಬಂಧ ಮೇಯರ್‌ ಅಧ್ಯಕ್ಷತೆಯಲ್ಲಿ ಮಾಜಿ ಮೇಯರ್‌, ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಮುಖಂಡರು, ಆಯುಕ್ತರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಹಸಿ ಕಸ ಪ್ರತ್ಯೇಕ ಟೆಂಡರ್‌ ಬೇಡ, ಹಸಿ, ಒಣ ಹಾಗೂ ಸ್ಯಾನಿಟರಿ ಸೇರಿದಂತೆ ಎಲ್ಲ ವಿಧವಾದ ಕಸ ಸಂಗ್ರಹಿಸಿ ವಿಲೇವಾರಿಗೆ ಒಬ್ಬರೇ ಗುತ್ತಿಗೆದಾರರನ್ನು ನೇಮಿಸುವಂತೆ ತಿಳಿಸಲಾಗಿತ್ತು. ಆದರೆ, ಸಭೆಯ ನಡಾವಳಿಯಲ್ಲಿ ಹಸಿ ತ್ಯಾಜ್ಯಕ್ಕೆ ಪ್ರತ್ಯೇಕ ಟೆಂಡರ್‌ ಆಹ್ವಾನಿಸುವುದಕ್ಕೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಆರೋಪಿಸಿದರು.

ಬಿಬಿಎಂಪಿ: ಕಸ ಗುಡಿಸುವ ಯಂತ್ರ ಟೆಂಡರ್‌ಗೆ ಆಡಳಿತ ಪಕ್ಷದ ಸದಸ್ಯರಿಂದಲೇ ವಿರೋಧ

ಮೇಯರ್‌ ಗೌತಮ್‌ ಕುಮಾರ್‌ ಮಾತನಾಡಿ, ಕಳೆದ ಏಳು ವರ್ಷ ಕಸ ವಿಲೇವಾರಿಯ ಡಿಸಿ ಬಿಲ್‌ ಹೆಸರಿನಲ್ಲಿ ಕೋಟ್ಯಂತರ ರು. ಆರ್ಥಿಕ ನಷ್ಟವಾಗಿದೆ. ಹಸಿ ಕಸ ಪ್ರತ್ಯೇಕ ಟೆಂಡರ್‌ನಿಂದ ಬಿಬಿಎಂಪಿ ಸುಮಾರು .300 ಕೋಟಿಗೂ ಅಧಿಕ ಹಣ ಉಳಿತಾಯವಾಗಲಿದೆ ಎಂದು ಸ್ಪಷ್ಟಪಡಿಸಿದರು. ಇದನ್ನು ಒಪ್ಪದ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಸಭಾತ್ಯಾಗ ಮಾಡಿದರು.

ಲ್ಯಾಪ್‌ಟಾಪ್‌ ವಿತರಿಸಲು ಪಾಲಿಕೆ ಸದಸ್ಯರ ತೀವ್ರ ಒತ್ತಡ

ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಳ್ಳುವುದರೊಳಗಾಗಿ ಮಕ್ಕಳಿಗೆ ಲ್ಯಾಪ್‌ಟಾಪ್‌ ವಿತರಣೆಗೆ ವ್ಯವಸ್ಥೆ ಮಾಡಿ ಎಂದು ಬಿಬಿಎಂಪಿ ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದರು. ಸೋಮವಾರ ನಡೆದ ಮಾಸಿಕ ಸಭೆಯಲ್ಲಿ ಕಲ್ಯಾಣ ವಿಭಾಗದ ಅಧಿಕಾರಿಗಳು ಕಡತಗಳು ಕಂಬ ಸುತ್ತಿಸುವಂತೆ ಮಾಡುತ್ತಿರುವುದರಿಂದ ಪಾಲಿಕೆ ಕಲ್ಯಾಣ ಕಾರ್ಯಕ್ರಮ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.

ಸದಸ್ಯ ಪಾರ್ಥಿಬ ರಾಜನ್‌, ಸೆ.10ಕ್ಕೆ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಳ್ಳುವ ಮುನ್ನ ಬಡ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಲು ಶೀಘ್ರವಾಗಿ ಲ್ಯಾಪ್‌ ಟಾಪ್‌ ವಿತರಿಸಲು ಆದೇಶಿಸಿ ಇಲ್ಲವೇ ಇಲ್ಲವೇ ಆನ್‌ಲೈನ್‌ ಶಿಕ್ಷಣ ನಿಲ್ಲಿಸಿ ಎಂದು ಆಗ್ರಹಿಸಿದರು. ಈ ಕುರಿತು ಉತ್ತರ ನೀಡಿದ ಆಯುಕ್ತ ಮಂಜುನಾಥ್‌ ಪ್ರಸಾದ್‌, ಇನ್ನು ಮೂರು ದಿನಗಳಲ್ಲಿ ಈ ವಿಷಯ ಚರ್ಚೆ ಮಾಡಿ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ವಿಶೇಷ ಆಯುಕ್ತರಿಂದ ಸುಳ್ಳು ಕ್ವಾರಂಟೈನ್‌?

ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಎಸ್‌.ಜಿ ರವೀಂದ್ರ ಅವರು ಕ್ವಾರಂಟೈನ್‌ನಲ್ಲಿರುವುದಾಗಿ ಸುಳ್ಳು ಹೇಳಿದ್ದಾರೆ. ಇವರ ಬಗ್ಗೆ ಮೊದಲಿನಿಂದಲೂ ದೂರುಗಳು ಕೇಳಿಬರುತ್ತಿವೆ. ಈಗಾಗಲೇ ಅವರನ್ನು ಮಾತೃ ಇಲಾಖೆಗೇ ಕರೆಸಿಕೊಳ್ಳುವಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಮೇಯರ್‌ ಗೌತಮ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.
 

click me!