ಬೆಂಗಳೂರಲ್ಲಿ ಮತ್ತೊಂದು ‘ಎಲೆಕ್ಟ್ರಾನಿಕ್‌ ಸಿಟಿ’ಗೆ ಸಿದ್ಧತೆ: 1000 ಎಕರೆಯಲ್ಲಿ ‘ಸ್ವಿಫ್ಟ್‌ ಸಿಟಿ’ ನಿರ್ಮಾಣ

By Kannadaprabha News  |  First Published Dec 15, 2024, 8:15 AM IST

ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್‌ ಸಿಟಿ, ಐಟಿಪಿಎಲ್‌ ಮಾದರಿಯಲ್ಲೇ ಮತ್ತೊಂದು ಹೊಸ ಯೋಜಿತ ನಗರ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ರಾಜಧಾನಿಯ ಸರ್ಜಾಪುರದಲ್ಲಿ ಸುಮಾರು ಒಂದು ಸಾವಿರ ಎಕರೆ ವ್ಯಾಪ್ತಿಯಲ್ಲಿ ‘ಸ್ವಿಫ್ಟ್ ಸಿಟಿ’ ನಿರ್ಮಿಸಲು ಉದ್ದೇಶಿಸಲಾಗಿದೆ.
 


ಬೆಂಗಳೂರು (ಡಿ.15): ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್‌ ಸಿಟಿ, ಐಟಿಪಿಎಲ್‌ ಮಾದರಿಯಲ್ಲೇ ಮತ್ತೊಂದು ಹೊಸ ಯೋಜಿತ ನಗರ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ರಾಜಧಾನಿಯ ಸರ್ಜಾಪುರದಲ್ಲಿ ಸುಮಾರು ಒಂದು ಸಾವಿರ ಎಕರೆ ವ್ಯಾಪ್ತಿಯಲ್ಲಿ ‘ಸ್ವಿಫ್ಟ್ ಸಿಟಿ’ (SWIFT- Startup, Work-Spaces, Intelligence, Finance & Technology) ನಿರ್ಮಿಸಲು ಉದ್ದೇಶಿಸಲಾಗಿದೆ.

ರಾಜ್ಯದಲ್ಲಿ ಕೈಗಾರಿಕೆಗಳು, ಉದ್ಯಮಗಳ ಸ್ಥಾಪನೆ ಉತ್ತೇಜಿಸುವ ಸಲುವಾಗಿ ಈ ನಗರ ಸ್ಥಾಪಿಸಲಾಗುತ್ತಿದೆ. ಸ್ವಿಫ್ಟ್ ಸಿಟಿಯಲ್ಲಿ ನವೋದ್ಯಮ, ಕೆಲಸದ ಸ್ಥಳಗಳು, ಬುದ್ಧಿಮತ್ತೆ, ಹಣಕಾಸು ಮತ್ತು ತಂತ್ರಜ್ಞಾನ ಸಂಬಂಧಿಸಿದ ಉದ್ಯಮಗಳನ್ನು ಸ್ಥಾಪಿಸಲಾಗುತ್ತದೆ. ಎಲೆಕ್ಟ್ರಾನಿಕ್ ಸಿಟಿ ಮತ್ತು ಐಟಿಪಿಎಲ್ ನಂತರ ಸರ್ಕಾರವೇ ಸ್ಥಾಪಿಸುತ್ತಿರುವ ಯೋಜಿತ ನಗರ ಇದಾಗಲಿದೆ. ಅದಕ್ಕಾಗಿ ಸರ್ಜಾಪುರ ಕೈಗಾರಿಕಾ ಪ್ರದೇಶದಲ್ಲಿ 1000 ಎಕರೆಗೂ ಹೆಚ್ಚು ಜಮೀನು ಮೀಸಲಿಡಲಾಗುವುದು ಎಂದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

Tap to resize

Latest Videos

ಕಾಂಗ್ರೆಸ್ಸಿಗರ ರಕ್ಷಣೆಗಾಗಿ ನಾನು ಯಾಕೆ ₹150 ಕೋಟಿ ಆಮಿಷವೊಡ್ಡಲಿ: ವಿಜಯೇಂದ್ರ

ಅತ್ಯಾಧುನಿಕ ಸೌಲಭ್ಯ: ಬೆಂಗಳೂರಿನಲ್ಲಿ ಸಾವಿರಾರು ಕಂಪನಿಗಳಿದ್ದರೂ ಯೋಜಿತ ಮತ್ತು ವ್ಯವಸ್ಥಿತ ಪ್ರದೇಶದಲ್ಲಿ ಸ್ಥಾಪನೆಯಾಗಿಲ್ಲ ಎನ್ನುವ ಅಸಮಾಧಾನ ಇದೆ. ಹೀಗಾಗಿ, ಸರ್ಜಾಪುರದಲ್ಲಿ 150 ಮೀಟರ್‌ ಅಗಲದ ಸಂಪರ್ಕ ರಸ್ತೆ, ವಿಶ್ವದರ್ಜೆಯ ಸೌಲಭ್ಯಗಳು, ವಸತಿ ವ್ಯವಸ್ಥೆ, ಶಾಲೆಗಳು ಸೇರಿ ಅಗತ್ಯ ಆಧುನಿಕ ಸೌಕರ್ಯಗಳೊಂದಿಗೆ ಸ್ವಿಫ್ಟ್ ಸಿಟಿ ಅಭಿವೃದ್ಧಿ ಪಡಿಸಲಾಗುವುದು. ನೆರೆ ರಾಜ್ಯಗಳಿಂದ ತೀವ್ರ ಸ್ಪರ್ಧೆ ಇರುವ ಕಾರಣ ಇಂತಹ ಉಪಕ್ರಮ ಅನಿವಾರ್ಯ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 44 ಮತ್ತು 48ಕ್ಕೆ ಹತ್ತಿರದಲ್ಲಿರುವ ಸರ್ಜಾಪುರ ಸಮೀಪದಲ್ಲಿ ಅನೇಕ ಐಟಿ-ಬಿಟಿ ಪ್ರದೇಶಗಳಿವೆ. ಸಂಪರ್ಕವೂ ಉತ್ತಮವಾಗಿದೆ. ಇದು ಸ್ಟಾರ್ಟಪ್ ಹಬ್ ಆಗಲಿದ್ದು, 8-10 ಅತ್ಯಾಧುನಿಕ ಪ್ಲಗ್ ಆ್ಯಂಡ್ ಪ್ಲೇ ಸೌಲಭ್ಯಗಳು ಇರಲಿವೆ. ಇಂಥ ಒಂದೊಂದು ಕೇಂದ್ರಕ್ಕೆ 20ರಿಂದ 25 ಎಕರೆ ಜಮೀನು ನೀಡಲಾಗುವುದು. ಇಲ್ಲಿ ಸುಸಜ್ಜಿತ ಕಚೇರಿಗಳು, ವಸತಿ ಪ್ರದೇಶಗಳು, ಕೋ-ವರ್ಕಿಂಗ್ ತಾಣಗಳು ಇರಲಿವೆ.

ಸ್ವಿಫ್ಟ್ ಸಿಟಿಯಲ್ಲಿನ ಸಣ್ಣ ಮತ್ತು ಮಧ್ಯಮ ಗಾತ್ರದ ಸ್ಟಾರ್ಟಪ್‌ಗಳಿಗೆ ಕನಿಷ್ಠ 5,000 ಚದರ ಅಡಿಯಿಂದ 20,000 ಚದರ ಅಡಿಗಳಷ್ಟು ಜಾಗವನ್ನು ಭೋಗ್ಯ, ಕ್ರಯ ಅಥವಾ ಬಂಡವಾಳ ಆಧರಿತ ಹಂಚಿಕೆ ಮಾದರಿಯಲ್ಲಿ ಒದಗಿಸಲಾಗುವುದು. ಈ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಬಗೆಯ ಉದ್ಯಮಗಳ ಅಗತ್ಯಗಳನ್ನು ಪೂರೈಸುತ್ತೇವೆ. ಕೃತಕ ಬುದ್ಧಿಮತ್ತೆ, ಡೇಟಾ ಅನಾಲಿಟಿಕ್ಸ್ ಮತ್ತು ಫಿನ್-ಟೆಕ್ ನಾವೀನ್ಯತಾ ಕೇಂದ್ರವಾಗಿಯೂ ಸ್ವಿಫ್ಟ್ ಸಿಟಿ ಮುಂಚೂಣಿಗೆ ಬರಲಿದೆ ಎಂದು ವಿವರಿಸಿದ್ದಾರೆ.

ಸಿಲಿಕಾನ್ ರಾಜ್ಯ ಪರಿಕಲ್ಪನೆ: ರಾಜ್ಯದ ಬೇರೆ ಬೇರೆ ನಗರಗಳಲ್ಲೂ ಐಟಿ ಪಾರ್ಕ್ ನಿರ್ಮಿಸುವ ಮೂಲಕ ಕರ್ನಾಟಕವನ್ನು ಹಂತಹಂತವಾಗಿ ಸಿಲಿಕಾನ್ ರಾಜ್ಯವನ್ನಾಗಿ ಮಾಡಲಾಗುವುದು. ವಿಜಯಪುರ, ಹುಬ್ಬಳ್ಳಿ-ಧಾರವಾಡ ಸೇರಿ 5 ನಗರಗಳಲ್ಲಿ ಮಿನಿ ಕ್ವಿನ್ ಸಿಟಿ ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕೆ ಐಟಿ ಇಲಾಖೆ ಸಹಕಾರವನ್ನೂ ಪಡೆಯಲಾಗುವುದು. ಫೆಬ್ರವರಿಯಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಏನಿದು ಸ್ವಿಫ್ಟ್‌ ಸಿಟಿ?: ಸ್ಟಾರ್ಟಪ್‌, ವರ್ಕ್‌ಸ್ಪೇಸಸ್‌, ಇಂಟೆಲಿಜೆನ್ಸ್‌, ಫೈನಾನ್ಸ್‌ ಅಂಡ್‌ ಟೆಕ್ನಾಲಜಿಯ ಸಂಕ್ಷಿಪ್ತ ರೂಪ. ಎಲೆಕ್ಟ್ರಾನಿಕ್‌ ಸಿಟಿ, ಐಟಿಪಿಎಲ್‌ ಬಳಿಕ ಉದ್ಯಮ ವಲಯಕ್ಕಾಗಿ ಸರ್ಕಾರ ಸ್ಥಾಪಿಸುತ್ತಿರುವ ಮೂರನೇ ಯೋಜಿತ ನಗರ.

ಸ್ವಿಫ್ಟ್‌ ಸಿಟಿ ಯಾಕೆ?: ಬೆಂಗಳೂರಿನಲ್ಲಿ ಸಾವಿರಾರು ಕಂಪನಿ ಇವೆ. ಆದರೆ ಯೋಜಿತ, ವ್ಯವಸ್ಥಿತವಾಗಿಲ್ಲ ಎಂಬ ದೂರು ಇದೆ. ಹೀಗಾಗಿ ವಿಶ್ವದರ್ಜೆಯ ಸೌಲಭ್ಯದ ಸಿಟಿ ನಿರ್ಮಾಣದ ಉದ್ದೇಶ. ನೆರೆ ರಾಜ್ಯಗಳ ತೀವ್ರ ಪೈಪೋಟಿ ಎದುರಿಸುವ ಗುರಿ.

ಏನೇನಿರಲಿದೆ?: 150 ಮೀಟರ್ ಅಗಲದ ಸಂಪರ್ಕ ರಸ್ತೆ, ಸುಸಜ್ಜಿತ ಕಚೇರಿ, ವಸತಿ ವ್ಯವಸ್ಥೆ, ಶಾಲೆ, ವಿಶ್ವದರ್ಜೆಯ ಸೌಲಭ್ಯಗಳು ಇರಲಿವೆ.

150 ಕೋಟಿ ಆಮಿಷವೊಡ್ಡಿದ ವಿಜಯೇಂದ್ರ ಮೇಲೆ ಪ್ರಧಾನಿ ಸಿಬಿಐ ತನಿಖೆ ಮಾಡಿಸ್ಲಿ: ಸಿದ್ದರಾಮಯ್ಯ

ನೆರೆ ರಾಜ್ಯಗಳ ಸ್ಪರ್ಧೆ ಎದುರಿಸಿ ನವೋದ್ಯಮಗಳು, ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಿಸಲು ಎಲ್ಲಾ ಅಗತ್ಯ ಸೌಕರ್ಯಗಳಿರುವ ಆತ್ಯಾಧುನಿಕ ಸ್ವಿಫ್ಟ್ ಸಿಟಿ ನಿರ್ಮಿಸಲಾಗುತ್ತದೆ. ಈ ಮೂಲಕ ಕೈಗಾರಿಕೆಗಳ ಬೆಳವಣಿಗೆಗೆ ವೇಗ ನೀಡಲಾಗುತ್ತದೆ.
- ಎಂ.ಬಿ.ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು

click me!