ರಾಜ್ಯದ ವಿಶಿಷ್ಟ ಪರಂಪರೆಯಾದ ಹವ್ಯಕರ ಸಂಸ್ಕೃತಿ ಅನಾವರಣಗೊಳಿಸುವ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಡಿ.27ರಿಂದ 29ರವರೆಗೆ ನಗರದ ಅರಮನೆ ಮೈದಾನದ ರಾಯಲ್ ಸೆನೆಟ್ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ನಡೆಯಲಿದ್ದು, ಅಖಿಲ ಹವ್ಯಕ ಮಹಾಸಭಾ ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡು ಸಜ್ಜಾಗಿದೆ.
ಬೆಂಗಳೂರು (ಡಿ.14): ರಾಜ್ಯದ ವಿಶಿಷ್ಟ ಪರಂಪರೆಯಾದ ಹವ್ಯಕರ ಸಂಸ್ಕೃತಿ ಅನಾವರಣಗೊಳಿಸುವ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಡಿ.27ರಿಂದ 29ರವರೆಗೆ ನಗರದ ಅರಮನೆ ಮೈದಾನದ ರಾಯಲ್ ಸೆನೆಟ್ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ನಡೆಯಲಿದ್ದು, ಅಖಿಲ ಹವ್ಯಕ ಮಹಾಸಭಾ ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡು ಸಜ್ಜಾಗಿದೆ. ಮೊದಲ ಬಾರಿಗೆ 1996ರಲ್ಲಿ ಮತ್ತು ಎರಡನೇ ಬಾರಿ 2018ರ ಬಳಿಕ ತೃತೀಯ ಸಮ್ಮೇಳನ ಈಗ ಆಯೋಜನೆಗೊಂಡಿದೆ. ಹವ್ಯಕರ ಶ್ರೇಷ್ಠತೆ, ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಸಮ್ಮೇಳನ ಯಶಸ್ಸಿಗೆ ಸಮಾಜ ಅಣಿಯಾಗಿದೆ.
ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಕೇರಳ, ಕಾಸರಗೋಡಿನಿಂದ ಲಕ್ಷಾಂತರ ಹವ್ಯಕರು ಪಾಲ್ಗೊಳ್ಳಲಿದ್ದಾರೆ. ಹವ್ಯಕರ ಧಾರ್ಮಿಕತೆ, ಸಂಸ್ಕೃತಿ, ಭಾಷೆ, ಅಡುಗೆ ಸೇರಿ ಜೀವನ ಪದ್ಧತಿಯ ವಿಶೇಷತೆಯನ್ನು ಸಮ್ಮೇಳನ ಪ್ರತಿಫಲಿಸಲಿದೆ. ಹವ್ಯಕ ಮಹಾಸಭೆಗೆ 81 ವರ್ಷ ತುಂಬಿರುವ ಪ್ರಯುಕ್ತ ಹಸಿರಾಗಿಸಲು ಸಹಸ್ರಚಂದ್ರ ಸ್ಮರಣ ಸಂಚಿಕೆ ಲೋಕಾರ್ಪಣೆ ಆಗಲಿದೆ. ಅದಕ್ಕೆ ತಕ್ಕಂತೆ ಹಲವು ಕಾರ್ಯಕ್ರಮ ಪಟ್ಟಿಯನ್ನು 81ರ ಸಂಖ್ಯೆಗೆ ಅನುಗುಣವಾಗಿ ರೂಪಿಸಿಕೊಳ್ಳಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ್ ಕಜೆ ತಿಳಿಸಿದ್ದಾರೆ.
ಕಾನೂನು ನನಗೂ ಒಂದೇ, ಸ್ವಾಮೀಜಿಗೂ ಒಂದೇ: ಸಿಎಂ ಸಿದ್ದರಾಮಯ್ಯ
ವಿಶೇಷ ಕಾರ್ಯಕ್ರಮ: ಮೂರು ದಿನ 8 ಗೋಷ್ಠಿ, 18 ಚಿಂತನ ಮಂಥನ ಆಯೋಜಿಸಲಾಗಿದೆ. ಹವ್ಯಕ ಮಹಾಸಭಾ- ಸಮಗ್ರ ನೋಟ ಕೃತಿ ಲೋಕಾರ್ಪಣೆ ಆಗಲಿದೆ. ಹವ್ಯಕ ನೆಲೆಯ ಅವಿಚ್ಛಿತ್ರ ಜ್ಯೋತಿ ಬರಲಿದೆ. ಪ್ರತಿನಿತ್ಯ ಹವ್ಯ - ಯಜ್ಞ ನಡೆಯಲಿದೆ. ವಿಶೇಷವಾಗಿ ಗಾಯತ್ರಿ ಥೀಮ್ ಪಾರ್ಕ್- ಮೂಲಮಂತ್ರದ ವಿರಾಟ್ ದರ್ಶನ, ದೇಶೀ ಗೋ ಲೋಕ, ಯಾಗ ಮಂಡಲ ಕಲಾ ಪ್ರದರ್ಶನ, ಪ೦ಚಾ೦ಗ ದರ್ಶನ, ಖಗೋಳ ವಿಜ್ಞಾನದ ಪ್ರದರ್ಶನ ಇರಲಿದೆ. ಹಾಗೆಯೇ, ಹವ್ಯಕರ ಅಡಕೆ ಪ್ರಪಂಚ ಕೃಷಿ, ಯಕ್ಷ ಕಿರೀಟ, ಛಾಯಾ ಸಂಪ್ರದಾಯ-ಸಂಸ್ಕೃತಿ ಪರಂಪರೆಯ ದೃಶ್ಯಕಾವ್ಯ ಕಾಣಬಹುದು.
undefined
ಸಂಗೀತ-ನಾಟ್ಯ-ಯಕ್ಷ: ಖ್ಯಾತ ಕಲಾವಿದರಿಂದ ಶಾಸ್ತ್ರೀಯ ಸಂಗೀತ, ಸುಪ್ರಸಿದ್ಧ ಯಕ್ಷ ಕಲಾವಿದರ ಅಪೂರ್ವ ವೈಭವ, ವೈವಿಧ್ಯಮಯ ನಾಟ್ಯೋತ್ಸವ ಕಣ್ತುಂಬಿಕೊಳ್ಳಬಹುದು. ವಾದ್ಯ ವೈಭವ, ಭಕ್ತಿ ಭಜನೆ, ಗೀತಾ ಸಂಪ್ರೀತಾ- ಸಾಮೂಹಿಕ ಭಗವದ್ಗೀತಾ ಪಠಣ, ಹವ್ಯಕ ನಾಟಕ ಆಯೋಜಿಸಲಾಗಿದೆ. ಇನ್ನು, ಹವ್ಯಕ ನಡಿಗೆ- ವಿಶ್ವದೆಡೆಗೆ ಎಂಬ ವಾಕಥಾನ್, ಬೈಕ್ ರ್‍ಯಾಲಿ ಇರಲಿದೆ.
ಪ್ರಶಸ್ತಿ ಪ್ರದಾನ: ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ತಲಾ 81 ಸಾಧಕರು ಸೇರಿ ಒಟ್ಟಾರೆ 567 ಶ್ರೇಷ್ಠ ಸಾಧಕರಿಗೆ ಪ್ರಶಸ್ತಿಯ ಅತ್ಯುನ್ನತ ಗೌರವ ಪ್ರದಾನ ಆಗಲಿದೆ. 81 ಶ್ರೇಷ್ಠ ಸಾಧಕರಿಗೆ ಹವ್ಯಕ ಸಾಧಕರತ್ನ ಪ್ರಶಸ್ತಿ, 81 ವೈದಿಕರಿಗೆ ಹವ್ಯಕ ವೇದರತ್ನ ಸಮ್ಮಾನ ಆಗಲಿದೆ. ಅದರಂತೆ ಹವ್ಯಕ ಕೃಷಿರತ್ನ, ಹವ್ಯಕ ಶಿಕ್ಷಕರತ್ನ, ವಿದ್ಯಾರ್ಥಿಗಳಿಗೆ ಹವ್ಯಕ ವಿದ್ಯಾರತ್ನ, ಯೋಧರಿಗೆ ಹವ್ಯಕ ದೇಶರತ್ನ, ಹವ್ಯಕ ಸ್ಪೂರ್ತಿರತ್ನ ಪ್ರಶಸ್ತಿಗೆ ತಲಾ 81 ಸಾಧಕರು ಭಾಜನರಾಗುವರು. ವಿಶೇಷವಾಗಿ 81 ಕಲಾವಿದರ ತಂಡದಿಂದ ನರ್ತನ ಸಂಕೀರ್ತನ, ಹವಿಗನ್ನಡದ ಸಾಹಿತ್ಯ ಪ್ರದರ್ಶನ, ರಕ್ತದಾನ, 81 ವಾಣಿಜ್ಯ, 81 ದೇಶೀ ಕರಕುಶಲ ಮಳಿಗೆ, ಆಲೆಮನೆ ಕೂಡ ಇರಲಿವೆ.
ಪ್ರದರ್ಶನ, ಸ್ಪರ್ಧೆ: ಹವ್ಯಕ ಪಾರಂಪರಿಕ ವಸ್ತು ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಹವ್ಯಕರ ಆಹಾರ, ರಂಗೋಲಿ, ಹವ್ಯಕ ಸಂಪ್ರದಾಯದ ಚಿತ್ರಕಲೆ, ಹೂಕುಂಡ-ಇಕಬಾನ, ಮಕ್ಕಳಿಗಾಗಿ ಹವ್ಯಕ ಸಂಸ್ಕೃತಿಯ ಚಿತ್ರ ಸ್ಪರ್ಧೆ, ಸಮ್ಮೇಳನದ ಸೆಲ್ಫಿ ಸ್ಪರ್ಧೆ ಆಯೋಜನೆ ಆಗಿದೆ. ವಿಜೇತರಿಗೆ 81 ಬಹುಮಾನ ಸಿಗಲಿವೆ. ಹವಿ ಆರ್ಟ್ ಟಿ ಶರ್ಟ್, ಹವ್ಯಕ ಪಾಕೋತ್ಸವ ಇರಲಿದೆ. ಹವ್ಯಕ ಸಮುದಾಯದವರು ಆರಾಧಿಸುವ ರಾಮಚಂದ್ರಾಪುರ ಮಠ, ಸ್ವರ್ಣವಲ್ಲಿ ಮಠ ಹಾಗೂ ನೆಲೆಮಾವು ಮಠದ ಮಠಾಧೀಶರ ಜೊತೆಗೆ ಇನ್ನುಳಿದ ಮಠಾಧೀಶರು, ರಾಜಕೀಯ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರನ್ನು ಆಹ್ವಾನಿಸಲಾಗುತ್ತದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮೇಳನದ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಬೈಕ್ ವ್ಹೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ: ಪೊಲೀಸ್ ಆಯುಕ್ತ ಬಿ.ದಯಾನಂದ
ಎಲ್ಲ ಸಮುದಾಯಗಳನ್ನು ಒಳಗೊಂಡ ಸಮ್ಮೇಳನವಿದು. ತ್ರಿಮತಸ್ಥ ಬ್ರಾಹ್ಮಣ ಪಂಗಡದವರು ಪಾಲ್ಗೊಳ್ಳಲಿದ್ದಾರೆ. ಆದಿಚುಂಚನಗಿರಿ ಸ್ವಾಮೀಜಿ ಸೇರಿ ವಿವಿಧ ಸಮುದಾಯದ ಮಠಾಧೀಶರು ಆಗಮಿಸುವರು. 30 ವಿವಿಧ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಗುವುದು. ಈಗಾಗಲೇ ಹತ್ತಾರು ಕಡೆ ಪೂರ್ವ ಸಿದ್ಧತಾ ಸಭೆ ನಡೆಸಿದ್ದು, 1.50 ಲಕ್ಷಕ್ಕೂ ಅಧಿಕ ಜನ ಸಮ್ಮೇಳನದಲ್ಲಿ ಪಾಲ್ಗೊಳ್ಳುವರು.
- ಗಿರಿಧರ ಕಜೆ, ಅಧ್ಯಕ್ಷ, ಅಖಿಲ ಹವ್ಯಕ ಮಹಾಸಭಾ