
ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಾನು ಮುಷ್ತಾಕ್ ವಿವಾದದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಜಾ ಮಾಡಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. “ಎರಡು ಬಾರಿ ಸಂಸದನಾದವನನ್ನು ‘ಮೂರ್ಖ’ ಎಂದು ಕರೆಯುವುದೇ?” ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ ಅವರು, ನೀವು ರಾಜ್ಯದ ಮುಖ್ಯಮಂತ್ರಿ. ನಿಮ್ಮ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಏನೆಲ್ಲ ಬರೆದುಕೊಳ್ಳಲಾಗುತ್ತಿದೆ ನೋಡಿ. 14 ಸೈಟ್ ನುಂಗಿದ ಪ್ರಕರಣ ಇನ್ನೂ ಜನರ ನೆನಪಿನಲ್ಲಿ ಇದೆ ಎಂದು ತಿರುಗೇಟು ನೀಡಿದರು.
ಮುಡಾದಲ್ಲಿ 14 ಸೈಟುಗಳನ್ನು ಪಡೆದಿದ್ದು ಹಗಲು ದರೋಡೆ ಆಗಿತ್ತು. ಇಂತಹ ಹಗಲು ದರೋಡೆ ಪ್ರಕರಣವನ್ನು ಹೈಕೋರ್ಟ್ ನಲ್ಲಿ ವಜಾ ಮಾಡಲಾಯಿತು. ಹಾಗೇ ಧರ್ಮಸ್ಥಳ ಮೇಲೆ ಅಪನಂಬಿಕೆ ಬರುವಂಥ ವಿಡಿಯೋ ಸಮೀರ್ ಮಾಡಿದ್ದ. ಇಷ್ಟೆಲ್ಲ ಕೆಲಸ ಮಾಡಿದ ಸಮೀರ್ ಗೆ ಸೆಷನ್ ಕೋರ್ಟ್ ಜಾನೀನು ಕೊಟ್ಟಿತು. ಮಹೇಶ್ ತಿಮರೋಡಿ ಕೂಡಾ ಆರಾಮವಾಗಿ ಓಡಾಡಿಕೊಂಡಿದ್ದಾನೆ. ನಾನು ನ್ಯಾಯ ಸಿಗುವ ಸಣ್ಣ ಭರವಸೆಯಿಂದ ಹೈಕೋರ್ಟ್ ಗೆ ಪಿಐಎಲ್ ಹಾಕಿದ್ದೆ. ಹೈಕೋರ್ಟ್ ಬಾನು ಮುಷ್ತಾಕ್ ಅವರಿಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಅನ್ನೋ ಸಣ್ಣ ಕಾರಣ ನೀಡಿ ನನ್ನ ಪಿಐಎಲ್ ವಜಾ ಮಾಡಿತು. ಹೈಕೋರ್ಟ್ ಬಗ್ಗೆ ನಾನು ಮಾತಾಡಲ್ಲ. ಬಾನು ಮುಷ್ತಾಕ್ ಅವರ ಹೇಳಿಕೆಯನ್ನು ಭಾವಾನುವಾದ ಮಾಡಿ ಕೋರ್ಟ್ ಗೆ ಸಲ್ಲಿಕೆ ಮಾಡಿದ್ವಿ. ಇಷ್ಟಾದ್ರೂ ಸೆಕ್ಯುಲರ್ ಅಂತ ಹೇಳಿ ಪಿಐಎಲ್ ವಜಾ ಮಾಡಲಾಯ್ತು. ಕೋರ್ಟ್ ಬಗ್ಗೆ ನಾನೇನೂ ಹೇಳಲ್ಲ. ಇಂದಿರಾಗಾಂಧಿ ತಂದ ಸೆಕ್ಯುಲರ್ ಪದದ ಕಾರಣ ಇಟ್ಕೊಂಡು ನನ್ನ ಪಿಐಎಲ್ ವಜಾ ಮಾಡಲಾಯ್ತು ಎಂದು ಬೇಸರ ಹೊರಹಾಕಿದರು.
ಅಶೋಕ ಚಕ್ರದ ಕೆಳಗೆ ಸತ್ಯಮೇವ ಜಯತೇ ಅಂತ ಬರೆಯಲಾಗಿದೆ. ನಾಳೆ ಬೆಳಗ್ಗೆ ಆ ಸತ್ಯಮೇವ ಜಯತೇಗೆ ಅವಮಾನ ಮಾಡೋದೂ ಸರಿ ಅಂತೀರಾ? ಸತ್ಯಂ ಶಿವಂ ಸುಂದರಂ ಹೇಳಿಕೆಯನ್ನೂ ವಾಕ್ ಸ್ವಾತಂತ್ರ್ಯ, ಸೆಕ್ಯುಲರ್ ಕಾರಣಕ್ಕೆ ತೆಗೀತೀರಾ? ಭಾರತದ ಮೂಲ ಸಂಸ್ಕೃತಿಗೆ ಧಕ್ಕೆ ಬರುವಂಥ ಹೇಳಿಕೆ ಸೆಕ್ಯುಲರ್, ವಾಕ್ ಸ್ವಾತಂತ್ರ್ಯ ಹಕ್ಕಿನಡಿ ಇದೆ ಅಂದ್ರೆ ನಾನೇನೂ ಹೇಳೋಕ್ಕಾಗಲ್ಲ. ಬಾನು ಮುಷ್ತಾಕ್ ಭುವನೇಶ್ವರಿ ಬಗ್ಗೆ, ಅರಿಶಿನ ಕುಂಕುಮ ಹೇಳಿಕೆ ಬಗ್ಗೆ ಕನಿಷ್ಟ ಕ್ಷಮೆ ಕೋರಿಲ್ಲ, ಅದಕ್ಕಾಗಿ ನಾನು ಕೋರ್ಟ್ ಗೆ ಹೋದೆ. ಸೆಕ್ಯುಲರ್ ಚೌಕಟ್ಟಿಗೆ ಅದನ್ನು ತಂದು ಕೋರ್ಟ್ ಅರ್ಜಿ ವಜಾ ಮಾಡಿದೆ. ಭಾರತದ ಮೂಲ ಸಂಸ್ಕೃತಿಗೆ ಇದೇ ರೀತಿ ಅಪಮಾನ, ಧಕ್ಕೆ ಆಗೋದನ್ನೂ ಹೀಗೇ ಸಹಿಸಿಕೊಳ್ತೀರಾ?. ದಾರ್ಷ್ಟ್ಯ, ದ್ವೇಷದಿಂದ ಈ ರೀತಿ ಹೇಳಿಕೆಗಳನ್ನು ಕೊಡೋದಾದ್ರೆ ಪರಿಸ್ಥಿತಿ ಏನಾಗಬೇಕು? ಸೆಕ್ಯುಲರ್ ಪರಿಧಿಯಲ್ಲಿ ನೋಡೋದು ಎಷ್ಟು ಸರಿ? ಮೊನ್ನೆ ಹರ್ಜತ್ ಅಲಿ ದರ್ಗಾದಲ್ಲಿ ಅಶೋಕ ಚಕ್ರ ಇದೆ ಎಂದು ಕಲ್ಲಿಂದ ಕುಟ್ಟಿದ್ರು. ಅದು ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಬರುತ್ತಾ? ಎಂದಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತಾಪ್ ಸಿಂಹ ಅವರೊಂದಿಗೆ ಹೊಸ ಪಕ್ಷ ಕಟ್ಟುವ ಸಾಧ್ಯತೆಯನ್ನು ಸೂಚಿಸಿದ್ದ ಕುರಿತು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದರು. ನನ್ನ ತಂದೆ ಜನಸಂಘದ ದೀಪದ ಚಿಹ್ನೆಯಿಂದ ಗೆದ್ದವರು. ಬಿಬಿ ಶಿವಪ್ಪ ಜತೆ ಇದ್ದವರು ನಮ್ಮ ಕುಟುಂಬದ ನಿಷ್ಠೆ ಸಂಘಕ್ಕೂ, ಬಿಜೆಪಿಗೂ. ನಾನು ಪತ್ರಕರ್ತನಾಗಿ ಪ್ರಾರಂಭಿಸಿ ಈಗ ಬಿಜೆಪಿ ಕಾರ್ಯಕರ್ತನಾಗಿದ್ದೇನೆ. ಯತ್ನಾಳ್ ಜತೆ ಸೇರಿ ಹೊಸ ಪಕ್ಷ ಕಟ್ಟೋ ಯೋಚನೆ ಇಲ್ಲ ಅಧಿಕಾರ ಇರಲಿ ಇಲ್ಲದಿರಲಿ ಪಕ್ಷ ಬಿಟ್ಟು ಹೋಗುವುದಿಲ್ಲ. ಯತ್ನಾಳ್ ಅವರಿಗೂ ನಾನು ಈ ಮಾತು ಹೇಳಿದ್ದೇನೆ ಎಂದು ಅವರು ತಿಳಿಸಿದರು.
ನಾನು ಕೋರ್ಟ್‌ನ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಮಾಡುತ್ತಿಲ್ಲ. ನನ್ನ PIL ಸೆಕ್ಯುಲರಿಸಂ ಚೌಕಟ್ಟಿನಲ್ಲಿ ವಜಾ ಮಾಡಲಾಗಿದೆ. ಅದೇ ವಾಕ್ ಸ್ವಾತಂತ್ರ್ಯವನ್ನು ಬಳಸಿಕೊಂಡು ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ ಅಷ್ಟೇ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ