
ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ (ಏ.11): ಮೈಸೂರು ಮಹಾರಾಜರಿಗೆ ಸೇರಿದ 4500 ಎಕರೆ ಜಾಗವನ್ನು ಖಾತೆ ಮಾಡಿಕೊಡುವಂತೆ ಮೈಸೂರಿನ ರಾಣಿ ಪ್ರಮೋದಾದೇವಿ ಒಡೆಯರ್ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇದೀಗ ಒಂದು ವೇಳೆ ಖಾತೆ ಮಾಡಿ ಕೊಟ್ರೆ ಇಡೀ ಊರಿಗೆ ಊರೇ ಖಾಲಿ ಮಾಡುವ ಪರಿಸ್ಥಿತಿ ಉಂಟಾಗಲಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ನಮ್ಮ ರಕ್ಷಣೆಗೆ ಸರ್ಕಾರ, ಜಿಲ್ಲಾಡಳಿತ ಧಾವಿಸಲಿ ಅಂತಾ ಮನವಿ ಮಾಡ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
ಮೈಸೂರು ಮಹಾರಾಜರಿಗೆ ಸೇರಿರುವ ಆಸ್ತಿ ಖಾತೆ ಮಾಡಿಕೊಡುವಂತೆ ಮೈಸೂರಿನ ರಾಣಿ ಪ್ರಮೋದಾದೇವಿ ಒಡೆಯರ್ ಚಾಮರಾಜನಗರ ಡಿಸಿಗೆ ಪತ್ರ ಬರೆದ ಪ್ರಕರಣ ಹಿನ್ನಲೆ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮಸ್ಥರಿಗೆ ಟೆನ್ಷನ್ ಶುರುವಾಗಿದೆ. ನಿಜಕ್ಕೂ ಕೂಡ ಆತಂಕದಲ್ಲಿ ಸಿದ್ದಯ್ಯನಪುರ ಗ್ರಾಮಸ್ಥರಿದ್ದಾರೆ.ಸಿದ್ದಯ್ಯನಪುರದ ಮೂಲ ಹೆಸರೇ ಜಯಚಾಮರಾಜೇಂದ್ರ ಪುರಂ ಎಂದಾಗಿದೆ. ಇದೀಗಾ ಊರಿಗೆ ಊರೇ ಖಾಲಿ ಮಾಡಬೇಕಾದ ಆತಂಕ ಎದುರಾಗಿದೆ. 4000 ಕ್ಕು ಹೆಚ್ಚು ಜನಸಂಖ್ಯೆ ಇರುವ ಸಿದ್ದಯ್ಯನಪುರ ಗ್ರಾಮದಲ್ಲಿ ವಾಸ ಮಾಡ್ತಿದ್ದಾರೆ. ಇಂದಿಗೂ ಮಹಾರಾಜರ ಫೋಟೋ ಗ್ರಾಮದ ಚಾವಡಿಯಲ್ಲಿ ಗ್ರಾಮಸ್ಥರು ಇಟ್ಟುಕೊಂಡಿದ್ದಾರೆ. ಪ್ರತಿ ವರ್ಷ ಮಹಾರಾಜರ ಭಾವಚಿತ್ರ ಮೆರವಣಿಗೆ ಮಾಡಿ ಅವರ ಜನ್ಮ ದಿನ ಆಚರಿಸಿಕೊಂಡು ಬರುತ್ತಿದ್ದಾರೆ. ಜಯಚಾಮರಾಜೇಂದ್ರ ಒಡೆಯರ್ ನಮಗೆ 1035 ಎಕರೆ ಭೂಮಿ ದಾನ ನೀಡಿದ್ದಾರೆ1982 ರಲ್ಲಿ ಸಚಿವರಾಗಿದ್ದ ಬಿ ರಾಚಯ್ಯ ಕಾಲದಲ್ಲಿ ಸರ್ಕಾರ ಸಾಗುವಳಿ ಚೀಟಿ ನೀಡಿದೆ.ಈಗಲೂ ಮಹಾರಾಜರ ಹೆಸರೇಳಿಕೊಂಡು ಬದುಕ್ತಿದ್ದೀವಿ ಅಂತಿದ್ದಾರೆ.
ಇನ್ನೂ ರಾಣಿ ಪ್ರಮೋದಾದೇವಿಗೆ ಖಾತೆ ಮಾಡಿಕೊಟ್ಟಲ್ಲಿ ಇಡೀ ಗ್ರಾಮದವರು ಮೈಸೂರು ಅರಮನೆಗೆ ಹೋಗ್ತೀವಿ ಅವರೇ ನಮಗೆ ಹಿಟ್ಟು ಬಟ್ಟೆ ಕೊಟ್ಟು ಸಾಕಲಿ ಅಂತಿದ್ದಾರೆ. ಪ್ರಮೋದಾದೇವಿ ಅವರಿಗೆ ಖಾತೆ ಮಾಡಿ ಕೊಟ್ರೆ ಇಡೀ ಊರಿಗೆ ಊರೆ ಖಾಲಿ ಮಾಡಬೇಕಾಗುತ್ತದೆ. ಮಕ್ಕಳು ಮರಿ ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು? ಎಂದು ಸಿದ್ದಯ್ಯನಪುರ ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ. ನಾವು ಇದ್ರು ಇಲ್ಲೇ ಸತ್ರು ಇಲ್ಲೇ ಸಾಯ್ತೀವಿ, ಚಾಮರಾಜನಗರ ತಾಲ್ಲೂಕಿನ ವಿವಿಧೆಡೆ 4500 ಎಕರೆಗು ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಪತ್ರ ಮೈಸೂರಿನ ರಾಣಿ ಬರೆದಿದ್ದರು. ಇದೇ ವ್ಯಾಪ್ತಿಯಲ್ಲಿ ಸಿದ್ದಯ್ಯನಪುರ ಗ್ರಾಮ ಬರುತ್ತದೆ. ಮೈಸೂರು ಮಹಾರಾಜರು ಹಾಗು ಭಾರತ ಸರ್ಕಾರದ ನಡುವೆ ಆಗಿರುವ ಒಪ್ಪಂದದ ಪ್ರಕಾರ 4500 ಎಕರೆಗು ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಪತ್ರದಲ್ಲಿ ಪ್ರಮೋದಾದೇವಿ ಉಲ್ಲೇಖಿಸಿದ್ದಾರೆ.
ಇನ್ನೂ ಮನವಿ ಪತ್ರ ಸ್ವೀಕರಿಸಿದ ಡಿಸಿ ಶಿಲ್ಪಾನಾಗ್ ಮಾತನಾಡಿ, ಈಗಾಗಲೇ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ, ಸರ್ಕಾರಿ ಜಾಗ ಎಂದು ಖಚಿತಪಡಿಸಿಕೊಂಡು ಕಂದಾಯ ಗ್ರಾಮವಾಗಿ ಘೋ಼ಷಣೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಪ್ರಮೋದಾ ದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿದ್ದರೂ ಕೂಡ ಯಾವುದೇ ಪೂರಕ ದಾಖಲೆ ಲಗತ್ತಿಸಿಲ್ಲ, ನ್ಯಾಯಾಲಯದ ಆದೇಶವಿಲ್ಲ. ಆದ್ದರಿಂದ, ಯಾವುದೇ ಆತಂಕ ಬೇಡ, ನಿಮ್ಮ ಊರುಗಳು ಕಂದಾಯ ಗ್ರಾಮಗಳಾಗುವ ಹಂತದಲ್ಲಿದೆ ಎಂದರು.
ಒಟ್ನಲ್ಲಿ ರಾಣಿ ಪ್ರಮೋದಾ ದೇವಿ ಒಡೆಯರ್ ಬರೆದ ಪತ್ರ ಇದೀಗ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಸಿದ್ದಯ್ಯನಪುರ ಗ್ರಾಮಸ್ಥರು, ಮನೆಗಳ ಜೊತೆಗೆ ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಜಿಲ್ಲಾಡಳಿತ, ಸರ್ಕಾರ ನಮ್ಮ ರಕ್ಷಣೆಗೆ ಧಾವಿಸಲಿ ಅಂತಾ ಮನವಿ ಮಾಡ್ತಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ