
ಬೆಂಗಳೂರು (ಜೂ.6): ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣರನ್ನು ಮತ್ತೆ ನಾಲ್ಕು ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ಅವರ ವಿಚಾರಣೆ ಇನ್ನೂ ಬಾಕಿ ಇರುವ ಕಾರಣ ಎಸ್‌ಐಟಿ ಕಸ್ಟಡಿಯನ್ನು ವಿಸ್ತರಣೆ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಇದರಿಂದಾಗಿ ಮತ್ತೆ ನಾಲ್ಕು ದಿನಗಳ ಕಾಲ ಅಂದರೆ, ಜೂನ್ 10ರವರೆಗೆ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ಗುರುವಾರ ಪ್ರಜ್ವಲ್ ರೇವಣ್ಣ ಅವರ ಕಸ್ಟಡಿ ಅಂತ್ಯಗೊಂಡ ಹಿನ್ನಲೆಯಲ್ಲಿ, ಇಂದು ಅವರನ್ನು ಸಿಟಿ ಸಿವಿಲ್ ಕೋರ್ಟ್ ಎದುರು ಹಾಜರುಪಡಿಸಲಾಗಿತ್ತು. ಈ ವೇಳೆ ಅವರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ನೀಡಲಾಗಿತ್ತು. ನ್ಯಾಯಾಧೀಶರ ಮುಂದೆ ಪ್ರಜ್ವಲ್ ಅವರನ್ನು ಹಾಜರುಪಡಿಸಲಾಗಿತ್ತು. ಪ್ರಜ್ವಲ್ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿನ್ ಹಾಜರು ಪಡಿಸಿದ್ದರು. ಎಸ್‌ಐಟಿ ಪರವಾಗಿ ಎಎಸ್‌ಎಸ್‌ಪಿ ಅಶೋಕ್ ನಾಯಕ್ ವಾದ ಮಾಡಿದ್ದರು.
ಈ ವೇಳೆ ನ್ಯಾಯಾಧೀಶರು, ಪೊಲೀಸರ ವಶದಲ್ಲಿದ್ದಾಗ ಏನಾದರೂ ಸಮಸ್ಯೆ ಆಗಿದ್ಯಾ ಎಂದುಸ ಪ್ರಶ್ನೆ ಮಾಡಿದರು. ಅದಕ್ಕೆ ಪ್ರಜ್ವಲ್ ಏನೂ ಸಮಸ್ಯೆ ಆಗಿಲ್ಲ ಎಂದು ಹೇಳಿದರು. ಅಶೋಕ್ ನಾಯಕ್ ತಮ್ಮ ವಾದದ ವೇಳೆ, ಆರೋಪಿ ಪ್ರಜ್ವಲ್ ತಮ್ಮ ಮೊಬೈಲ್ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಮುಖ್ಯವಾಗಿ ತನಿಖೆಗೆ ಟೈಮ್ ಸಾಕಾಗಿಲ್ಲ. ವಿದೇಶದಲ್ಲಿ ಇದ್ದಾಗ ಹೇಗೆ ಹಣ ಸಂದಾಯ ಆಗಿದೆ ಎಂಬುದು ಇನ್ನೂ ತಿಳಿದಿಲ್ಲ. ಕೆಲವು ಸಂತ್ರಸ್ತೆಯರನ್ನ ಮುಖಾಮುಖಿ ಕೂರಿಸಿ ವಿಚಾರಣೆ ಮಾಡಬೇಕಿದೆ. ಏನು ಕೇಳಿದ್ರೂ ಆರೋಪಿ ಸರಿಯಾಗಿ ಉತ್ತರಿಸುತ್ತಿಲ್ಲ. ಏನೂ ತಪ್ಪು ಮಾಡಿಲ್ಲ ಅಂತ ಪದೇ ಪದೇ ಅದನ್ನೇ ಹೇಳುತ್ತಿದ್ದಾನೆ. ಹೀಗಾಗಿ ಪ್ರಜ್ವಲ್ ನನ್ನ ಸಮರ್ಪಕವಾಗಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಮತ್ತಷ್ಟು ದಿನ ಪೊಲೀಸರ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ತನಿಖಾಧಿಕಾರಿಗೆ ಪ್ರಕರಣದ ಕೇಸ್ ಡೈರಿ ನೀಡುವಂತೆ ಜಡ್ಜ್ ಸೂಚನೆ ನೀಡಿದರು.
ಪ್ರಜ್ವಲ್ ಪರ ವಾದ ಮಂಡಿಸಸಿದ ಟಾಮಿ ಸೆಬಾಸ್ಟಿನ್, ಪ್ರಜ್ವಲ್ ವಿದೇಶಕ್ಕೆ ಹೋಗಲು ಹಣ ಎಲ್ಲಿಂದ ಬಂತು ಎನ್ನುವುದು ತನಿಖೆಯ ಭಾಗವಲ್ಲ. ವಿದೇಶಕ್ಕೆ ಹೋಗಿದ್ದಕ್ಕೂ ಆರೋಪಕ್ಕೂ ಯಾವುದೇ ಸಂಬಂಧ ಇಲ್ಲ. ಇದಕ್ಕಾಗಿ ಮತ್ತೆ ಕಸ್ಟಡಿಗೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ರೇಪ್ ಕೇಸ್: ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸಿದ ವೈದ್ಯರು
ಈ ವೇಳೆ ಎಸ್‌ಐಟಿಗೆ, ಇಷ್ಟು ದಿನ ಕಸ್ಟಡಿಯ ಬಳಿಕ ಮತ್ಯಾಕೆ ಕಸ್ಟಡಿಗೆ ಬೇಕು? ಎಂದು ಪ್ರಶ್ನೆ ಮಾಡಿದರು. ಮೊಬೈಲ್ ನಾಶಪಡಿಸಿರುವ ಬಗ್ಗೆ ತನಿಖೆ ನಡೆಸಬೇಕಿದೆ. ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಸಾಕ್ಷಿ ಕಲೆಹಾಕಬೇಕಿದೆ. ಒಂದು ಮೊಬೈಲ್ ನಾಶ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಬೇರೆ ಮೊಬೈಲ್ ಬಳಕೆಯ ಬಗ್ಗೆ ತನಿಖೆ ಮಾಡಬೇಕಿದೆ ಎಂದು ಎಸ್‌ಎಸ್‌ಪಿ ಹೇಳಿದರು. ವಿದೇಶದಲ್ಲಿ ಇದ್ದಾಗ ಹಣ ಸಂದಾಯದ ಬಗ್ಗೆ ಮಾಹಿತಿ ಇದೆ. ಆದರೆ, ಹಣ ಹೇಗೆ ಹೋಯಿತು ಎನ್ನುವ ಮಾಹಿತಿ ಬೇಕಾಗಿದೆ. ನನ್ನ ಬಳಿ ಮೊಬೈಲ್ ಇಲ್ಲ, ನನ್ನ ಪಿಎ ಮೊಬೈಲ್ ಬಳಸುತ್ತಿದ್ದ ಎನ್ನುತ್ತಿದ್ದಾನೆ. ಮೊಬೈಲ್ ಪತ್ತೆ ಹಚ್ಚಿ ತನಿಖೆ ಮಾಡಬೇಕಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದರು.
ಪ್ರಜ್ವಲ್ ರೇವಣ್ಣ ಪುರುಷತ್ವ ಪರೀಕ್ಷೆಗೆ ಕೋರ್ಟ್ ಗ್ರೀನ್ ಸಿಗ್ನಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ