ಹಾವೇರಿ(ಡಿ.20): ‘ಕ್ಷೇತ್ರದ ಜನರ ಋುಣ ತೀರಿಸಲು ಸಾಧ್ಯವೇ ಇಲ್ಲ. ನಿಮ್ಮ ಪ್ರೀತಿ, ವಿಶ್ವಾಸದ ಮುಂದೆ ಯಾವ ಅಧಿಕಾರವೂ ಮಹತ್ವದ್ದಲ್ಲ. ನಿಮ್ಮೂರಿಗೆ ಬಂದಾಗ ರೊಟ್ಟಿತಿನ್ನಿಸಿದ್ದೀರಿ, ನವಣಕ್ಕಿ ಅನ್ನ ಮಾಡಿ ಹಾಕಿದ್ದೀರಿ. ಅಧಿಕಾರ, ಸ್ಥಾನಮಾನ ಶಾಶ್ವತವಲ್ಲ. ಬಸವರಾಜ ಬೊಮ್ಮಾಯಿ ಎಂಬುದಷ್ಟೇ ಶಾಶ್ವತ, ಹಿಂದಿರುವ ಪದನಾಮವಲ್ಲ’ ಎನ್ನುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CS Basavaraj Bommai) ಅವರು ತಮ್ಮ ತವರು ಕ್ಷೇತ್ರದ ಜನರ ಮುಂದೆ ಭಾವುಕರಾದ ಘಟನೆ ನಡೆದಿದೆ.
ಶಿಗ್ಗಾಂವಿ(Shiggaon, Haveri) ಪಟ್ಟಣದಲ್ಲಿ ಭಾನುವಾರ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ(kittur rani chennamma statue) ಅನಾವರಣ ಹಾಗೂ ಪಂಚಮಸಾಲಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸವನ್ನು ನೆನೆದರು.
undefined
Karnataka Politics: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಮುರುಗೇಶ್ ನಿರಾಣಿ ಬ್ಯಾಟಿಂಗ್
ನಮ್ಮ ಬದುಕೇ ಶಾಶ್ವತವಲ್ಲ. ಸ್ಥಾನಮಾನ, ಅಧಿಕಾರ ಕೂಡ ಶಾಶ್ವತವಲ್ಲ. ಇದರ ಅರಿವು ಪ್ರತಿ ಕ್ಷಣದಲ್ಲೂ ನಮಗಿರಬೇಕು. ನಿಮ್ಮ ಆಶೀರ್ವಾದದಲ್ಲಿ ದೊಡ್ಡ ಶಕ್ತಿಯಿದ್ದು, ಅದೇ ಇಂದು ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಜವಾಬ್ದಾರಿಯಿಂದ ಬಸವರಾಜ ಬೊಮ್ಮಾಯಿ ಆಗಿ ಮಾತನಾಡುತ್ತಿದ್ದೇನೆ. ಈ ಕ್ಷೇತ್ರದ ಜನರ ಋುಣ ನನ್ನ ಮೇಲಿದೆ. ಎಲ್ಲರೂ ನನ್ನ ಮೇಲೆ ಪ್ರೀತಿ, ವಿಶ್ವಾಸ, ಬೆಂಬಲ ಕೊಟ್ಟಿದ್ದೀರಿ. ನಿಮ್ಮೂರಿಗೆ ಬಂದಾಗ ರೊಟ್ಟಿತಿನ್ನಿಸಿದ್ದೀರಿ. ನವಣಕ್ಕಿ ಅನ್ನ ಮಾಡಿ ಹಾಕಿದ್ದೀರಿ... ಎನ್ನುತ್ತಲೇ ಕ್ಷಣಹೊತ್ತು ಮಾತು ನಿಲ್ಲಿಸಿದರು.
ಪ್ರೀತಿ ವಿಶ್ವಾಸ ಉಳಿಸಿಕೊಳ್ಳಬೇಕೆಂಬ ಆಸೆ: ನನಗೆ ದೊಡ್ಡ ಆಸೆಯೇನಿಲ್ಲ. ನಿಮ್ಮ ಪ್ರೀತಿ, ವಿಶ್ವಾಸವನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕು ಎಂಬುದೇ ನನ್ನ ಆಸೆಯಾಗಿದೆ. ನಿಮ್ಮ ಪ್ರೀತಿ-ವಿಶ್ವಾಸದ ಮುಂದೆ ಯಾವ ಅಧಿಕಾರವೂ ಮಹತ್ವದ್ದಲ್ಲ. ಭಾವನಾತ್ಮಕವಾಗಿ ಮಾತನಾಡಬಾರದು ಎಂದು ಪ್ರಯತ್ನಿಸುತ್ತೇನೆ. ಆದರೆ, ನಿಮ್ಮನ್ನೆಲ್ಲ ನೋಡಿದಾಗ ಭಾವನೆಗಳು ಬರುತ್ತವೆ. ಮೊದಲಿನಂತೆ ಪದೇ ಪದೇ ಕ್ಷೇತ್ರಕ್ಕೆ ಬಂದು ನಿಮ್ಮನ್ನು ನೋಡಲು ಆಗುತ್ತಿಲ್ಲ. ಮುಖ್ಯಮಂತ್ರಿಯಾಗಿ ದೊಡ್ಡ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಸಮಗ್ರ ರಾಜ್ಯದ ಚಿಂತನೆ, ಅಭಿವೃದ್ಧಿ ಮಾಡುವುದು, ಎಲ್ಲ ಸಮುದಾಯಗಳ ಭಾವನೆಗಳಿಗೆ ಸ್ಪಂದಿಸುವ ಜವಾಬ್ದಾರಿಯಿದೆ. ಇಂದಿನ ಕಾಲದಲ್ಲಿ ಜನರ ಆಶೋತ್ತರಗಳು ಹೆಚ್ಚಿವೆ. ಸರ್ಕಾರಕ್ಕೆ ಹಲವು ಸವಾಲುಗಳಿವೆ. ಅವುಗಳನ್ನು ಎದುರಿಸಿ ಯಶಸ್ವಿಯಾಗುವುದು ನನ್ನ ಗುರಿ ಎಂದರು.
Belagavi Violence ಮಹಾರಾಷ್ಟ್ರದ ಕನ್ನಡಿಗರಿಗೆ ರಕ್ಷಣೆ, ಪುಂಡರಿಗೆ ತಕ್ಕ ಪಾಠ, ಬೆಳಗಾವಿ ಘಟನೆಗೆ ಬೊಮ್ಮಾಯಿ ಕಿಡಿ
ಇಲ್ಲಿ ನಾನು ನಿಮ್ಮ ಬೊಮ್ಮಾಯಿ ಮಾತ್ರ: ನಿಮ್ಮ ಆಶೀರ್ವಾದದಲ್ಲಿ ಬಹುದೊಡ್ಡ ಶಕ್ತಿಯಿದೆ. ಅದೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಈಗಿರುವ ಸವಾಲುಗಳನ್ನು ಎದುರಿಸಲು ನಿಮ್ಮ ಆಶೀರ್ವಾದವೇ ಪ್ರೇರಣೆಯಾಗಿ ನಿಲ್ಲಲಿದೆ. ನಿಮ್ಮ ಆಶೀರ್ವಾದದಿಂದ ಸಿಎಂ ಆಗಿ ನಿಂತಿದ್ದೇನೆ. ಕ್ಷೇತ್ರದ ಹೊರಗೆ ನಾನು ಮುಖ್ಯಮಂತ್ರಿಯಾದರೂ ಇಲ್ಲಿ ಕೇವಲ ನಾನು ಬಸವರಾಜ ಬೊಮ್ಮಾಯಿ ಮಾತ್ರ. ನಿಮ್ಮ ಮಟ್ಟಿಗೆ ಬಸವರಾಜ ಬೊಮ್ಮಾಯಿ ಆಗಿಯೇ ಉಳಿಯುತ್ತೇನೆ. ಬಸವರಾಜ ಬೊಮ್ಮಾಯಿ ಶಾಶ್ವತವೇ ಹೊರತು ಹಿಂದಿರುವ ಪದನಾಮ ಶಾಶ್ವತವಲ್ಲ ಎಂದು ಹೇಳಿದರು.
ಬೊಮ್ಮಾಯಿ ಮಾತುಗಳ ಬೆನ್ನಲ್ಲೇ ಇದೀಗ ಸಿಎಂ ತಮ್ಮ ಸ್ಥಾನ ತ್ಯಜಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಅಧಿಕಾರ ಶಾಶ್ವತವಲ್ಲ ಎಂದು ಪರೋಕ್ಷ ಸೂಚನೆ ನೀಡಿದ್ದಾರೆ ಎಂದು ಚರ್ಚೆಗಳು ನಡೆಯತ್ತಿದೆ. ಕರ್ನಾಟಕದಲ್ಲಿ ಮತ್ತೆ ಸಿಎಂ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಶುರುವಾಗಿದೆ. ಆದರೆ ತವರು ಕ್ಷೇತ್ರದ ಜನರ ಮುಂದೆ ಸಿಎಂ ಭಾವುಕ ಮಾತುಗಳಿಗೆ ಹೊಸ ಅರ್ಥ ನೀಡಬೇಕಿಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಬೊಮ್ಮಾಯಿ ರಾಜ್ಯದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ, ಬದಲಾವಣೆ ಮಾತಿಲ್ಲ ಎಂದು ಎಂದು ಬಿಜೆಪಿ ಮೂಲಗಳು ಹೇಳಿವೆ. ಬೊಮ್ಮಾಯಿ ಇದ್ದ ವೇದಿಕೆಯಲ್ಲೇ ಸಚಿವ ಮುರುಗೇಶ್ ನಿರಾಣಿ ಕೂಡ ಬೊಮ್ಮಾಯಿ ಪರ ಬ್ಯಾಟ್ ಬೀಸಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕೆಸಲ ಮುಂದುವರಿಸಬೇಕು ಎಂದು ನಿರಾಣಿ ಹೇಳಿದ್ದಾರೆ.