ಬೆಂಗಳೂರು(ಡಿ.20): ಬೆಳಗಾವಿಯಲ್ಲಿ(Belagavi) ಮಹಾರಾಷ್ಟ್ರ ಏಕೀಕರಣ ಸಮಿತಿ (MES), ಶಿವಸೇನೆ ಕಾರ್ಯಕರ್ತರ ಪುಂಡಾಟ, ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ ಹಾಗೂ ಮಹಾರಾಷ್ಟ್ರದಲ್ಲಿ(Maharastra) ಕನ್ನಡಿಗರ(Kannadiga) ಮೇಲಿನ ದೌರ್ಜನ್ಯ ಖಂಡಿಸಿ ರಾಜ್ಯಾದ್ಯಂತ ಭಾನುವಾರ ಕನ್ನಡಪರ ಸಂಘಟನೆಗಳು(Pro kannada organisation) ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದವು.
ಬೆಂಗಳೂರು(Bengaluru), ಬೆಳಗಾವಿ(Belagavi) ಸೇರಿದಂತೆ ಎಲ್ಲೆಡೆ ಬೀದಿಗಿಳಿದು ಪ್ರತಿಭಟನೆ, ರ್ಯಾಲಿ, ರಸ್ತೆ ತಡೆ ನಡೆಸಿದ ಕನ್ನಡಪರ ಹೋರಾಟಗಾರರು ಎಂಇಎಸ್ ನಿಷೇಧಕ್ಕೆ ಆಗ್ರಹಿಸಿದರು. ಜತೆಗೆ, ಕರ್ನಾಟಕ, ಕನ್ನಡಿಗರ ವಿರುದ್ಧ ಉದ್ಧಟತನದ ಹೇಳಿಕೆ ನೀಡಿದ ಶಿವಸೇನೆ(Shiv sena), ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ(uddhav thackeray) ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರಹಾಕಿದರು. ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ಜಯ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಕನ್ನಡ ನೆಲದಲ್ಲಿ ಎಂಇಎಸ್ ಪುಂಡಾಟ ಮೆರೆಯುತ್ತಿದ್ದರೂ ಕಟು ಶಬ್ದಗಳಿಂದ ಅದನ್ನು ಖಂಡಿಸದ ರಾಜಕಾರಣಿಗಳ ವಿರುದ್ಧವೂ ತೀವ್ರ ಕಿಡಿಕಾರಿದವು.
Belagavi Riot: ಉದ್ಧವ್ ದೇವ್ರಲ್ಲ, ಡಿಕೆ ಶಿವಕುಮಾರ್ ಸಾಚ ಅಲ್ಲ, ಗುಡುಗಿದ ಈಶ್ವರಪ್ಪ
ಬೆಳಗಾವಿಯಲ್ಲಿ ಮುಂದುವರಿದ ಆಕ್ರೋಶ:
ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಪುಂಡಾಟದಿಂದ ಉದ್ವಿಗ್ನಗೊಂಡಿದ್ದ ಬೆಳಗಾವಿಯಲ್ಲಿ ಭಾನುವಾರವೂ ಹಲವು ಪ್ರತಿಭಟನೆಗಳು ನಡೆದವು. ಬೆಳಗಾವಿ ನಗರದಲ್ಲಿ ನಿಷೇಧಾಜ್ಞೆ ನಡುವೆಯೂ ಕನ್ನಡ ರಕ್ಷಣಾ ವೇದಿಕೆ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಸಂಗೊಳ್ಳಿ ರಾಯಣ್ಣ(Sangolli Rayanna Statue) ಪ್ರತಿಮೆ ಭಗ್ನಗೊಳಿಸಿದ ಸ್ಥಳವಾದ ಆನಗೋಳಕ್ಕೆ ಪ್ರತಿಭಟನಾ ರಾರಯಲಿ ನಡೆಸಲು ಯತ್ನಿಸಿದ್ದು, ಇದಕ್ಕೆ ಪೊಲೀಸರು ಅಡ್ಡಿ ಪಡಿಸಿದರು. ಈ ವೇಳೆ 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದರು. ಮುನ್ನೆಚ್ಚರಿಕಾ ಕ್ರಮವಾಗಿ ಗುಂಪು ಸೇರಿದವರ ಮೇಲೆ ಲಘು ಲಾಠಿ ಬೀಸಿ ಚದುರಿಸಿದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು. ಎಂಇಎಸ್ ಪುಂಡರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕನ್ನಡಪರ ಹೋರಾಟಗಾರರ ಮೇಲೆಯೇ ಪೊಲೀಸರು ದಬ್ಬಾಳಿಕೆ ನಡೆಸುತ್ತಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಜಿಲ್ಲೆಯ ರಾಯಬಾಗ, ಕಾಗವಾಡದಲ್ಲೂ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
Sangolli Rayanna Statue ಅದೇ ಜಾಗದಲ್ಲಿ ರಾಯಣ್ಣ ಪ್ರತಿಮೆ ಮರುಸ್ಥಾಪನೆ, ಕನ್ನಡಿಗರ ಹೋರಾಟಕ್ಕೆ ಜಯ
ಬೆಂಗಳೂರಲ್ಲಿ ಇಡೀ ದಿನ ಪ್ರತಿಭಟನೆ:
ಎಂಇಎಸ್ ಮತ್ತು ಶಿವಸೇನೆ ಪುಂಡಾಟಿಕೆ ವಿರೋಧಿಸಿ ರಾಜಧಾನಿ ಬೆಂಗಳೂರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇಡೀ ದಿನ ಮೈಸೂರು ಬ್ಯಾಂಕ್ ವೃತ್ತ, ಸಿಟಿ ರೈಲ್ವೆ ನಿಲ್ದಾಣ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ನಿರಂತರವಾಗಿ ಪ್ರತಿಭಟನೆಗಳು ನಡೆದವು. ನಾಡಧ್ವಜಕ್ಕೆ ಅವಮಾನಿಸಿದ ಶಿವಸೇನೆ ಪುಂಡಾಟಿಕೆ ಖಂಡಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಧ್ಯಾಹ್ನ ಕನ್ನಡಾಂಬೆ ರಕ್ಷಣಾ ವೇದಿಕೆ ಸದಸ್ಯರು ಬಾಳಾ ಠಾಕ್ರೆ ಫೋಟೋಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ಇನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಬೆಂಗಳೂರು, ರಾಮನಗರ, ಯಾದಗಿರಿ ಮತ್ತಿತರ ಕಡೆ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ-ರಾರಯಲಿ ನಡೆಸಿದರೆ, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗಡಿಭಾಗದಲ್ಲಿ ಶಿವಸೇನೆಯ ಭೂತದಹನ ಮಾಡಿ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಿ ಹಾಗೂ ದಾವಣಗೆರೆಯಲ್ಲಿ ಎಂಇಎಸ್ ಅಧ್ಯಕ್ಷನ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಕರವೇ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದರು.
ಅದೇ ರೀತಿ ದಾಸಶ್ರೇಷ್ಠ ಕನಕದಾಸರು, ಕುರುಬರ ಸಂಘ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹೋರಾಟ ಸಮಿತಿ, ಕರ್ನಾಟಕ ಸಮರ ಸೇನೆ, ಕುರುಬರ ಸಂಘ, ಶ್ರೀ ಭುವನೇಶ್ವರಿ ಕನ್ನಡ ಸಂಘ, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಮತ್ತಿತರ ಸಂಘಟನೆಗಳು ಬೆಂಗಳೂರು ಗ್ರಾಮಾಂತರ, ದಾವಣಗೆರೆ ಮತ್ತಿತರ ಕಡೆ ಪ್ರತಿಭಟಿಸಿದ್ದು, ಚಾಮರಾಜನಗರದಲ್ಲಿ ಗಡಿನಾಡು ಕನ್ನಡ ರಕ್ಷಣಾ ವೇದಿಕೆಯಿಂದ ಪೊರಕೆ ಚಳವಳಿ ನಡೆಸಿತು.
ಇಂದು ಬೆಳಗಾವಿ ಚಲೋ ಚಳವಳಿ
ರಾಜ್ಯದಲ್ಲಿ ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಒಟ್ಟಾಗಿ ನಡೆಸುತ್ತಿರುವ ‘ಬೆಳಗಾವಿ ಚಲೋ’ ಸೋಮವಾರ ಬೆಳಗ್ಗೆ ಬೆಳಗಾವಿ ತಲುಪಲಿದೆ. ಅಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಹೋರಾಟಗಾರರು ನಿರ್ಧರಿಸಿದ್ದಾರೆ.
ಮತ್ತೆ 5 ಮರಾಠಿ ಪುಂಡರ ಬಂಧನ
ಕನ್ನಡಿಗರ ಆಸ್ತಿಪಾಸ್ತಿಯನ್ನು ಗುರಿಯಾಗಿಟ್ಟುಕೊಂಡು ಬೆಳಗಾವಿಯಲ್ಲಿ ದಾಂಧಲೆ ನಡೆಸಿದ 5 ಮಂದಿ ಮರಾಠಿ ಪುಂಡರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಅದರೊಂದಿಗೆ ಈ ಘಟನೆಯಲ್ಲಿ ಬಂಧಿತರ ಸಂಖ್ಯೆ 32ಕ್ಕೆ ಏರಿದೆ.
ಶಿವಾಜಿಗೆ ಮಸಿ: 7 ಮಂದಿ ಬಂಧನ
ಮೂರು ದಿನಗಳ ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣದ ಸಂಬಂಧ ಕನ್ನಡ ರಣಧೀರ ಪಡೆ ಅಧ್ಯಕ್ಷ ಚೇತನ್ ಗೌಡ ಸೇರಿದಂತೆ ಏಳು ಮಂದಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.