
ಬೆಂಗಳೂರು (ಜ.20): ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಅಪರಾಧ ಕೃತ್ಯಕ್ಕೆ ನಿಗದಿತ ಪ್ರಮಾಣದ ಶಿಕ್ಷೆಯನ್ನು ಕಡಿಮೆ ಮಾಡುವ ಯಾವುದೇ ಅಧಿಕಾರ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಾಲವಾಡಿ ನಿವಾಸಿ ಶೇಖ್ ರೌಫ್ ಎಂಬಾತನಿಗೆ ಸ್ಥಳೀಯ ಪೋಕ್ಸೋ ವಿಶೇಷ ನ್ಯಾಯಾಲಯವು 7 ವರ್ಷದ ಬದಲಾಗಿ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ಕ್ರಮ ಪ್ರಶ್ನಿಸಿ ಭಾಲ್ಕಿ ಟೌನ್ ಠಾಣಾ ಪೊಲೀಸರು (ರಾಜ್ಯ ಸರ್ಕಾರ) ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ ಈ ಆದೇಶ ಮಾಡಿದೆ. ಇದೇ ವೇಳೆ ಪ್ರಕರಣದಲ್ಲಿ ಆರೋಪಿ ಶೇಖ್ ರೌಫ್‌ನನ್ನು ದೋಷಿಯಾಗಿ ತೀರ್ಮಾನಿಸಿರುವ ಪೋಕ್ಸೋ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಆತನಿಗೆ ವಿಧಿಸಲಾಗಿದ್ದ ಐದು ವರ್ಷ ಜೈಲು ಶಿಕ್ಷೆಯನ್ನು ಏಳು ವರ್ಷಕ್ಕೆ ಹೆಚ್ಚಿಸಿದೆ. ಪೋಕ್ಸೋ ಕಾಯ್ದೆಯ ಸೆಕ್ಷನ್ 4 ಅಡಿಯಲ್ಲಿ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಅಪರಾಧ ಕೃತ್ಯಕ್ಕೆ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆ ನಿಗದಿಪಡಿಸಲಾಗಿದೆ. ಈ ಅಂಶಗಳನ್ನು ನಿರ್ಲಕ್ಷಿಸಿ ವಿಶೇಷ ನ್ಯಾಯಾಲಯ ಆರೋಪಿಗೆ ಕೇವಲ ಐದು ವರ್ಷ ಜೈಲು ಶಿಕ್ಷೆ ವಿಧಿಸಿರುವುದು ಕಾನೂನು ಬಾಹಿರ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿರುವುದು ಬಿ-ರಿಪೋರ್ಟ್ ಸರ್ಕಾರ: ಡಿ.ಕೆ.ಶಿವಕುಮಾರ್ ವಾಗ್ದಾಳಿ
ಪ್ರಕರಣದ ವಿವರ: 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಶೇಖ್ ರೌಫ್‌ನನ್ನು ಅಪರಾಧಿಯಾಗಿ ಪರಿಗಣಿಸಿದ್ದ ಪೋಕ್ಸೋ ವಿಶೇಷ ನ್ಯಾಯಾಲಯ, ಆತನಿಗೆ ಐದು ವರ್ಷ ಸಾಧಾರಣಾ ಜೈಲು ಶಿಕ್ಷೆ ವಿಧಿಸಿ 2015ರ ಸೆ.7ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಭಾಲ್ಕಿ ಟೌನ್ ಪೊಲೀಸರು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ವಿಶೇಷ ಅಭಿಯೋಜಕರು ವಾದ ಮಂಡಿಸಿ, ಪೋಕ್ಸೋ ನ್ಯಾಯಾಲಯವು ಶೇಖ್ ರೌಫ್‌ನನ್ನು ದೋಷಿಯಾಗಿ ತೀರ್ಮಾನಿಸಿದೆ.
52000 ಮಂದಿಗೆ ಹಕ್ಕುಪತ್ರ ಗಿನ್ನೆಸ್ ದಾಖಲೆಗೆ ಸೇರ್ಪಡೆ: ಸಚಿವ ಅಶೋಕ್‌ಗೆ ಪ್ರಮಾಣಪತ್ರ
ಆದರೆ ಅಪರಾಧಿಗೆ ಶಿಕ್ಷೆ ಮತ್ತು ದಂಡ ಮೊತ್ತವನ್ನು ಕಾಯ್ದೆಯಡಿ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಕಡಿಮೆ ವಿಧಿಸಿರುವುದು ಸರಿಯಲ್ಲ. ಈ ರೀತಿ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಲು ವಿಶೇಷ ನ್ಯಾಯಾಲಯಕ್ಕೆ ಯಾವುದೇ ವಿವೇಚನಾತ್ಮಕ ಅಧಿಕಾರ ಇಲ್ಲ ಎಂದು ವಾದಿಸಿದ್ದರು. ಜತೆಗೆ, ಆರೋಪಿಯು 12 ವರ್ಷದ ಬಾಲಕಿ ಮೇಲೆ ಹೀನ ಕೃತ್ಯ ಎಸಗಿ ಆಕೆಯ ಭವಿಷ್ಯವನ್ನೇ ಹಾಳು ಮಾಡಿದ್ದಾನೆ. ಸಮಾಜದಲ್ಲಿನ ಆಕೆಯ ಮರ್ಯಾದೆ, ಗೌರವಕ್ಕೆ ಧಕ್ಕೆ ತಂದಿದ್ದಾನೆ. ಆದ್ದರಿಂದ ವಿಶೇಷ ನ್ಯಾಯಾಲಯ ವಿಧಿಸಿರುವ ಜೈಲು ಶಿಕ್ಷೆ ಮತ್ತು ದಂಡ ಪ್ರಮಾಣ ತುಂಬಾ ಕಡಿಮೆಯಿದ್ದು, ಅದನ್ನು ಹೆಚ್ಚಿಸಬೇಕು ಎಂದು ಕೋರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ