ಕೊರತೆ: ಮುಂಡಗೋಡದ ಜಲಾಶಯಗಳು ದುರ್ಬಲ, ಆತಂಕದಲ್ಲಿ ರೈತರು!

Published : May 19, 2025, 10:41 AM IST
ಕೊರತೆ: ಮುಂಡಗೋಡದ ಜಲಾಶಯಗಳು ದುರ್ಬಲ, ಆತಂಕದಲ್ಲಿ ರೈತರು!

ಸಾರಾಂಶ

ಸಮರ್ಪಕ ನಿರ್ವಹಣೆ ಇಲ್ಲದ ಕಾರಣದಿಂದ ತಾಲೂಕಿನ ಬಹುತೇಕ ಜಲಾಶಯಗಳು ದುರ್ಬಲವಾಗಿದ್ದು, ಆತಂಕದಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ಇಲ್ಲಿಯ ರೈತರಿಗೆ ಬಂದೊದಗಿದೆ.

ಸಂತೋಷ ದೈವಜ್ಞ

ಮುಂಡಗೋಡ (ಮೇ.18( ಸಮರ್ಪಕ ನಿರ್ವಹಣೆ ಇಲ್ಲದ ಕಾರಣದಿಂದ ತಾಲೂಕಿನ ಬಹುತೇಕ ಜಲಾಶಯಗಳು ದುರ್ಬಲವಾಗಿದ್ದು, ಆತಂಕದಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ಇಲ್ಲಿಯ ರೈತರಿಗೆ ಬಂದೊದಗಿದೆ.

ಕಾಲಕಾಲಕ್ಕೆ ಹೂಳೆತ್ತುವುದಾಗಲಿ, ಗೇಟ್ ದುರಸ್ತಿ ಮುಂತಾದ ಅಗತ್ಯ ನಿರ್ವಹಣಾ ಕ್ರಮ ಕೈಗೊಳ್ಳುವುದಾಗಲಿ ನಡೆಯದೇ ಇಲ್ಲಿಯ ಬಹುತೇಕ ಜಲಾಶಯಗಳು ಅಧೋಗತಿಯತ್ತ ತಲುಪಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ರೋಸಿಹೋಗಿರುವ ರೈತರು ಸಾರ್ವಜನಿಕರು ಆಡಳಿತದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜಲಾಶಯ ಹಾಗೂ ಕೆರೆಗಳನ್ನು ಹೊಂದಿದ ಹೆಗ್ಗಳಿಕೆ ಮುಂಡಗೋಡ ತಾಲೂಕಿನದ್ದಾಗಿದೆ. ತಾಲೂಕಿನ ಧರ್ಮಾ ಜಲಾಶಯ ಹಾಗೂ ಬಾಚಣಕಿ ಜಲಾಶಯ ಹೊರತುಪಡಿಸಿ ಇನ್ನುಳಿದ ಯಾವೊಂದು ಜಲಾಶಯಗಳು ಸುಭದ್ರವಾಗಿಲ್ಲ. ಒಡ್ಡಿನಲ್ಲಿ ಆಗಾಗ ಡೊಂಬು ಕಾಣಿಸಿಕೊಳ್ಳುವುದು ಗೇಟ್‌ಗಳಿಂದ ನೀರು ಪೋಲಾಗುವುದು ಇಲ್ಲಿ ಸಾಮಾನ್ಯ. ಚಿಗಳ್ಳಿ ಜಲಾಶಯ ಎರಡು ಬಾರಿ ಒಡ್ಡು ಕುಸಿದು ಆಸ್ತಿ ಪಾಸ್ತಿ ಹಾನಿ ಸಂಬವಿಸಿದ ಆ ಕರಾಳ ದಿನವನ್ನು ಇಂದಿಗೂ ಮರೆಯುವಂತಿಲ್ಲ. ಇದೇ ರೀತಿ ಸನವಳ್ಳಿ, ನ್ಯಾಸರ್ಗಿ, ಸಿಂಗನಳ್ಳಿ, ಅರಶಿಣಗೇರಿ ಸೇರಿದಂತೆ ಬಹುತೇಕ ಜಲಾಶಯಗಳ ಒಡ್ಡು ದುರ್ಬಲಗೊಂಡು ನೀರು ಪೋಲಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡುತ್ತಲೇ ಸಾಗಿದೆ. ಜಲಾಶಯದ ಒಡ್ಡಿನಲ್ಲಿ ಸಮಸ್ಯೆ ಕಾಣಿಸಿಕೊಂಡಾಗಲೆಲ್ಲ ಆ ಕ್ಷಣಕ್ಕೆ ಮಾತ್ರ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ತಾತ್ಕಾಲಿವಾಗಿ ಮಣ್ಣು ಹಾಕಿ ಡೊಂಬು ಮುಚ್ಚುವ ಕೆಲಸ ಮಾಡಿ ಕೈತೊಳೆದುಕೊಳ್ಳುತ್ತಾರೆಯೇ ವಿನಹ ಶಾಶ್ವತ ಪರಿಹಾರ ಕಂಡುಕೊಳ್ಳುವುದಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಆರ್ಭಟ: ದಾಖಲೆಯ 104 ಮಿ.ಮೀ. ಮಳೆ, ಎಲ್ಲೆಲ್ಲಿ ಏನಾಯ್ತು? ಇಲ್ಲಿದೆ ವಿವರ

ಒಡ್ಡು ದುರಸ್ತಿ, ಕಾಲುವೆ, ಗೇಟ್ ಸೇರಿದಂತೆ ಯಾವುದೇ ರೀತಿ ನಿರ್ವಹಣೆ ಇಲ್ಲದೇ ಬಹುತೇಕ ಜಲಾಶಯಗಳು ದುಸ್ಥಿತಿಗೆ ತಲುಪಿವೆ. ತಾಲೂಕಿನಲ್ಲಿ ೬ ಪ್ರಮುಖವಾದ ಜಲಾಶಯಗಳಿದ್ದರೂ ಹಲವು ವರ್ಷಗಳಿಂದ ಯಾವೊಂದು ಜಲಾಶಯಗಳಲ್ಲಿ ಹೂಳು ತೆಗೆಯಲಾಗಿಲ್ಲ. ಇಲಾಖೆಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಹೂಳೆತ್ತುವ ಕೆಲಸ ನಡೆದೇ ಇಲ್ಲ. ಅಲ್ಲದೇ ಮಳೆಗಾಲದಲ್ಲಿ ಅರಣ್ಯ ಪ್ರದೇಶದಿಂದ ಜಲಾಶಯಗಳಿಗೆ ನೀರು ಹರಿದು ಬರುವ ಕೆಲವು ಕಾಲುವೆಗಳು ಕೂಡ ಹೂಳು ತುಂಬಿಕೊಂಡಿರುವುದರಿಂದ ಜಲಾಶಯಗಳಿಗೆ ಸಮರ್ಪಕ ಮಳೆಯ ನೀರು ಹರಿದು ಬರುವುದಿಲ್ಲ. ಇದು ಕೂಡ ತಾಲೂಕಿನ ರೈತ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಲಾಶಯಗಳಲ್ಲಿ ನೀರು ಭರ್ತಿಯಾದರೂ ಯಾವ ಜಲಾಶಯಗಳಲ್ಲಿ ಯಾವ ಸಮಯದಲ್ಲಿ ಏನು ಅನಾಹುತ ಸಂಭವಿಸುತ್ತದೆಯೋ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ತಾಲೂಕಿನಲ್ಲಿ ಯಾವುದೇ ರೀತಿಯ ನೀರಾವರಿ ಯೋಜನೆ ಇಲ್ಲದಿರುವುದರಿಂದ ಇಲ್ಲಿಯ ರೈತರು ಮಳೆಯನ್ನೇ ಆಶ್ರಯಿಸಿ ವ್ಯವಸಾಯ ಮಾಡಬೇಕಿರುವುದು ಅನಿವಾರ್ಯ.

ನಮ್ಮನ್ನಾಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಜಲಾಶಯಗಳು ಯಾವುದೇ ರೀತಿ ಅಭಿವೃದ್ಧಿ ಕಾಣದೇ ಇರುವುದು ವಿಪರ್ಯಾಸವೇ ಸರಿ.

ಮುಂಗಾರು ಮಳೆಗಾಲ ಪ್ರಾರಂಭವಾಗುವುದು ಸನ್ನಿಹಿತವಾಗಿದೆ. ಈ ವರಗೂ ಮಳೆಗಾಲ ಪೂರ್ವ ನಿರ್ವಹಣೆ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಹೂಳೆತ್ತಲು ಉತ್ತಮ ಅವಾಶವಿದ್ದು, ಈಗಲಾದರೂ ಎಚ್ಚೆತ್ತುಕೊಂಡು ಜಲಾಶಯಗಳ ಅಧ್ಯಯನ ನಡೆಸಿ ನಿರ್ವಹಣೆ, ಭದ್ರತೆ ಮತ್ತು ಸಂರಕ್ಷಣೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಅನಾಹುತಗಳನ್ನು ಎದುರಿಸಬೇಕಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: Bengaluru Rains: ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಭಾರೀ ಮಳೆ; ಕೆರೆಯಂತಾದ ರಸ್ತೆಗಳು!

ತಾಲೂಕಿನ ಜಲಾಶಯಗಳೆಲ್ಲ ನಿರ್ವಹಣೆ ಇಲ್ಲದೇ ದುರ್ಬಲಾವಸ್ಥೆ ತಲುಪಿವೆ. ಬಹುತೇಕ ಜಲಾಶಯಗಳ ಕಾಲುವೆ ದುರಸ್ತಿಗೊಳಿಸಿ ರೈತರ ಭೂಮಿಗೆ ನೀರು ಹರಿಸುವ ಕೆಲಸ ಕೂಡ ಮಾಡಿಲ್ಲ. ಪ್ರತಿ ವರ್ಷ ಜಲಾಶಯಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಹೆಸರಲ್ಲಿ ಕೋಟ್ಯಂತರ ಹಣ ಖರ್ಚು ಹಾಕಲಾಗುತ್ತದೆಯೇ ವಿನಃ ಯಾವುದೇ ರೀತಿ ಜಲಾಶಯಗಳು ಮಾತ್ರ ಅಭಿವೃದ್ದಿ ಕಂಡಿಲ್ಲ. ಚಿಕ್ಕನೀರಾವರಿ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಕೆಲಸ ಮಾಡುತ್ತಾರೆ ಎನ್ನುತ್ತಾರೆ ರೈತ ಮುಖಂಡ ಶಿವಾನಂದ ದೊಡ್ಮಮನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌