
ಬೆಂಗಳೂರು(ಮಾ.01): ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು ಎಂಟು ಜನರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದ ಕಾಂಗ್ರೆಸ್‌ನ ನಾಸಿರ್ ಹುಸೇನ್ ಬೆಂಬಲಿಗರು ನಾಸಿರ್ ಹುಸೇನ್ ಪರ ಘೋಷಣೆ ಕೂಗಿದ್ದರು. ಇದರ ನಡುವೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪಾಕ್ ಪರ ಘೋಷಣೆ ಗದ್ದಲ, ಪ್ರತಿಪಕ್ಷ ಸಭಾತ್ಯಾಗ: ಸಿಎಂ ಭಾಷಣ ಮೊಟಕು
ಅಂದು ನಾಸಿರ್ ಹುಸೇನ್ ವಿಜಯೋತ್ಸವದ ವೇಳೆ ಪಕ್ಕದಲ್ಲಿ ಇದ್ದ ಬೆಂಬಲಿಗ ಬ್ಯಾಡಗಿ ಮೂಲದ ಮೊಹಮ್ಮದ್ ಶಫಿ ನಾಶಿಪುಡಿ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಹೀಗಾಗಿ ಬುಧವಾರ ಬ್ಯಾಡಗಿಗೆ ತೆರಳಿದ್ದ ಪೊಲೀಸರ ತಂಡ, ಮೊಹಮ್ಮದ್ ಶಫಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಈತನ ಧ್ವನಿ ಮಾದರಿ ಪಡೆದು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್ಎಲ್)ಕ್ಕೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಶಕ್ತಿಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ: ರಾಜ್ಯ ಸರ್ಕಾರವನ್ನ ತಾಲಿಬಾನ್‌ಗೆ ಹೋಲಿಸಿದ ಸಂಸದ ಪ್ರತಾಪ್ ಸಿಂಹ!
ಪಾಕ್ ಪರ ಘೋಷಣೆ ಕೂಗಿದ ಆರೋಪಕ್ಕೆ ಗುರಿಯಾಗಿರುವ ಮೊಹಮ್ಮದ್ ಶಫಿ ನಾಶಿಪುಡಿ, ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ನಾನು ನಾಸಿರ್‌ಸಾಬ್ ಜಿಂದಾಬಾದ್ ಎಂದು ಕೂಗಿದ್ದೇನೆ. ದೇಶದ್ರೋಹಿ ಘೋಷಣೆ ಕೂಗಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಎಫ್‌ಎಸ್‌ಎಲ್ ವರದಿಗೆ ನಿರೀಕ್ಷೆ
ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ತೆಕ್ಕಣ್ಣನವರ್ ನೇತೃತ್ವದಲ್ಲಿ ತನಿಖೆ ಚುರುಕು ಗೊಂಡಿದೆ. ಪಾಕ್ ಪರ ಘೋಷಣೆ ಕೂಗಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿ ಸಿಕೊಳ್ಳಲು ವಿಡಿಯೊಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಈ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಳ್ಳಲಿದೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ