ಪ್ರಭಾವಿಗಳ ಫಾರ್ಮ್ ಹೌಸ್ ಗೆ ಕಾವೇರಿ ನೀರು ಪಂಪ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ರೈತರಿಗೆ ನೀರಿಲ್ಲ, ಆದ್ರೆ ಡಿವೈಎಸ್‌ಪಿ ಫಾರ್ಮ್ ಹೌಸ್‌ಗೆ ನೀರಿನ ಅಭಾವವೇ ಇಲ್ಲ ಎನ್ನುಂತಾಗಿದೆ.
ಮಂಡ್ಯ (ಫೆ.1): ಕಾವೇರಿ ವಿಚಾರದಲ್ಲಿ ಸಾಮಾನ್ಯ ರೈತನಿಗೊಂದು ಕಾನೂನು, ಪ್ರಭಾವಿಗಳಿಗೆ ಒಂದು ಕಾನೂನು ಎಂಬಂತಾಗಿದೆ. ರೈತರಿಗೆ ಮಾತ್ರ ಬೇಸಿಗೆ ಬೆಳೆಗೆ ನೀರಿಲ್ಲ. ಪ್ರಭಾವಿಗಳ ಫಾರ್ಮ್ ಹೌಸ್ ಗೆ ನೀರಿನ ಸಂಕಷ್ಟ ಇಲ್ಲವೇ ಇಲ್ಲ. ನಾಲೆಗೆ ನೀರು ಬಿಡಲ್ಲ ಎಂದು ಮಂಡ್ಯ ಜಿಲ್ಲಾಡಳಿತ ಹೇಳಿದೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಮತ್ತೊಂದೆಡೆ ಹಾಡಹಗಲೇ KRSಗೆ ಕನ್ನ ಹಾಕಿದ್ರೂ ಯಾರೂ ಪ್ರಶ್ನಿಸುವಂತಿಲ್ಲ. ಇಬ್ಬರು ಪ್ರಭಾವಿ ಫಾರ್ಮ್ ಹೌಸ್ ಮಾಲೀಕರು ಕೆಆರ್‌ಎಸ್ ನಿಂದ ನೀರು ಕದ್ದು ವಿವಿಧ ಬೆಳೆ ಬೆಳೆಯುತ್ತಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಮಂಡ್ಯ ಜಿಲ್ಲಾಡಳಿತದ ವಿರುದ್ಧ ಅನ್ನದಾನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಜಲಾಶಯದಲ್ಲಿ 90.06 ಅಡಿ ನೀರು ಮಾತ್ರ ಸಂಗ್ರಹವಿದೆ. 124. 80 ಅಡಿ ಗರಿಷ್ಠ ಸಂಗ್ರಹ ಮಟ್ಟ. ಸದ್ಯ ಬಳಕೆಗೆ ಇರುವ ನೀರು 11 ಟಿಎಂಸಿ ಮಾತ್ರ ಇದೆ.
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಸ್ತೃತ ವರದಿ ಮಾಡಿದ ತಕ್ಷಣ ಎಚ್ಚೆತ್ತ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪೈಪ್‌ಗಳನ್ನು ಕಿತ್ತು ಹಾಕಿದ್ದಾರೆ. ಕಾವೇರಿ ನೀರಾವರಿ ನಿಗಮದ ಎಇಇ ಕಿಶೋರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಇನ್ನು ಚೆಸ್ಕಾಂ ಸಿಬ್ಬಂದಿ ಅಕ್ರಮವಾಗಿ ಮೋಟಾರ್‌ಗಳಿಗೆ ಪಡೆದಿದ್ದ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಾರೆ.
ಫಾರ್ಮ್ ಹೌಸ್ ಗೆ ಕಾವೇರಿ ನೀರು ಅಕ್ರಮ ಸರಬರಾಜು ಪ್ರಕರಣ. ಪ್ರಭಾವಿ ಡಿವೈಎಸ್‌ಪಿ ಪೊಲೀಸ್ ಅಧಿಕಾರಿಗೆ ಸೇರಿರುವ ಫಾರ್ಮ್ ಹೌಸ್‌ನ ಐಷಾರಾಮಿ ತೋಟದ ಕೂಲಿಕಾರ ಕುಮಾರ್ ಅಸಲಿ ಮಾಹಿತಿ ಬಿಚ್ಚಿಟ್ಟಿದ್ದು, ನಾವೂ ಫಾರ್ಮ್ ಹೌಸ್ ನಲ್ಲಿ ಕೆಲಸಕ್ಕೆ ಇದ್ದೀವಿ 6 ಸಾವಿರ ಸಂಬಳಕ್ಕೆ ಮಗ, ನಾನು ಕೆಲಸ ಮಾಡ್ತಿದ್ದೇವೆ. ಒಂದು ತಿಂಗಳಿಂದ ನೀರು ಪೂರೈಕೆ ಮಾಡಿಕೊಳ್ಳಲಾಗ್ತಿದೆ ಎಂದಿದ್ದಾನೆ.
ಕಿರಣ್ ಫಾಂ ಹೌಸ್ ನೋಡಿಕೊಳ್ಳುತ್ತಿರುವ ವ್ಯಕ್ತಿ. ಈತನ ತಂದೆ ಕುಮಾರ್. ತಂದೆ ಮಗ ಇಬ್ಬರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕಿರಣ್ ಫಾರ್ಮ್ ಹೌಸ್ ಮಾಲೀಕನ ರಕ್ಷಣೆಗಾಗಿ ಅಪ್ಪನನ್ನು ಅಪ್ಪನಲ್ಲ ಎಂದಿದ್ದಾನೆ. ಜೊತೆಗೆ ಫಾರ್ಮ್ ಹೌಸ್ ನಮಗೆ ಸೇರಿದ್ದು ಎಂದಿದ್ದಾನೆ. ಹೀಗಾಗಿ ತನ್ನ ಮಾಲೀಕನಿಗಾಗಿ ಅಪ್ಪನನ್ನೇ ಅಪ್ಪನಲ್ಲ ಎಂದು ಮಗ ಹೇಳಿದ್ದಾರೆ.