ಶಹಾಪುರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಗೋದಾಮಿನಿಂದ 2.06 ಕೋಟಿ ಮೌಲ್ಯದ ಅನ್ನಭಾಗ್ಯ ಅಕ್ಕಿ ಕಳುವಾದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣ ಸೇರಿ ಹಿಂದೆಯೂ ಅಕ್ಕಿ ಅಕ್ರಮ ಸಾಗಾಟ ದಂಧೆಯಲ್ಲಿ ಹೆಸರು ಕೇಳಿಬಂದಿರುವ ವ್ಯಕ್ತಿಗೆ ಪೊಲೀಸರೇ ಸನ್ಮಾಸಿದ್ದಾರೆನ್ನಲಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಆನಂದ್ ಎಂ. ಸೌದಿ
ಯಾದಗಿರಿ (ಡಿ.4) ಶಹಾಪುರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಗೋದಾಮಿನಿಂದ 2.06 ಕೋಟಿ ಮೌಲ್ಯದ ಅನ್ನಭಾಗ್ಯ ಅಕ್ಕಿ ಕಳುವಾದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೀಗ ಈ ಪ್ರಕರಣ ಸೇರಿ ಹಿಂದೆಯೂ ಅಕ್ಕಿ ಅಕ್ರಮ ಸಾಗಾಟ ದಂಧೆಯಲ್ಲಿ ಹೆಸರು ಕೇಳಿಬಂದಿರುವ ವ್ಯಕ್ತಿಗೆ ಪೊಲೀಸರೇ ಸನ್ಮಾಸಿದ್ದಾರೆನ್ನಲಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಅಕ್ಕಿ ಅಕ್ರಮ ದಂಧೆಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ಗುರುಮಠಕಲ್ ಹೆಸರು ಆಗಾಗ್ಗೆ ಕೇಳಿ ಬರುತ್ತದೆ. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ, ಪಾಲಿಶ್ ಮಾಡಿದ ಬಳಿಕ ಹೈದರಾಬಾದ್ ಹಾಗೂ ಮಹಾರಾಷ್ಟ್ರದಲ್ಲಿ ಮರು ಮಾರಾಟ ಮಾಡುವ ದಂಧೆ ಇಲ್ಲಿ ಜೋರಾಗಿಯೇ ನಡೆಯುತ್ತಿದೆ. ಹಲವು ವರ್ಷಗಳಿಂದ ಈ ದಂಧೆ ನಡೆಯುತ್ತಿದ್ದರೂ ಅಧಿಕಾರಿಗಳ ಬೆಂಬಲದಿಂದಾಗಿ ದಂಧೆಯ ಮೂಲ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ.
ಅಕ್ಕಿ ಅಕ್ರಮ ಸಾಗಣೆಯಲ್ಲಿ ಶಹಾಪುರದ ಪ್ರಭಾವಿಯೊಬ್ಬರ ಹೆಸರು ಹಲವು ಬಾರಿ ಕೇಳಿಬಂದಿದ್ದು, ಆ ವ್ಯಕ್ತಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ಜತೆಗೆ ಸಖ್ಯವಿರುವುದು ಸಂಬಂಧಪಟ್ಟ ಇಲಾಖೆಗಳಲ್ಲೇ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಆಹಾರ ಇಲಾಖೆ ಆಯುಕ್ತರಿಗೆ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ ಹಾಗೂ ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಸಾಗರ ಅವರನ್ನು ಖುದ್ದು ಭೇಟಿಯಾಗಿ ಮನವಿ ಪತ್ರವನ್ನೂ ಸಲ್ಲಿಸಿದ್ದಾರೆ.
ಅಲ್ಲದೆ ,ಶಹಾಪುರದಲ್ಲಿ ನಡೆದಿರುವ 2 ಕೋಟಿ ರು. ಅನ್ನಭಾಗ್ಯ ಅಕ್ಕಿ ಕಳವು ಪ್ರಕರಣದಲ್ಲಿ ಪ್ರಭಾವಿ, ಪೊಲೀಸ್ ಮತ್ತು ಆಹಾರ ಇಲಾಖೆ ಅಧಿಕಾರಿಗಳ ಜತೆಗೆ ಸಖ್ಯ ಇರುವ ವ್ಯಕ್ತಿಯ ಕುರಿತೇ ಆರೋಪ ಕೇಳಿಬಂದಿರುವಾಗ ಪ್ರಾಮಾಣಿಕ ತನಿಖೆ ಸಾಧ್ಯವೇ ಎಂದು ಚೆನ್ನಪ್ಪ ಆನೆಗುಂದಿ ಪ್ರಶ್ನಿಸಿದ್ದಾರೆ. ಜತೆಗೆ, ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು. ಈ ಮೂಲಕ ಅನ್ನಭಾಗ್ಯ ಅಕ್ಕಿ ಕಳವು ದಂಧೆಗೆ ಶಾಶ್ವತವಾಗಿ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಇಲ್ಲಿನ ಆಹಾರ ಇಲಾಖೆ ಉಪನಿರ್ದೇಶಕರೊಬ್ಬರ ವಿರುದ್ಧ ಗಂಭೀರ ಆರೋಪಗಳಿರುವುದರಿಂದ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾಡಳಿತದ ಆದೇಶದ ಮೇರೆಗೆ ಈ ಹಿಂದೆ ಬೇರೆಡೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಮತ್ತೆ ಅದೇ ಅಧಿಕಾರಿ ವಾಪಸ್ ಹಳೇ ಸ್ಥಳಕ್ಕೆ ಬಂದಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ. ಜತೆಗೆ, 2 ಕೋಟಿ ರು. ಅನ್ನಭಾಗ್ಯ ಅಕ್ಕಿ ಕಳವು ಪ್ರಕರಣಕ್ಕೆ ಎಳ್ಳು ನೀರು ಬಿಡುವ ಆತಂಕ ವ್ಯಕ್ತವಾಗಿದೆ.
ಮುಂಬೈ ಸೈಬರ್ ಪೊಲೀಸ್ ಸೋಗಲ್ಲಿ ಮಹಿಳಾ ಟೆಕ್ಕಿಗೆ ₹3.46 ಲಕ್ಷ ವಂಚನೆ!
ಅನ್ನಭಾಗ್ಯ ಅಕ್ಕಿ ಕಳವು ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಬೇಕು. ಅಕ್ರಮದಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಲಾದ ಪ್ರಭಾವಿ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಗಳೇ ಇದೀಗ ಸನ್ಮಾನಿಸಿರುವುದು ನಾಚಿಕೆಗೇಡು.
- ಚೆನ್ನಪ್ಪ ಆನೆಗುಂದಿ, ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷರು, ಯಾದಗಿರಿ