ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ: ಬೆಳಗಾವಿ ನಮ್ದೈತಿ!

By Web DeskFirst Published Oct 31, 2018, 10:57 AM IST
Highlights

ಕನ್ನಡ ರಾಜ್ಯೋತ್ಸವ ದಿನದಂದು ಎಂಇಎಸ್ ಕರಾಳ ದಿನಾಚರಣೆ! ಕರಾಳ ದಿನಾಚರಣೆಗೆ ಷರತ್ತುಬದ್ಧ ಅನುಮತಿ ನೀಡಿದ ಪೊಲೀಸ್ ಇಲಾಖೆ! ಎಂಇಎಸ್ ನಾಯಕರಿಂದ 5 ಲಕ್ಷ ರೂ. ಠೇವಣಿ ಬಾಂಡ್‌ನಲ್ಲಿ  ಮುಚ್ಚಳಿಕೆ! ಎಂಇಎಸ್ ಪುಂಡಾಟಿಕೆಗೆ ಬೆಳಗಾವಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಖಡಕ್ ಉತ್ತರ! ಯಾರಪ್ಪಂದ್ ಏನೈತಿ ಬೆಳಗಾವಿ ನಮ್ದೈತಿ ಹಾಡು ಆನ್‌ಲೈನ್‌ನಲ್ಲಿ ವೈರಲ್

ಬೆಳಗಾವಿ(ಅ.31): ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಆಚರಣೆಗೆ ಇಡೀ ರಾಜ್ಯವೇ ಸಜ್ಜಾಗಿ ಕುಳತಿದೆ. ನಾಳೆ ಕನ್ನಡ ಧ್ವಜ ರಾಜ್ಯದ ಮೂಲೆ ಮೂಲೆಗಳಲ್ಲಿ ಹಾರಾಡಲಿದೆ.

ಅದರಂತೆ ಗಡಿ ಜಿಲ್ಲೆ ಬೆಳಗಾವಿ ಕೂಡ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಿಂಗಾರಗೊಂಡಿದೆ. ಆದರೆ ಪ್ರತಿ ಬಾರಿಯಂತೆ ಈ ಬಾರಿಯೂ ಎಂಇಎಸ್ ರಾಜ್ಯೋತ್ಸವದ ದಿನದಂದು ಕರಾಳ ದಿನಾಚರಣೆಗೆ ಮುಂದಾಗಿದೆ.

ಹೌದು, ಕನ್ನಡ ಸಂಘಟನೆಗಳ ವಿರೋಧದ ನಡುವೆಯೂ ನಗರ ಪೋಲೀಸ್ ಇಲಾಖೆ ಮಹಾರಾಷ್ಟ್ರ ಏಕೀಕರಣ ಸಮೀತಿಗೆ ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ನಡೆಸಲು ಷರತ್ತುಬದ್ಧ ಅನುಮತಿ ನೀಡಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕರಿಂದ 5 ಲಕ್ಷ ರೂ. ಠೇವಣಿ ಬಾಂಡ್‌ ನಲ್ಲಿ  ಮುಚ್ಚಳಿಕೆ ಬರೆಸಿಕೊಂಡು, ಪ್ರಚೋದನಕಾರಿ ಘೋಷಣೆ ಕೂಗುವುದು ನಿಷೇಧ ಸೇರಿದಂತೆ ಷರತ್ತುಬದ್ದ ಅನುಮತಿಯನ್ನು ಕರಾಳ ದಿನಾಚರಣೆಗೆ ನೀಡಲಾಗಿದೆ.

ಮಾರ್ಕೆಟ್ ಠಾಣೆಯ ವರದಿ ಆಧರಿಸಿ ದೀಪಕ ದಳವಿ ಸೇರಿದಂತೆ ಹಲವು ಎಂಇಎಸ್ ನಾಯಕರನ್ನು ಪ್ರತಿವಾದಿಗಳನ್ನಾಗಿಸಿ ಅನುಮತಿ ನೀಡಿ ಡಿಸಿಪಿ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.

ಆದರೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಪ್ರತಿ ಬಾರಿಯೂ ಎಂಇಎಸ್ ರಾಜ್ಯೋತ್ಸವ ದಿನದಂದು ಪ್ರತಿಭಟನೆ ಹೆಸರಲ್ಲಿ ಶಾಂತಿ ಭಂಗ ಉಂಟು ಮಾಡಲು ಪ್ರಯತ್ನ ನಡೆಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ಎಂಇಎಸ್ ಪುಂಡರು ರಾಜ್ಯೋತ್ಸವ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಾ, ಕರ್ನಾಟಕ ಮರಾಠಿ ಭಾಷಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂಬ ಸಂದೇಶ ಸರಲು ಪ್ರಯತ್ನಿಸುತ್ತಾರೆ.

ಇದೇ ಕಾರಣಕ್ಕೆ ಕನ್ನಡ ಪರ ಸಂಘಟನೆಗಳು ಎಂಇಎಸ್ ಕರಾಳ ದಿನಾಚರಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸುತ್ತಲೇ ಇವೆ. ಆದರೂ ಸ್ಥಳೀಯ ಆಡಳಿತ ಪ್ರತಿ ಬಾರಿ ಷರತ್ತುಬದ್ಧ  ಕರಾಳ ದಿನ ಆಚರಣೆಗೆ ಅನುಮತಿ ನೀಡುತ್ತಲೇ ಇದೆ.

ಇನ್ನು ಎಂಇಎಸ್ ಪುಂಡಾಟಿಕೆಗೆ ಉತ್ತರವೆಂಬಂತೆ ಬೆಳಗಾವಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೂತನ ಐಡಿಯಾವೊಂದನ್ನು ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವಕ್ಕೆ ವಿದ್ಯಾರ್ಥಿಗಳು ಡಿಜೆ ಸಾಂಗ್ ರೆಡಿ ಮಾಡಿದ್ದು, ಕರಾಳ ದಿನ ಆಚರಿಸುವ ಎಂಇಎಸ್ ಪುಂಡರಿಗೆ ಖಡಕ್ ಉತ್ತರ ನೀಡಿದ್ದಾರೆ.

ಬೆಳಗಾವಿ ಫೇಸ್ ಬುಕ್ ಪುಟದ ತಂಡ ವಿನೂತನ ಹಾಡು ಸಿದ್ಧಪಡಿಸಿದ್ದು, ದಿ ವಿಲನ್ ಸಿನಿಮಾ ಮ್ಯೂಸಿಕ್, ಟಿಕ್ ಟಿಕ್ ಟಿಕ್ ಟ್ರಾಕ್‌ಗೆ ಯಾರಪ್ಪಂದ್ ಏನೈತಿ ಬೆಳಗಾವಿ ನಮ್ದೈತಿ ಲಿರಿಕ್ಸ್ ಬರೆದಿದ್ದಾರೆ.

click me!