ಶಿವಮೊಗ್ಗ, ಬೆಳಗಾವಿಯಲ್ಲಿ ಇಂದು ಮೋದಿ ಮಿಂಚು..!

By Kannadaprabha News  |  First Published Feb 27, 2023, 4:00 AM IST

6000 ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಶಿವಮೊಗ್ಗ ಏರ್‌ಪೋರ್ಟ್‌, ಬೆಳಗಾವಿ ನವೀಕೃತ ರೈಲು ನಿಲ್ದಾಣ ಉದ್ಘಾಟನೆ, ಉದ್ಘಾಟನೆಗೆ ಸಜ್ಜಾಗಿರುವ ಶಿವಮೊಗ್ಗದ ಸೋಗಾನೆಯಲ್ಲಿರುವ ನೂತನ ವಿಮಾನ ನಿಲ್ದಾಣ.


ಶಿವಮೊಗ್ಗ/ಬೆಳಗಾವಿ(ಫೆ.27):  ಈ ತಿಂಗಳಲ್ಲಿ ಮೂರನೇ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ಮಿಂಚಿನ ಸಂಚಾರ ನಡೆಸಲಿದ್ದಾರೆ. ಇನ್ನೇನು ಘೋಷಣೆಯಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮನ ಗೆಲ್ಲಲು ಮುಂದಾಗಿರುವ ಅವರು ಸುಮಾರು 700 ಕೋಟಿ ರು. ವೆಚ್ಚದ 4 ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಜೊತೆಗೆ, 5,300 ಕೋಟಿಗೂ ಹೆಚ್ಚು ವೆಚ್ಚದ 14 ವಿವಿಧ ಕಾಮ​ಗಾ​ರಿ​ಗ​ಳ ಶಂಕು​ಸ್ಥಾ​ಪನೆ ನೆರ​ವೇ​ರಿ​ಸ​ಲಿ​ದ್ದಾ​ರೆ​.

ಬೆಳಗ್ಗೆ 11.35ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿರುವ ಮೋದಿ, ಸೋಗಾನೆಯಲ್ಲಿ 450 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ ನಂತರದ ರಾಜ್ಯದ 2ನೇ ಅತಿ ದೊಡ್ಡ ವಿಮಾನ ನಿಲ್ದಾಣ ಇದಾಗಿದೆ. ನಂತರ, 3500 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Tap to resize

Latest Videos

PM Modi Visit Belagavi: ಮೋದಿ ಸ್ವಾಗತಿಸಲು ಸಜ್ಜಾದ ಕುಂದಾನಗರಿ, 10.7ಕಿಮೀ ಅದ್ಧೂರಿ ರೋಡ್ ಶೋ!

ಮಧ್ಯಾಹ್ನ 2.20ಕ್ಕೆ ಬೆಳಗಾವಿಗೆ ಆಗಮಿಸಲಿರುವ ಮೋದಿ, 190 ಕೋಟಿ ರು.ವೆಚ್ಚದಲ್ಲಿ ನವೀಕರಣಗೊಂಡ ಬೆಳಗಾವಿ ರೈಲ್ವೆ ನಿಲ್ದಾಣ ಉದ್ಘಾಟಿಸಲಿದ್ದಾರೆ. ಬಳಿಕ, ನಗರದ ಕೆಎಸ್‌ಆರ್‌ಪಿ ಮೈದಾನದಿಂದ ಮಾಲಿನಿ ಸಿಟಿಯವರೆಗೆ ಸುಮಾರು 10 ಕಿ.ಮೀ. ದೂರ ಬೃಹತ್‌ ರೋಡ್‌ ಶೋ ನಡೆಸಲಿದ್ದಾರೆ. ಈ ವೇಳೆ, 10 ಸಾವಿರ ಮಹಿಳೆಯರು ಮೋದಿಗೆ ಪೂರ್ಣಕುಂಭ ಸ್ವಾಗತ ಕೋರಲಿದ್ದಾರೆ. ಬಳಿಕ, ಮಾಲಿನಿ ಸಿಟಿಯಲ್ಲಿ ಬೃಹತ್‌ ಸಮಾವೇಶ ನಡೆಸಿ, ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಇದೇ ವೇಳೆ, ಸುಮಾರು 2.5 ಸಾವಿರ ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವುದರ ಜೊತೆ ‘ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್‌ ಯೋಜನೆ’ಯ 13ನೇ ಕಂತಾಗಿ 8 ಕೋಟಿ ರೈತರ ಖಾತೆಗೆ 16 ಸಾವಿರ ಕೋಟಿ ರು. ಬಿಡುಗಡೆ ಮಾಡಲಿದ್ದಾರೆ.

ಸಮಾವೇಶಕ್ಕಾಗಿ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಸುಮಾರು 10 ಎಕರೆಯಷ್ಟುವಿಸ್ತೀರ್ಣವಾದ ಪ್ರದೇಶದಲ್ಲಿ ಬೃಹತ್‌ ಪೆಂಡಾಲ್‌ ನಿರ್ಮಾಣ ಮಾಡಲಾಗಿದ್ದು, ಸುಮಾರು 2 ಲಕ್ಷ ಜನ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಉಭಯ ನಗರಗಳ ಪ್ರಮುಖ ಸ್ಥಳಗಳಲ್ಲಿ ಬಿಜೆಪಿಯ ಬಾವುಟ, ಮೋದಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದ್ದು, ಉಭಯ ನಗರಗಳು ಕೇಸರಿಮಯವಾಗಿವೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ದೇಶದ ಸಂಸ್ಕೃತಿ, ಧರ್ಮ ಉಳಿಬೇಕಂದ್ರ ಬಿಜೆಪಿಗೆ ವೋಟು ಹಾಕಿ: ಪಿಎಫ್ ಪಾಟೀಲ್

ನಮೋ ಅಭಿವೃದ್ಧಿ ಪಥ

- 450 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ
- 990 ಕೋಟಿ ರು. ವೆಚ್ಚದ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗಕ್ಕೆ ಶಂಕು
- 197 ಕೋಟಿ ರು.ವೆಚ್ಚದ ಕೋಟೆಗಂಗೂರಿನ ನೂತನ ರೈಲ್ವೆ ಕೋಚ್‌ ಫ್ಯಾಕ್ಟರಿಗೆ ಶಂಕುಸ್ಥಾಪನೆ
- 215 ಕೋಟಿ ರು. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅನೇಕ ಕಾಮಗಾರಿಗಳಿಗೆ ಚಾಲನೆ
- 950 ಕೋಟಿ ರು.ನಲ್ಲಿ ‘ಜಲಜೀವನ್‌ ಮಿಷನ್‌’ನಡಿ ಶಿವಮೊಗ್ಗದ ಕುಡಿವ ನೀರು ಯೋಜನೆಗೆ ಶಂಕು
- 45 ಕೋಟಿ ರು. ವೆಚ್ಚದ ಶಿವಮೊಗ್ಗ ಕೇಂದ್ರ ಡೇರಿ ಆವರಣದ ಶಿಮುಲ್‌ ಕಟ್ಟಡ ಉದ್ಘಾಟನೆ
- 8 ಕೋಟಿ ರು. ವೆಚ್ಚದ ಶಿವಮೊಗ್ಗದ ಮ್ಯಾಮ್‌ಕೋಸ್‌ ಆಡಳಿತ ಕಚೇರಿ ಕಟ್ಟಡ ಲೋಕಾರ್ಪಣೆ
- 190 ಕೋಟಿ ರು. ವೆಚ್ಚದಲ್ಲಿ ನವೀಕರಣಗೊಂಡ ಬೆಳಗಾವಿಯ ರೈಲ್ವೆ ನಿಲ್ದಾಣದ ಉದ್ಘಾಟನೆ
- 1022 ಕೋಟಿ ರು. ವೆಚ್ಚದ ರೈಲ್ವೆ ಕಾಮಗಾರಿಗೆ (ಬೆಳಗಾವಿ-ಲೋಂಡಾ ಡಬ್ಲಿಂಗ್‌ ಸೇರಿ) ಶಂಕು
- 1030 ಕೋಟಿ ರು.ನಲ್ಲಿ ‘ಜಲಜೀವನ್‌ ಮಿಷನ್‌’ನಡಿ ಬೆಳಗಾವಿಯ ಕುಡಿವ ನೀರು ಯೋಜನೆಗೆ ಶಂಕು
.16000 ಕೋಟಿ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ 13ನೇ ಕಂತಾಗಿ 8 ಕೋಟಿ ರೈತರ ಖಾತೆಗೆ ಹಣ ಬಿಡುಗಡೆ

ಬಿಎಸ್‌ವೈ ಹುಟ್ಟುಹಬ್ಬ ದಿನದಂದೇ ಶಿವಮೊಗ್ಗ ಏರ್‌ಪೋರ್ಟ್‌ ಉದ್ಘಾಟನೆ

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸೋಮವಾರ 80 ವರ್ಷ ತುಂಬುತ್ತಿದ್ದು, ಅವರ ಹುಟ್ಟುಹಬ್ಬದ ದಿನವೇ ಅವರ ರಾಜಕೀಯ ತವರು ಜಿಲ್ಲೆ ಶಿವಮೊಗ್ಗದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳುತ್ತಿದೆ. 775 ಎಕರೆ ಪ್ರದೇಶದಲ್ಲಿ 450 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಜ್ಯದ 9ನೇ ಹಾಗೂ ದೇಶದ 148ನೇ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

click me!