ಶುಕ್ರವಾರ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗಾಳಿ ಮತ್ತೊಮ್ಮೆ ಬಲವಾಗಿ ಬೀಸಲಿದೆ. ಒಟ್ಟು ಐದು ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದು, ಸಾರ್ವಜನಿಕ ಸಮಾವೇಶವನ್ನೂ ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆಂಗಳೂರು (ನ.10): ಶುಕ್ರವಾರ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗಾಳಿ ಮತ್ತೊಮ್ಮೆ ಬಲವಾಗಿ ಬೀಸಲಿದೆ. ಒಟ್ಟು ಐದು ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದು, ಸಾರ್ವಜನಿಕ ಸಮಾವೇಶವನ್ನೂ ಉದ್ದೇಶಿಸಿ ಮಾತನಾಡಲಿದ್ದಾರೆ. ನಾಡಪ್ರಭು ಕೆಂಪೇಗೌಡ ಅವರ 108 ಅಡಿಯ ಕಂಚಿನ ಪ್ರತಿಮೆ ಅನಾವರಣ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು, ಶುಕ್ರವಾರ ಬೆಳಗ್ಗೆ 6.20ಕ್ಕೆ ದೆಹಲಿಯಿಂದ ವಿಶೇಷ ವಿಮಾನದಿಂದ ಪ್ರಯಾಣ ಬೆಳೆಸಿ 9ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
9.45ಕ್ಕೆ ವಿಧಾನಸೌಧಕ್ಕೆ ಆಗಮಿಸುವ ಮೋದಿ ಅವರು ಕನಕದಾಸ ಮತ್ತು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಶುಕ್ರವಾರ ಕನಕ ಜಯಂತಿ ಇದೆ. ನಂತರ 10.20ಕ್ಕೆ ರಸ್ತೆಯ ಮೂಲಕ ಸಂಗೊಳ್ಳಿ ರಾಯಣ್ಣ ವಿಮಾನ ನಿಲ್ದಾಣಕ್ಕೆ ಬಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಭಾರತ್ ಗೌರವ ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಅಲ್ಲಿನ ಕಾರ್ಯಕ್ರಮ ಮುಗಿಸಿ ರಸ್ತೆಯ ಮೂಲಕ ಎಎಫ್‌ಟಿಸಿಸಿ ಹೆಲಿಪ್ಯಾಡ್‌ಗೆ ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.
218 ಟನ್ ತೂಕದ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಅಂತಿಮ ಹಂತದ ಸಿದ್ಧತೆ
ನಂತರ 11.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್- 2 ಉದ್ಘಾಟನೆ ಮಾಡಲಿದ್ದಾರೆ. ತದನಂತರ ಮಧ್ಯಾಹ್ನ 12 ಗಂಟೆಗೆ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. 20 ನಿಮಿಷಗಳ ಅಲ್ಲಿನ ಕಾರ್ಯ ಮುಗಿಸಿದ ಬಳಿಕ ರಸ್ತೆಯ ಮೂಲಕ ಸಾರ್ವಜನಿಕ ಸಮಾರಂಭಕ್ಕೆ 12.20ಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 1.45ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಬೆಂಗಳೂರು ಏರ್ಪೋರ್ಟ್‌ನ ಟರ್ಮಿನಲ್ 2ಗೆ ಚಾಲನೆ: ಆತ್ಯಾಧುನಿಕ ವಿನ್ಯಾಸ, ಹೆಚ್ಚಿನ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ, ಪ್ರಯಾಣಿಕ ಸ್ನೇಹಿ ತಂತ್ರಜ್ಞಾನ ಹಾಗೂ ಹಚ್ಚಹಸಿರಿನ ವಾತಾವರಣದೊಂದಿಗೆ ನಿರ್ಮಿಸಿರುವ ಬೆಂಗಳೂರಿನ ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದ ಎರಡನೇ ಟರ್ಮಿನಲ್‌ನ ಮೊದಲ ಹಂತವು ಪ್ರಯಾಣಿಕರ ಬಳಕೆಗೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ನ.11) ನೂತನ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಬರೋಬ್ಬರಿ 2.55 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ 13 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಟರ್ಮಿನಲ್ ವಾರ್ಷಿಕ 2.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಒಮ್ಮೆಗೆ 6000ಕ್ಕೂ ಅಧಿಕ ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಟರ್ಮಿನಲ್‌ನಿಂದ ಮೊದಲಿಗೆ ದೇಶೀ ವಿಮಾನಗಳ ಹಾರಾಟ ಆರಂಭವಾಗಲಿದ್ದು, ಬಳಿಕ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸಲಿವೆ. ದೇಶದಲ್ಲಿಯೇ ಅತಿಹೆಚ್ಚು ಪ್ರಯಾಣಿಕರು ಓಡಾಟ ನಡೆಸುವ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ಒಂದಾಗಿದೆ. ಸದ್ಯ ವಾರ್ಷಿಕ 1.62 ಕೋಟಿ ಪ್ರಯಾಣಿಕರು ಓಡಾಟ ನಡೆಸುತ್ತಿದ್ದಾರೆ. ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ಟರ್ಮಿನಲ್ 1ಕ್ಕೆ ಹೋಲಿಸಿದರೆ ನೂತನ ಟರ್ಮಿನಲ್ ಒಂದೂವರೆ ಪಟ್ಟು ಹೆಚ್ಚಿನ ವಿಸ್ತೀರ್ಣ, ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ.
13 ಸಾವಿರ ಕೋಟಿ ವೆಚ್ಚ: ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಮೊದಲ ಹಂತವನ್ನು 13 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಿಎಟಿ 3ಬಿ ರನ್ ವೇ ನಿರ್ಮಿಸಲಾಗಿದ್ದು, ವ್ಯತಿರಿಕ್ತ ಹವಾಮಾನದಲ್ಲಿಯೂ ವಿಮಾನಗಳನ್ನು ಸರಾಗವಾಗಿ ಲ್ಯಾಂಡ್, ಟೇಕಾಫ್ ಮಾಡಬಹುದು. ಇನ್ನು ಎರಡನೇ ಹಂತವು 4.41 ಲಕ್ಷ ಚದರ ಮೀಟರ್‌ನಲ್ಲಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.
ಭೂಕಂಪವಾದರೂ ಅಲುಗಾಡದು ಕೆಂಪೇಗೌಡ ಪ್ರತಿಮೆ: ಸಚಿವ ಅಶ್ವತ್ಥ್‌ನಾರಾಯಣ
ಬೊಂಬು ಬಳಸಿ ನಿರ್ಮಾಣ: ಟರ್ಮಿನಲ್-2 ಬೆಂಗಳೂರಿನ ಉದ್ಯಾನನಗರಿ ಮಾದರಿಯಲ್ಲಿ ಸಿದ್ಧಪಡಿಸಿದ್ದು, ‘ಹೈಟೆಕ್ ಜತೆ ಹಚ್ಚ ಹಸಿರಿನ ಪರಿಸರ’ ಇದೆ. ಲಕ್ಷಾಂತರ ಬೊಂಬುಗಳನ್ನು ಬಳಸಿ ಆಕರ್ಷಕ ಒಳಾಂಗಣ ವಿನ್ಯಾಸ ಮಾಡಲಾಗಿದೆ. ಹಚ್ಚ ಹಸಿರಿನ ಹೊದಿಕೆ ಇದೆ. ಗಿಡಗಳು, ಚಿಕ್ಕ ಕುಂಡದಲ್ಲಿ ಸ್ಥಳೀಯ ಸಸ್ಯಪ್ರಭೇದಗಳನ್ನು ಹಾಕಲಾಗಿದೆ. ಸೂರ್ಯನ ಬೆಳಕು ನೇರವಾಗಿ ಟರ್ಮಿನಲ್ ಒಳಗೆ ಬೀಳುವಂತೆ ವಿನ್ಯಾಸ ಮಾಡಲಾಗಿದೆ. ಪ್ರಯಾಣಿಕರು ಪ್ರವೇಶಿಸಿದರೆ ಉದ್ಯಾನಕ್ಕೆ ಬಂದ ಅನುಭವವಾಗುತ್ತದೆ. ಡಿಜಿಟಲ್ ಪ್ರಯಾಣಿಕ ಸ್ನೇಹಿ ಅಂಶಗಳು, ಮೊದಲ ಟರ್ಮಿನಲ್ ಸಂಪರ್ಕ, ಹೋಟೆಲ್, ಬಹುಹಂತದ ಪಾರ್ಕಿಂಗ್ ಒಳಗೊಂಡಿದೆ.