ಮಲೆನಾಡು ಹಾಡಿ ಹೊಗಳಿದ ಮೋದಿ: ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯ ಅಭಿವೃದ್ಧಿ ಪಥದಲ್ಲಿದೆ ಎಂದ ಪ್ರಧಾನಿ

By BK AshwinFirst Published Feb 27, 2023, 1:50 PM IST
Highlights

ಕರ್ನಾಟಕದ ಈ ವಿಕಾಸದ ಅಭಿಯಾನ ಮತ್ತಷ್ಟು ವೇಗದಲ್ಲಿ ಅಭಿವೃದ್ಧಿಯಾಗಲಿದ್ದು, ಶಿವಮೊಗ್ಗ ಜನರ ಕನಸು ನನಸಾಗುತ್ತಿದೆ ಎಂದೂ ಪ್ರಧಾನಿ ಮೋದಿ ಶಿವಮೊಗ್ಗದಲ್ಲಿ ಮಾತನಾಡಿದ್ದಾರೆ. 

ಶಿವಮೊಗ್ಗ (ಫೆಬ್ರವರಿ 27, 2023) : ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸೋಮವಾರ ಶಿವಮೊಗ್ಗ ಏರ್‌ಪೊರ್ಟ್‌ ಅನ್ನು ಉದ್ಘಾಟಿಸಿದ್ರು. ಜತೆಗೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದ್ದಾರೆ. ಇನ್ನು, ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಮಲೆನಾಡು ಪ್ರಮುಕವಾಗಿ ಶಿವಮೊಗ್ಗ ಜಿಲ್ಲೆಯನ್ನು ಹಾಡಿ ಹೊಗಳಿದರು. ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿಯ ವೇಗವೂ ಎರಡು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಮೊದಿ ಈ ವೇಳೆ ಹೇಳಿದರು. ಪ್ರಮುಖವಾಗಿ, ಯಡಿಯೂರಪ್ಪ ಜನ್ಮದಿನಕ್ಕೆ ಶುಭ ಕೋರಿದ ಪ್ರಧಾನಿ, ಮಾಜಿ ಸಿಎಂ ಅನ್ನು ಸಹ ಶ್ಲಾಘಿಸಿದ್ದು, ಶಿವಮೊಗ್ಗ ಏರ್‌ಪೋರ್ಟ್ ಅನ್ನು ಬಿಎಸ್‌ವೈ ಬರ್ತಡೇ ಉಡುಗೊರೆಯನ್ನಾಗಿ ನೀಡಿದ್ದಾರೆ.

ಸಿರಿಗನ್ನಡಂ ಗೆಲ್ಗೆ ಎಂದು ಮೋದಿ ಮಾತು ಆರಂಭಿಸಿದ್ದು, ಬಳಿಕ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಲೋಕಾರ್ಪಣೆ, ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನಗೆ ದೊರೆತಿದೆ.  ಇಂದು ಶಿವಮೊಗ್ಗಕ್ಕೆ ಏರ್‌ಪೋರ್ಟ್‌ ಸಿಕ್ಕಿದ್ದು, ಜನರ ಕನಸು ಈಡೇರಿದೆ. ಶಿವಮೊಗ್ಗ ಏರ್‌ಪೋರ್ಟ್‌ ಬಹಳ ಸುಂದರವಾಗಿದೆ. ರಸ್ತೆ, ರೈಲ್ವೆ ಯೋಜನೆಗಳಿಗೂ ಶಿಲಾನ್ಯಾಸ, ಕೆಲಸ ಕಾರ್ಯ ಆರಂಭವಾಗಿದೆ. ಈ ಹಿನ್ನೆಲೆ ಶಿವಮೊಗ್ಗ ಸುತ್ತಮುತ್ತಲಿನ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದೂ ಹೇಳಿದ್ರು. 

ಇದನ್ನು ಓದಿ: Belagavi: ಫೆ.27ರಂದು ಕುಂದಾನಗರಿಗೆ ಪ್ರಧಾನಿ ಮೋದಿ ಭೇಟಿ: ರೋಡ್ ಶೋಗೆ ಭರ್ಜರಿ ಸಿದ್ಧತೆ

ಬಳಿಕ, ಮಾಜಿ ಸಿಎಂ ಯಡಿಯೂರಪ್ಪನವರನ್ನು ಪ್ರಧಾನಿ ಮೋದಿ ಹಾಡಿ ಹೊಗಳಿದ್ದಾರೆ. ಇಂದು ಕರ್ನಾಟಕದ ಲೋಕಪ್ರಿಯ ಜನನೇತಾ ಯಡಿಯೂರಪ್ಪನವರ ಜನ್ಮದಿನ, ಅವರು ಬಡವ, ರೈತರ ಕಲ್ಯಾಣಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ ಅಂದ್ರು. ನಂತರ, ಬಿಎಸ್‌ವೈ ವಿದಾಯ ಭಾಷಣ ಉಲ್ಲೇಖಿಸಿದ ಮೋದಿ, ಕರ್ನಾಟಕ ವಿಧಾನಸಭೆಯಲ್ಲಿ ಯಡಿಯೂರಪ್ಪನವರು ಇತ್ತೀಚೆಗೆ ಭಾಷಣ ಮಾಡಿದ್ದು, ಇದು ಸಾರ್ವಜನಿಕ ಜೀವನದಲ್ಲಿರುವವರಿಗೆ ಪ್ರೇರಣೆಯಾಗಿದೆ ಎಂದೂ ಹೇಳಿದ್ರು. ಅಲ್ಲದೆ, ಮೊಬೈಲ್‌ ಫ್ಲ್ಯಾಶ್‌ಲೈಟ್‌ ಮೂಲಕ ಯಡಿಯೂರಪ್ಪನವರಿಗೆ ಗೌರವ ಅರ್ಪಿಸಿ ಎಂದು ಜನತೆಗೆ ಮೋದಿ ಕೇಳಿಕೊಂಡಿದ್ದು, ಬಳಿಕ ಸುಮಾರು ಒಂದು ಲಕ್ಷ ಜನತೆ ತಮ್ಮ ಮೊಬೈಲ್‌ಗಳ ಫ್ಲ್ಯಾಶ್‌ಲೈಟ್‌ ಆನ್‌ ಮಾಡಿದ್ರು.

ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿಯ ವೇಗ ಎರಡು ಪಟ್ಟಾಗಿದೆ
ಬಿಜೆಪಿ ಸರ್ಕಾರದಲ್ಲಿ, ಅದರಲ್ಲೂ ಡಬಲ್‌ ಎಂಜಿನ್‌ ಸರ್ಕಾರದಿಂದ ದೇಶದ ಅಭಿವೃದ್ಧಿಯ ಏಗ 2 ಪಟ್ಟಾಗಿದ್ದು, ಅದೇ ರೀತಿ ಕರ್ನಾಟಕದಲ್ಲೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಈ ಹಿಂದೆ ಕರ್ನಾಟಕದ ಅಭಿವೃದ್ಧಿಯ ವೇಗಕ್ಕಿಂತ ಬಿಜೆಪಿ ಸರ್ಕಾರ ಬಂದ ಮೇಲೆ ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ಶಿವಮೊಗ್ಗದ ವಿಕಾಸವೂ ಇದರ ಪರಿಣಾಮವಾಗಿದೆ ಎಂದು ಹೇಳಿದ್ರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಮಾ.11ಕ್ಕೆ ಮೋದಿ ಉದ್ಘಾಟನೆ

ಅಲ್ಲದೆ, ಭಾರತೀಯ ವಾಯುಯಾನ ಮಾರುಕಟ್ಟೆಗೆ ವಿಶ್ವ ಮಟ್ಟದಿಂದಲೂ ಶ್ಲಾಘನೆ ವ್ಯಕ್ತವಾಗುತ್ತಿದೆ. 2014ಕ್ಕೂ ಮೊದಲು ದೇಶದಲ್ಲಿ ದೊಡ್ಡ ನಗರಗಳಲ್ಲಿ ಮಾತ್ರ ಏರ್‌ಪೋರ್ಟ್ ಇತ್ತು. ಚಿಕ್ಕ ಚಿಕ್ಕ ನಗರಗಳಲ್ಲಿ ಏರ್‌ಪೋರ್ಟ್‌ ಮಾಡುವ ಬಗ್ಗೆ ಕಾಂಗ್ರೆಸ್‌ ಯೋಚಿಸಿರಲಿಲ್ಲ. ಆದರೆ, ಬಿಜೆಪಿ ಇದನ್ನು ಬದಲಾಯಿಸಿದ್ದು, 74 ನೂತನ ಏರ್‌ಪೋರ್ಟ್‌ ನಿರ್ಮಿಸಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೂ, ಬಡವರಿಗಾಗಿ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರ ಹವಾಯಿ ಚಪ್ಪಲಿ ಹಾಕಿರುವ ಜನರೂ ಸಹ ವಿಮಾನದಲ್ಲಿ ಪ್ರಯಾಣಿಸುವಂತಾಯಿತು. ಉಡಾನ್‌ ಯೋಜನೆ ಮೂಲಕ ಸಾಧ್ಯವಾಯಿತು ಎಂದೂ ಮೋದಿ ಉಡಾನ್‌ ಯೋಜನೆಯನ್ನು ಸ್ಮರಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆ ಹಾಡಿ ಹೊಗಳಿದ ಪ್ರಧಾನಿ
ಶಿವಮೊಗ್ಗ ಜಿಲ್ಲೆ ನೇಚರ್, ಕಲ್ಚರ್‌, ಅಗ್ರಿಕಲ್ಚರ್‌ (ಪರಿಸರ, ಸಂಸ್ಕೃತಿ, ಕೃಷಿ) ಯಿಂದ ಕೂಡಿದೆ ಎಂದ ಪ್ರಧಾನಿ, ಮಲೆನಾಡನ್ನು ಹಾಡಿ ಹೊಗಳಿದ್ರು. ಈ ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು ನದಿ, ಅರಣ್ಯ ಸಂಪತ್ತು ಅದ್ಭುತವಾಗಿದೆ ಅಂದ್ರು. ಈ ವೇಳೆ ಸಕ್ರೆಬೈಲು ಆನೆ ಶಿಬಿರ, ತ್ಯಾವರೆಕೊಪ್ಪ ಸಿಂಹ ಧಾಮವನ್ನೂ ಪ್ರಸ್ತಾಪಿಸಿದ್ರು. ನಂತರ ಗಂಗಾ ಸ್ನಾನ, ತುಂಗಾ ಪಾನ ಎಂದು ಬಣ್ಣಿಸಿದ ಮೋದಿ, ಗಂಗಾ ನದಿಯಲ್ಲಿ ಸ್ನಾನ, ತುಂಗಾ ನದಿಯ ನೀರು ಕುಡಿಯದಿದ್ದರೆ ಜೀವನ ಅಪೂರ್ಣವಾಗುತ್ತದೆ ಎಂದೂ ಹೇಳಿದ್ರು. 

ಅಲ್ಲದೆ, ರಾಷ್ಟ್ರಕವಿ ಕುವೆಂಪು, ಸಂಸ್ಕೃತ ಗ್ರಾಮ ಮತ್ತೂರು, ಸಿಗಂಧೂರು ಚೌಡೇಶ್ವರಿ, ಕೋಟೆ ಆಂಜನೇಯ, ಶ್ರೀಧರ ಸ್ವಾಮೀಜಿ ಆಶ್ರಮ ಮುಂತಾದ ಆಧ್ಯಾತ್ಮ ಸ್ಥಳ, ಗ್ರಾಮಗಳನ್ನು ಶಿವಮೊಗ್ಗ ಹೊಂದಿದೆ ಎಂದೂ ಹೇಳಿದ್ರು. ಹಾಗೆ, ಆಗುಂಬೆಯ ಸೂರ್ಯಾಸ್ತಮಾನ, ಈಸೂರಿನ ಬಗ್ಗೆಯೂ ಮಾತನಾಡಿದ್ರು.

ಡಬಲ್‌ ಎಂಜಿನ್‌ ಸರ್ಕಾರದಿಂದ ರಸ್ತೆ, ರೈಲ್ವೆ ಮೂಲಸೌಲಭ್ಯ ಹೆಚ್ಚಾಗಿದೆ. ಇದರಿಂದ ರೈತರಿಗೂ ಸಹ ಮಾರುಕಟ್ಟೆ ಸಿಗಲಿದೆ. ಶಿವಮೊಗ್ಗ ಏರ್‌ಪೋರ್ಟ್‌ನಿಂದ ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲ, ದಾವಣಗೆರೆ, ಹಾವೇರಿ ಜಿಲ್ಲೆಗೂ ಲಾಭವಾಗಲಿದೆ. ಶಿವಮೊಗ್ಗದಲ್ಲಿ ಮಸಾಲೆ ಪದಾರ್ಥಗಳಂತಹ ವೈವಿಧ್ಯಮಯ ಉತ್ಪನ್ನಗಳಿವೆ. ಇದು ಶೈಕ್ಷಣಿಕ ಹಬ್ ಸಹ ಆಗಿದ್ದು, ಈ ಹಿನ್ನೆಲೆ ಏರ್‌ಪೋರ್ಟ್‌ನಿಂದ ಮತ್ತಷ್ಟು ಉದ್ಯೋಗಗಳು ದೊರೆಯಲಿದೆ ಎಂದೂ ಮೋದಿ ಜನತೆಗೆ ಹೇಳಿದ್ರು. 

ಅಲ್ಲದೆ, ಮೊದಲ ಬಾರಿಗೆ ವಿಶ್ವಮಟ್ಟದಲ್ಲಿ ಭಾರತಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಕರ್ನಾಟಕದ ಈ ವಿಕಾಸದ ಅಭಿಯಾನ ಮತ್ತಷ್ಟು ವೇಗದಲ್ಲಿ ಅಭಿವೃದ್ಧಿಯಾಗಲಿದ್ದು, ಶಿವಮೊಗ್ಗ ಜನರ ಕನಸು ನನಸಾಗುತ್ತಿದೆ ಎಂದೂ ಪ್ರಧಾನಿ ಮೋದಿ ಶಿವಮೊಗ್ಗದಲ್ಲಿ ಮಾತನಾಡಿದ್ದಾರೆ. 

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಶಿವಮೊಗ್ಗ ಏರ್‌ಪೋರ್ಟ್ ಮಾತ್ರವಲ್ಲದೆ ಶಿವಮೊಗ್ಗ - ಶಿಕಾರಿಪುರ - ರಾಣೆಬೆನ್ನೂರು (96 ಕಿ.ಮೀ. ) ಹೊಸ ರೈಲು ಮಾರ್ಗ, ಶಿವಮೊಗ್ಗ ರೈಲ್ವೆ ಕೋಚಿಂಗ್ ಡಿಪೋ ಹಾಗೂ ಜಲ ಜೀವನ್‌ ಮಿಷನ್‌ ಅಡಿ ಬಹು  - ಹಳ್ಳಿ ಯೋಜನೆಗಳು, ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಈ ವೇಳೆ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ರು.

click me!