
ಬೆಂಗಳೂರು (ಆ.06): ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಬೆಳಗಾವಿ ಮಾರ್ಗದ ನೂತನ ‘ವಂದೇ ಭಾರತ್’ ರೈಲಿಗೆ ಈ ತಿಂಗಳ 10ರಂದು ಹಸಿರು ನಿಶಾನೆ ತೋರಲಿದ್ದಾರೆ. ಇದರೊಂದಿಗೆ ಬೆಳಗಾವಿಗರ ಬಹುದಿನದ ಬೇಡಿಕೆ ಈಡೇರಲಿದೆ. ಬೆಳಗಾವಿಯಿಂದ ಬೆಳಗ್ಗೆ 5.20ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 1.50ಕ್ಕೆ ಈ ರೈಲು ಆಗಮಿಸಲಿದೆ. ಬೆಂಗಳೂರಿನಿಂದ ವಾಪಸ್ ಮಧ್ಯಾಹ್ನ 2.20ಕ್ಕೆ ಹೊರಟು ರಾತ್ರಿ 10.40ಕ್ಕೆ ಬೆಳಗಾವಿಗೆ ತಲುಪಲಿದೆ. ಇದರಿಂದ ಸುಮಾರು ಉಭಯ ನಗರಗಳ ಯಾನದ ಅವಧಿ ಈಗಿನ 9 ಗಂಟೆ 50 ನಿಮಿಷದಿಂದ 8 ಗಂಟೆ 30 ನಿಮಿಷಗಳಿಗೆ ತಗ್ಗಲಿದೆ
ಈ ರೈಲಿನ ಜತೆಗೆ ಒಟ್ಟು ಮೂರು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ಮೋದಿ ಅವರು ಅಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಚಾಲನೆ ನೀಡಲಿದ್ದಾರೆ. ನಾಗ್ಪುರದ ಅಜ್ನಿ-ಪೂನಾ ಹಾಗೂ ಅಮೃತಸರ-ಶ್ರೀ ಮಾತಾ ವೈಷ್ಣವೋದೇವಿ ಕಟ್ರಾ ಮಧ್ಯೆ ಅಂದು ಉದ್ಘಾಟನೆಯಾಗಲಿರುವ ಇನ್ನೆರಡು ನೂತನ ವಂದೇ ಭಾರತ್ ರೈಲುಗಳು.
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ, ಬೆಳಗಾವಿ ಸಂಸದರೂ ಆಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸಂಚಾರಕ್ಕಾಗಿ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ರೈಲು ಸಂಚಾರದಿಂದ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಧಾರವಾಡ ಹಾಗೂ ಬೆಳಗಾವಿ ಮಧ್ಯೆ ಸಂಪರ್ಕ ಹೆಚ್ಚಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲ್ವೆ ಸೌಲಭ್ಯ ಕಲ್ಪಿಸುವಲ್ಲಿ ಶ್ರಮಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಪ್ರಹ್ಲಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ಧನ್ಯವಾದ ಅರ್ಪಿಸಿದ್ದಾರೆ.
ರೈಲು ಸಂಚಾರ ಹೇಗೆ?
- ಬೆಳಗಾವಿಯಿಂದ ಬೆಳಗ್ಗೆ 5.20ಕ್ಕೆ ಹೊರಡಲಿರುವ ವಂದೇ ಭಾರತ್
- ಬೆಂಗಳೂರಿಗೆ ಮಧ್ಯಾಹ್ನ 1.50 ಗಂಟೆಗೆ ತಲುಪಲಿರುವ ರೈಲು
- ಬೆಂಗಳೂರಿನಿಂದ ವಾಪಸ್ ಮಧ್ಯಾಹ್ನ 2.20ಕ್ಕೆ ಹೊರಡುವ ರೈಲು
- ರಾತ್ರಿ 10.40ಕ್ಕೆ ಬೆಳಗಾವಿಗೆ ಆಗಮನ. 8.50 ಗಂಟೆಯ ಯಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ