ನ್ಯಾಯಾಂಗ ನಿಂದನೆ ಮಾಡಿದ್ದೀರಿ: ಸಾರಿಗೆ ನೌಕರರಿಗೆ ಹೈಕೋರ್ಟ್‌ ತೀವ್ರ ತರಾಟೆ

Govindaraj S   | Kannada Prabha
Published : Aug 06, 2025, 04:39 AM ISTUpdated : Aug 07, 2025, 05:30 AM IST
Karnataka High Court

ಸಾರಾಂಶ

ಮಂಗಳವಾರ ಬಸ್‌ ಸೇವೆ ನಿಲ್ಲಿಸಿ ಮುಷ್ಕರ ನಡೆಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಹೈಕೋರ್ಟ್‌ ಛೀಮಾರಿ ಹಾಕಿದೆ.

ಬೆಂಗಳೂರು (ಆ.06): ನ್ಯಾಯಾಲಯದ ಆದೇಶ ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿಯಲ್ಲಿದ್ದ ಹೊರತಾಗಿಯೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಬಸ್‌ ಸೇವೆ ನಿಲ್ಲಿಸಿ ಮುಷ್ಕರ ನಡೆಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಹೈಕೋರ್ಟ್‌ ಛೀಮಾರಿ ಹಾಕಿದೆ. ಮುಷ್ಕರ ತಡೆಹಿಡಿಯಲು ಹೈಕೋರ್ಟ್‌ ಆದೇಶಿಸಿದೆ. ಸರ್ಕಾರ ಜು.17ರಂದು ಎಸ್ಮಾ ಜಾರಿ ಮಾಡಿದೆ. ಹೀಗಿದ್ದರೂ ಮುಷ್ಕರ ನಡೆಸಿರುವುದು ಅಕ್ರಮ. ಇದು ನ್ಯಾಯಾಂಗ ನಿಂದನೆ. ಹೈಕೋರ್ಟ್‌ ಹಾಗೂ ರಾಜ್ಯ ಸರ್ಕಾರದ ಆದೇಶವನ್ನು ಇಲ್ಲಿ ಪಾಲಿಸಿಲ್ಲ.

ನಿಮ್ಮ ಸಮಸ್ಯೆ ಏನೇ ಇದ್ದರೂ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಅದನ್ನು ಬಿಟ್ಟು ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಚಾಟಿ ಬೀಸಿದೆ. ಕೂಡಲೇ ಮುಷ್ಕರ ನಿಲ್ಲಿಸುವ ಜೊತೆಗೆ ಮುಷ್ಕರ ನಿಲ್ಲಿಸಲಾಗಿದೆ ಎಂದು ಬುಧವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ ಮುಷ್ಕರ ಮುಂದುವರಿಸಿದರೆ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳನ್ನು ಬಂಧಿಸಲು ಆದೇಶಿಸಲಾಗುವುದು. ರಾಜ್ಯ ಸರ್ಕಾರ ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ ವಿರುದ್ಧ ಎಸ್ಮಾ ಕಾಯ್ದೆಯಡಿ ಸೂಕ್ತ ಕ್ರಮ ಸಹ ಜರುಗಿಸಬೇಕು ಎಂದು ಸೂಚಿಸಿರುವ ನ್ಯಾಯಪೀಠ, ಇದೇ ವೇಳೆ ಮುಷ್ಕರ ತಡೆಹಿಡಿದು ಸೋಮವಾರ (ಆ.4) ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಎರಡು ದಿನಗಳ ಕಾಲ ವಿಸ್ತರಿಸಿದೆ.

ಜನಸಾಮಾನ್ಯರಿಗೆ ತೊಂದರೆ ಉಂಟಾಗುವುದರಿಂದ ಮುಷ್ಕರ ನಡೆಸದಿರಲು ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಆದೇಶಿಸುವಂತೆ ಕೋರಿ ಬೆಂಗಳೂರಿನ ಜೆ.ಸುನಿಲ್‌ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತು. ಇದಕ್ಕೂ ಮುನ್ನ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾದ ಅಡ್ವೋಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ರಸ್ತೆ ಸಾರಿಗೆ ನಿಗಮದ ಬಸ್‌ಗಳ ಸೇವೆ ಸ್ಥಗಿತಗೊಳಿಸಿ ಕಾರ್ಮಿಕ ಸಂಘಟನೆಗಳು ಮಷ್ಕರ ನಡೆಸಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜೊತೆಗೆ ನಡೆಸಿದ ರಾಜಿ ಸಂಧಾನದ ಸಭೆ ಫಲಿತಾಂಶವೇನಾಯಿತು? ಎಂದು ಕೇಳಿತು.

ಅದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್‌ ಜನರಲ್‌, ಕೈಗಾರಿಕಾ ವಿವಾದಗಳ ಕಾಯ್ದೆಯಂತೆ ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆಗೆ ಸಂಧಾನ ಸಭೆ ನಡಸಲಾಗಿದೆ ಎಂದು ಮಾತುಕತೆಯ ವಿವರಗಳನ್ನು ನ್ಯಾಯಪೀಠಕ್ಕೆ ತಿಳಿಸಿದರು. ಅರ್ಜಿದಾರರ ಪರ ವಕೀಲೆ ದೀಕ್ಷಾ ಎನ್‌.ಅಮೃತೇಶ್‌, ಮಂಗಳವಾರ (ಆ.5) ನಡೆಸಬೇಕಿದ್ದ ಉದ್ದೇಶಿತ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಬೇಕು ಎಂದು ಹೈಕೋರ್ಟ್‌ ಮಂಗಳವಾರ ಮುಷ್ಕರ ನಿರತ ಸಂಘಟನೆಗೆ ನಿರ್ದೇಶನ ನೀಡಿದ್ದರೂ ಈ ಆದೇಶ ಬದಿಗೊತ್ತಿ ಮುಷ್ಕರ ಮುಂದುವರೆಸಲಾಗಿದೆ ಎಂದರು. ಇದಕ್ಕೆ ನ್ಯಾಯಪೀಠ ಮುಷ್ಕರ ನಿಲ್ಲಿಸಲಾಗಿದೆಯೇ? ಎಂದು ಕೇಳಿದಾಗ ಕೆಎಸ್‌ಆರ್‌ಸಿ ಸಿಬ್ಬಂದಿ ಮತ್ತು ನೌಕರರ ಫೆಡರೇಷನ್‌ ಪರ ವಕೀಲರು, ಮುಷ್ಕರ ಅಮಾನತು ಮಾಡಿಲ್ಲ ಎಂದು ತಿಳಿಸಿದರು.

ಇದರಿಂದ ಕೆರಳಿದ ನ್ಯಾಯಪೀಠ, ಅಕ್ರಮವಾಗಿ ಮುಷ್ಕರ ನಡೆಸುತ್ತಿರುವವರನ್ನು ಪೊಲೀಸರು ಬಂಧಿಸಬಹುದು. ನ್ಯಾಯಾಲಯ ಸಹ ನ್ಯಾಯಾಂಗ ನಿಂದನೆ ಅಪರಾಧದಡಿ ನಿಮ್ಮ ವಿರುದ್ಧ ಕ್ರಮ ಜರುಗಿಸಬಹುದು. ಮುಷ್ಕರ ನಿಲ್ಲಿಸಲಾಗಿದೆಯೇ ಎಂಬ ಬಗ್ಗೆ ಬುಧವಾರ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಇಲ್ಲವಾದರೆ ನಾಳೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು. ಸಾರಿಗೆ ನಿಗಮದ ನೌಕರರ ಸಂಟನೆಗಳ ಕ್ರಿಯಾ ಸಮಿತಿ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು. ಇದರಿಂದ ತಬ್ಬಿಬ್ಬಾದ ಕಾರ್ಮಿಕ ಸಂಘಟನೆಗಳ ಪರ ವಕೀಲರು, ನಾಳೆ ಮುಷ್ಕರ ನಡೆಸುವುದಿಲ್ಲ ಎಂದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಕೆಎಸ್‌ಆರ್‌ಸಿಟಿಯ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿತು. ಸಾರಿಗೆ ನೌಕರರು ಮುಷ್ಕರ ಮುಂದುವರಿಸಿದರೆ ಅವರ ವಿರುದ್ಧ ಎಸ್ಮಾ ಅಡಿ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!