
ಚಿಕ್ಕಬಳ್ಳಾಪುರ (ಮಾ.25): ಕರ್ನಾಟಕ ಮಠ, ಆಶ್ರಮ ಹಾಗೂ ಸಂತರ ದೊಡ್ಡ ಪರಂಪರೆ ಇರುವಂಥ ರಾಜ್ಯ. ಯೋಗ, ಕರ್ಮ ಮತ್ತು ಕೌಶಲ ಈ ರಾಜ್ಯದ್ದು ಮಾತ್ರವಲ್ಲ ಸತ್ಯಸಾಯಿ ಆಶ್ರಮದ ಧ್ಯೇಯವೂ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಸಂಶೋಧನೆಗಳು ನಡೆಯುತ್ತಿದೆ. 2014ಕ್ಕೂ ಮೊದಲು 380 ವೈದ್ಯಕೀಯ ಕಾಲೇಜುಗಳಿದ್ದವು. ಈಗ 600ಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಚಿಕ್ಕಬಳ್ಳಾಪುರದಲ್ಲಿ ಶ್ರೀ ಮಧುಸೂಧನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಅನಾವರಣ ಮಾಡಿ ಕನ್ನಡದಲ್ಲಿಯೇ ಮಾತು ಆರಂಭಿಸಿದ ಮೋದಿ, ಚಿಕ್ಕಬಳ್ಳಾಪುರ ಸರ್‌ಎಂವಿ ಅವರ ಜನ್ಮಸ್ಥಳ. ಈಗ ತಾನೆ ನಾನು ಅವರ ಸಮಾಧಿ ಸ್ಥಳ ಹಾಗೂ ಮ್ಯೂಸಿಯಂಗೆ ಭೇಟಿ ನೀಡಿದ್ದೇನೆ. ಈ ಪುಣ್ಯಭೂಮಿಗೆ ತಲೆಬಾಗಿ ನಮಿಸುತ್ತೇನೆ. ರೈತರು ಹಾಗೂ ಸಾಮಾನ್ಯ ಜನರಿಗೆ ಅವರ ಇಂಜಿನಿಯರಿಂಗ್ ದೃಷ್ಟಿಕೋನವನ್ನು ನೀಡಿದರು. ಚಿಕ್ಕಬಳ್ಳಾಪುರ ಸೇವೆಯ ಅದ್ಭುತ ರೀತಿಯನ್ನು ದೇಶಕ್ಕೆ ತೋರಿದೆ. ಅದನ್ನು ಸತ್ಯಸಾಯಿ ಕೂಡ ಮುಂದುವರಿಸುತ್ತಿದೆ. ಈ ವೈದ್ಯಕೀಯ ಆಸ್ಪತ್ರೆ, ದೇಶಕ್ಕೆ ಇನ್ನಷ್ಟು ವೈದ್ಯರನ್ನು ಸೇವೆಗಾಗಿ ಸಿದ್ಧ ಮಾಡಲಿದೆ. ಇಲ್ಲಿನ ಎಲ್ಲರಿಗೂ ನಾನು ಈ ಕುರಿತಾಗಿ ಧನ್ಯವಾದ ಹೇಳುತ್ತೇನೆ ಎಂದರು.
ಕನ್ನಡ ದೇಶದ ಸಮೃದ್ಧಿ ಹಾಗೂ ಗೌರವ ಹೆಚ್ಚಿಸವ ಭಾಷೆ. ಹಿಂದೆಲ್ಲಾ ವೈದ್ಯಕೀಯ ಪರೀಕ್ಷೆಯನ್ನು ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿಯೇ ಬರೆಯಬೇಕಾಗಿತ್ತು. ಆದರೆ, ನಮ್ಮ ಸರ್ಕಾರ ಕನ್ನಡದೊಂದಿಗೆ ಪ್ರತಿ ರಾಜ್ಯದ ಭಾಷೆಯನ್ನೂ ಬರೆಯುವ ಅವಕಾಶ ಕಲ್ಪಿಸಿದೆ ಎಂದು ಹೇಳಿದರು. ಇಷ್ಟು ಸಣ್ಣ ಸಮಯದಲ್ಲಿ ಇಷ್ಟು ದೊಡ್ಡ ಆಸ್ಪತ್ರೆ ಕಟ್ಟಲು ಹೇಗೆ ಸಾಧ್ಯ? ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕೇಳುವವರಿಗೆ ಒಂದೇ ಉತ್ತರ. ದೇಶದ ಜನರ ಪರಿಶ್ರಮ. ಎಲ್ಲರೂ ಪ್ರಯಾಸಪಟ್ಟರೆ, 2047ರ ವೇಳೆಗೆ ದೇಶ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇರಲು ಸಾಧ್ಯವಾಗಲಿದೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಮೋದಿ ಹವಾ: ಸರ್ ಎಂ. ವಿಶ್ವೇಶ್ವರಯ್ಯ ಸಮಾಧಿಗೆ ಶಿರಬಾಗಿ ನಮಿಸಿದ ನಮೋ
ನಾನು ಚಿಕ್ಕಬಳ್ಳಾಪುರಕ್ಕೆ ಮೂರನೇ ಬಾರಿ ಬರುತ್ತಿದ್ದೇನೆ. ಮೊದಲ ಬಾರಿಗೆ ಬಂದಾಗ ಮಧುಸೂಧನ್ ಸಾಯಿ ಅವರು ತೋರಿದ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಕಳೆದ ಬಾರಿ ಬಂದಾಗ, ಮುಂದಿನ ಬಾರಿ ಮೋದಿ ಅವರಿಂದಲೇ ಈ ಆಸ್ಪತ್ರೆ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದ್ದರು. ಅದನ್ನು ಮಾಡಿ ತೋರಿಸಿದ್ದಾರೆ. ಇಂದು ಆರೋಗ್ಯ ಸೇವೆ ಎಷ್ಟು ಕಷ್ಟವಿದೆ ಹಾಗೂ ಎಷ್ಟು ದುಬಾರಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆಯುಷ್ಮಾನ್ ಭಾರತ್ ಕಾರ್ಡ್ ಗರಿಷ್ಠ ಸಂಖ್ಯೆಯಲ್ಲಿ ವಿತರಣೆ ಮಾಡಿದ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಆತ್ಮನಿರ್ಭರ ಭಾರತಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ ಎಂದು ಹೇಳಿದರು.
ಮಾತಾಡಿ ಮೋದಿ, ಕಾಪಾಡಿ ಮೋದಿ: ಕೋಲಾರ- ಚಿಕ್ಕಬಳ್ಳಾಪುರದಲ್ಲಿ ವಿಶಿಷ್ಟ ಪೋಸ್ಟರ್ ಅಭಿಯಾನ..!
ಉಚಿತ ಸೇವೆ ನೀಡಲಿರುವ ಆಸ್ಪತ್ರೆ: 2022ರ ಏಪ್ರೀಲ್ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಆಸ್ಪತ್ರೆಯ ಕಾಮಗಾರಿಗೆ ಅಡಿಗಲ್ಲು ಹಾಕಿದ್ದರು. ಕೆಲವೇ ತಿಂಗಳಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ಈ ಉದ್ಘಾಟನೆಗೆ ಸಜ್ಜಾಗಿದೆ. ಸಾರ್ವಜನಿಕರಿಗೆ ಇಲ್ಲಿ ಉಚಿತವಾಗಿ ವೈದ್ಯಕೀಯ ಸೇವೆ ನೀಡಲಾಗುವುದು. ಸದ್ಯಕ್ಕೆ ಪ್ರತಿ ವರ್ಷ ಇಲ್ಲಿ 100 ವಿದ್ಯಾರ್ಥಿಗಳಿಗೆ ಎಂಬಿಬಿಎಸ್‌ಗೆ ಪ್ರವೇಶ ನೀಡಲಾಗುವುದು. ಇಲ್ಲಿ 22 ವಿಭಾಗಗಳಿವೆ. ವೈದ್ಯಕೀಯ ಮಹಾವಿದ್ಯಾಲಯಕ್ಕೆ ಹೊಂದಿಕೊಂಡ ಆಸ್ಪತ್ರೆಯಲ್ಲಿ 360 ಹಾಸಿಗೆಗಳ ಸಾಮರ್ಥ್ಯವಿದ್ದು 360 ಹಾಸಿಗೆಗಳನ್ನು ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಗೆ ಮೀಸಲಿಟ್ಟಿರೆ ತಲಾ 30 ಹಾಸಿಗೆಗಳನ್ನು ತುರ್ತು ಚಿಕಿತ್ಸೆ ಮತ್ತು ತೀವ್ರ ನಿಗಾ ಘಟಕದ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ