ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಲು ಮೀಸಲಾತಿ ಹಂಚಿಕೆ: ಸಿಎಂ ಬೊಮ್ಮಾಯಿ

By Kannadaprabha News  |  First Published Mar 25, 2023, 7:43 AM IST

ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂಬ ನಿರ್ಣಯದಿಂದಾಗಿ ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ. 
 


ಬೆಂಗಳೂರು (ಮಾ.25): ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂಬ ನಿರ್ಣಯದಿಂದಾಗಿ ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳ ಬೇಡಿಕೆ ಈಡೇರಿಸುವ ಪ್ರಯತ್ನವನ್ನು ಯಾವುದೇ ಸರ್ಕಾರಗಳು ಮಾಡಿರಲಿಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ಜೇನುಗೂಡಿಗೆ ಕೈ ಹಾಕಿದಂತಾಗುತ್ತದೆ ಎಂದು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ನಮಗೂ ಅದೇ ಸಲಹೆಗಳನ್ನು ನೀಡಲಾಗಿತ್ತು. ಆದರೂ, ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಮೀಸಲಾತಿ ವಿಚಾರದಲ್ಲಿ ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಲಿಂಗಾಯತ ಸಮುದಾಯಕ್ಕೆ ಪ್ರಸ್ತುತ ಇರುವ ಮೀಸಲಾತಿ ಪ್ರಮಾಣಕ್ಕಿಂತ ಶೇ.2ರಷ್ಟುಹೆಚ್ಚಳ ಮಾಡಲಾಗಿದೆ. ಅಂತೆಯೇ ಒಕ್ಕಲಿಗ ಸಮುದಾಯಕ್ಕೂ ಶೇ.2ರಷ್ಟುಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಪ್ರವರ್ಗ 2ಬಿ ಅಡಿ ಮುಸ್ಲಿಂ ಸಮುದಾಯಕ್ಕೆ ಇದ್ದ ಶೇ.4ರಷ್ಟುಮೀಸಲಾತಿಯನ್ನು ತೆಗೆದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ತಲಾ ಶೇ.2ರಷ್ಟುಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಲಿಂಗಾಯತ ಸಮುದಾಯವು ಸದ್ಯಕ್ಕೆ ಪ್ರವರ್ಗ 3ಬಿಯಡಿಯಲ್ಲಿ ಬರಲಿದ್ದು, ಶೇ.5ರಷ್ಟುಮೀಸಲಾತಿ ನೀಡಲಾಗುತ್ತಿದೆ. ಇದನ್ನು ಪ್ರವರ್ಗ 2ಡಿ ಎಂದು ಬದಲಿಸಲಾಗಿದೆ. 

Tap to resize

Latest Videos

ಕೋಲಾರ, ವರುಣಾ ಎರಡೂ ಕಡೆ ಸ್ಪರ್ಧೆಗೆ ಸಿದ್ದರಾಮಯ್ಯ ಸಿದ್ಧತೆ: ಹೈಕಮಾಂಡ್‌ನಿಂದಲೂ ಒಪ್ಪಿಗೆ ಸಾಧ್ಯತೆ

ಇದರಡಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಶೇ.7ಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ಇನ್ನು, ಒಕ್ಕಲಿಗ ಸಮುದಾಯವು ಸಹ ಮೀಸಲಾತಿ ಕಲ್ಪಿಸುವ ಸಂಬಂಧ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಪ್ರವರ್ಗವನ್ನು ಬದಲಿಸಿ ಮೀಸಲಾತಿಯನ್ನು ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಒಕ್ಕಲಿಗ ಸಮುದಾಯವು ಪ್ರವರ್ಗ 3ಎ ಅಡಿಯಲ್ಲಿ ಬರಲಿದ್ದು, ಶೇ.4ರಷ್ಟುಮೀಸಲಾತಿ ಪ್ರಮಾಣ ಇದೆ. ಈಗ ಸರ್ಕಾರವು ಸಮುದಾಯವನ್ನು ಪ್ರವರ್ಗ 2ಸಿ ಎಂದು ಮಾಡಿ, ಶೇ.6ರಷ್ಟುಮೀಸಲಾತಿ ಕಲ್ಪಿಸಲಾಗಿದೆ. ಮುಸ್ಲಿಂ ಸಮುದಾಯವನ್ನು ಅರ್ಥಿಕ ಹಿಂದುಳಿದ ವರ್ಗಗಳಡಿ ತಂದು ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ ಎಂದರು.

ಪಂಚಮಸಾಲಿಗೆ ಐತಿಹಾಸಿಕ ದಿನ: ಪಂಚಮಸಾಲಿ ಸಮುದಾಯಕ್ಕೆ ಐತಿಹಾಸಿಕ ದಿನವಾಗಿದೆ. ಧಾರ್ಮಿಕ ಮೀಸಲಾತಿ ರದ್ದುಪಡಿಸುವಂತೆ ನಾನು ನೀಡಿದ್ದ ಸಲಹೆಗೆ ಬೆಲೆ ಸಿಕ್ಕಿದೆ ಎಂದು ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಐತಿಹಾಸಿಕ ದಿನವಾಗಿದೆ. ಮೀಸಲಾತಿಗೆ ಬಹಳ ಹೋರಾಟ ನಡೆದಿತ್ತು. ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ಶುರುವಾಯಿತು. ಆದರೆ ಆ ವೇಳೆ ಮೀಸಲಾತಿ ಕೊಡಲು ಹಲವು ಸಮಸ್ಯೆಗಳಿದ್ದವು. ಅದಕ್ಕೆ ಧಾರ್ಮಿಕ ಮೀಸಲಾತಿ ರದ್ದು ಮಾಡಲು ಸಲಹೆ ಕೊಟ್ಟಿದ್ದೆ. 

ಸಿಎಂ ಬೊಮ್ಮಾಯಿ ಮೀಸಲಾತಿ ಕ್ರಾಂತಿ: 4% ಮುಸ್ಲಿಂ ಮೀಸಲು ರದ್ದುಗೊಳಿಸಿ ಹಂಚಿಕೆ

ಅದರಂತೆ ಈ ತಿರ್ಮಾನವಾಗಿದೆ. ಈ ನಿರ್ಣಯ ನಮ್ಮ ಸಮಾಜಕ್ಕೆ ಸಂತೋಷದ ನಿರ್ಣಯವಾಗಿದೆ. ಸಂಪುಟ ಸಭೆಯ ನಿರ್ಣಯಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಈ ಜಯಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪ್ರವರ್ಗ 1 ಮತ್ತು 2ಎ ನಲ್ಲಿ ಕೆಲ ಮುಸ್ಲಿಂ ಸಮುದಾಯದ ಜಾತಿಗಳಿವೆ. ಅದನ್ನು ಸಹ ಮುಂದಿನ ದಿನಗಳಲ್ಲಿ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು. ಧಾರ್ಮಿಕ ಮೀಸಲಾತಿ ವಿರುದ್ಧ ಆಂಧ್ರಪ್ರದೇಶದಲ್ಲಿ ಪ್ರಶ್ನೆ ಮಾಡಲಾಗಿತ್ತು. ಆದರೆ ನ್ಯಾಯಾಲಯವು ಸರ್ಕಾರದ ಧಾರ್ಮಿಕ ಮೀಸಲಾತಿ ವಿರುದ್ಧ ತೀರ್ಪು ನೀಡಿತ್ತು. ಹೀಗಾಗಿ ನಮ್ಮ ರಾಜ್ಯದಲ್ಲಿ ಮೀಸಲಾತಿ ಬದಲಾವಣೆ ಮಾಡಿದ್ದನ್ನು ನ್ಯಾಯಾಲಯದ ಮಾನ್ಯ ಮಾಡಲಿದೆ. ಈ ಮೀಸಲಾತಿ ಬದಲಾವಣೆ ಚುನಾವಣೆ ಸಲುವಾಗಿ ಮಾಡಿದ್ದಲ್ಲ ಎಂದು ಬೆಲ್ಲದ್‌ ಹೇಳಿದರು.

click me!