ಕೃಷಿ ಭೂಮಿ ಹೊಂದಿರುವ ರೈತರು ಯೋಜನೆಯ ಫಲಾನುಭವಿಗಳಾಗಿದ್ದು, ಆದಾಯ ತೆರಿಗೆ ಪಾವತಿದಾರರು ಯೋಜನೆಯಡಿ ಹಣ ಪಡೆಯಲು ಅನರ್ಹರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೂ ಇದನ್ನು ಮುಚ್ಚಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿಯಮ ಬಾಹಿರವಾಗಿ ಕೋಟ್ಯಂತರ ರುಪಾಯಿ ನೆರವು ಪಡೆಯಲಾಗಿದೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ಡಿ.18): ಆದಾಯ ತೆರಿಗೆ (ಐಟಿ) ಪಾವತಿಸುವ ರಾಜ್ಯದ 95,830 ಮಂದಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (ಪಿಎಂ ಕೆಎಸ್‌ವೈ) ಅಡಿ ನಿಯಮಬಾಹಿರವಾಗಿ ಆರ್ಥಿಕ ನೆರವು ಪಡೆದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದ ಕೃಷಿ ಇಲಾಖೆಯು ಇದೀಗ ಅವರಿಂದ ಹಣ ವಸೂಲಾತಿಗೆ ಸಜ್ಜಾಗಿದೆ.
ಕೃಷಿ ಭೂಮಿ ಹೊಂದಿರುವ ರೈತರು ಯೋಜನೆಯ ಫಲಾನುಭವಿಗಳಾಗಿದ್ದು, ಆದಾಯ ತೆರಿಗೆ ಪಾವತಿದಾರರು ಯೋಜನೆಯಡಿ ಹಣ ಪಡೆಯಲು ಅನರ್ಹರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೂ ಇದನ್ನು ಮುಚ್ಚಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿಯಮ ಬಾಹಿರವಾಗಿ ಕೋಟ್ಯಂತರ ರುಪಾಯಿ ನೆರವು ಪಡೆಯಲಾಗಿದೆ. ಇದನ್ನು ವಸೂಲಿ ಮಾಡಲು ಮುಂದಾಗಿರುವ ಇಲಾಖೆ, ಮತ್ತೊಂದೆಡೆ ಇಂತಹ ಅನರ್ಹರಿಗೆ ಭವಿಷ್ಯದಲ್ಲಿ ಹಣ ಪಡೆಯಲು ಸಾಧ್ಯವಾಗದಂತೆ ತಡೆ ಹಾಕಿದೆ.
ರಾಜ್ಯದ 50 ಲಕ್ಷ ರೈತರಿಗೆ PM-Kisan ಹಣ ಬಿಡುಗಡೆ
ಪಾವತಿಯಾಗಿರುವ ಹಣ ವಸೂಲಿ ಮಾಡಲು ಕೃಷಿ ಇಲಾಖೆಯು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಗೆ (ಎಸ್‌ಎಲ್‌ಬಿಸಿ) ಐಟಿ ಪಾವತಿದಾರರ ವಿವರ ನೀಡಿದ್ದು, ಇದನ್ನು ಸಂಬಂಧಪಟ್ಟಬ್ಯಾಂಕ್‌ಗಳಿಗೆ ರವಾನಿಸಿ ಕ್ರಮ ಕೈಗೊಳ್ಳಲು ಕೋರಿದೆ. ಈಗಾಗಲೇ ಎಷ್ಟುಹಣ ಪಡೆದಿದ್ದಾರೋ ಅಷ್ಟುಮೊತ್ತವನ್ನು ಫಲಾನುಭವಿಗಳಾಗಿದ್ದವರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಿ ವಾಪಸ್ ಸರ್ಕಾರಕ್ಕೆ ಜಮಾ ಮಾಡುವಂತೆ ಪತ್ರ ಬರೆಯಲಾಗಿದೆ.
ಅಧಿಕಾರಿಗಳಿಗೆ ಸೂಚನೆ:
ಮತ್ತೊಂದೆಡೆ, ಇಲಾಖೆ ಜಂಟಿ ಕೃಷಿ ನಿರ್ದೇಶಕರು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೂ ಹಣ ವಸೂಲಿ ಬಗ್ಗೆ ಸೂಚನೆ ನೀಡಿದ್ದು ಅವರೂ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ, ಆದಾಯ ತೆರಿಗೆ ಪಾವತಿಸುವ 7748 ಮಂದಿ ಹಣ ಪಡೆದಿದ್ದಾರೆ. ಕಲಬುರಗಿಯಲ್ಲಿ 5109, ವಿಜಯಪುರದಲ್ಲಿ 5033 ಮತ್ತು ಬೀದರ್ ಜಿಲ್ಲೆಯಲ್ಲಿ 4951 ಅನರ್ಹರನ್ನು ಪತ್ತೆ ಮಾಡಲಾಗಿದೆ. ಚಾಮರಾಜನಗರದಲ್ಲಿ ಅತಿ ಕಡಿಮೆ ಎಂದರೆ 1269 ಅನರ್ಹರು ಪತ್ತೆಯಾಗಿದ್ದಾರೆ.
PM - KISAN ಯೋಜನೆ: ರೈತರ ಬ್ಯಾಂಕ್ ಖಾತೆಗೆ 16 ಸಾವಿರ ಕೋಟಿ ರೂ. ವರ್ಗಾಯಿಸಿದ ಪ್ರಧಾನಿ Modi
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಕೇಂದ್ರ ಸರ್ಕಾರ 2019 ರಲ್ಲಿ ಪ್ರಾರಂಭಿಸಿದ್ದು ಕೃಷಿ ಭೂಮಿ ಹೊಂದಿರುವ ರೈತರಿಗೆ ಪ್ರತಿ ವರ್ಷ 4 ತಿಂಗಳಿಗೊಮ್ಮೆಯಂತೆ ವಾರ್ಷಿಕ 6 ಸಾವಿರ ರು. ಸಹಾಯಧನ ನೀಡುತ್ತಿದೆ. ಬಳಿಕ ರಾಜ್ಯ ಸರ್ಕಾರವೂ ಇದಕ್ಕೆ ಪೂರಕವಾಗಿ ಯೋಜನೆ ಜಾರಿಗೊಳಿಸಿದ್ದು ವಾರ್ಷಿಕ 4 ಸಾವಿರ ರು. ಪಾವತಿಸಲಿದೆ. ರಾಜ್ಯದಲ್ಲಿ ಸುಮಾರು 54 ಲಕ್ಷ ಫಲಾನುಭವಿಗಳಿದ್ದು ಇಲ್ಲಿಯವರೆಗೂ 15 ಸಾವಿರ ಕೋಟಿ ರು. ನೆರವು ನೀಡಲಾಗಿದೆ. ರೈತರಿಗೆ ಉಪಯುಕ್ತವಾದ ಯೋಜನೆ ಇದಾಗಿದ್ದು ಸ್ವಯಂ ನೋಂದಣಿಗೆ ಅವಕಾಶ ನೀಡಲಾಗಿದೆ. ಆದರೆ ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರೂ ಹೆಚ್ಚಿದ್ದು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಕೃಷಿ ಇಲಾಖೆ ಮುಂದಾಗಿದೆ.
ಜಿಲ್ಲೆ ಐಟಿ ಪಾವತಿದಾರ ಅನರ್ಹರು
ಬೆಳಗಾವಿ 7748
ಕಲಬುರಗಿ 5109
ವಿಜಯಪುರ 5033
ಬೀದರ್ 4951
ತುಮಕೂರು 4648
ಮಂಡ್ಯ 4537
ಹಾಸನ 4260
ಉಡುಪಿ 3882
ಬಾಗಲಕೋಟೆ 3694
ರಾಮನಗರ 3452
ಅನರ್ಹರ ವಿರುದ್ಧ ಕ್ರಮ
ಆದಾಯ ತೆರಿಗೆ ಪಾವತಿಸುವವರೂ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ಪಡೆಯುತ್ತಿರುವುದನ್ನು ಕೃಷಿ ಇಲಾಖೆ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿದೆ. ಬ್ಯಾಂಕ್‌ಗಳಿಗೆ ಸೂಚನೆ ನೀಡಿ ಅನರ್ಹರಿಂದ ಹಣ ವಾಪಸ್ ಪಡೆಯಲಾಗುವುದು. ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೂ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಅಂತ ಕೃಷಿ ಇಲಾಖೆ ನಿರ್ದೇಶಕಿ ಸಿ.ಎನ್. ನಂದಿನಿ ಕುಮಾರಿ ತಿಳಿಸಿದ್ದಾರೆ.