
ಮಂಗಳೂರು (ಜೂ.9): ಹಿಂದೆ ನಾನು ಆರೋಗ್ಯ ಸಚಿವನಾಗಿದ್ದ ವೇಳೆ ಆರೋಗ್ಯ ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಹಾಗೂ ಎಪಿಎಲ್‌ನವರಿಗೆ ಶೇ.70ರಷ್ಟು ಉಚಿತ, ಶೇ.30ರಷ್ಟು ವೆಚ್ಚವನ್ನು ರೋಗಿ ಭರಿಸುವ ವ್ಯವಸ್ಥೆ ಇತ್ತು. ಬಳಿಕ ಅದೀಗ ಶೇ. 70ರಷ್ಟು ರೋಗಿ ಭರಿಸುತ್ತಿದ್ದು, ಶೇ.30 ಸರ್ಕಾರ ಎಂಬಂತಾಗಿದೆ. ಈ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಪಿಎಲ್ ಹಾಗೂ ಬಿಪಿಎಲ್‌ನವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ಒದಗಿಸುವ ಬಗ್ಗೆ ರೂಪುರೇಷೆ ಮಾಡಲಾಗುವುದು ಎಂದು ತಿಳಿಸಿದರು. ಖಾಸಗಿ ಆಸ್ಪತ್ರೆಯವರು ಆಯುಷ್ಮಾನ್ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಯಿಂದ ಹಣ ಪಡೆಯುವಂತಿಲ್ಲ. ಒಂದು ವೇಳೆ ಹೆಚ್ಚುವರಿ ಶುಲ್ಕ ಪಡೆದರೆ ಆರೋಗ್ಯ ಮಿತ್ರರು ಈ ಬಗ್ಗೆ ಗಮನ ಹರಿಸಿ ಮೇಲಿನ ಅಧಿಕಾರಿಗಳ ಮೂಲಕ ಉಚಿತ ಚಿಕಿತ್ಸೆಗೆ ಕ್ರಮ ವಹಿಸಬೇಕು. ಒಂದು ವೇಳೆ ಹೆಚ್ಚುವರಿ ಶುಲ್ಕ ತಡೆಗೆ ವಿಫಲರಾಗುವ ಆರೋಗ್ಯ ಮಿತ್ರರ ವಿರುದ್ಧವೇ ಇಲಾಖೆಯಿಂದ ಕ್ರಮ ವಹಿಸಲಾಗುವುದು ಎಂದರು.
ಜನಸಾಮಾನ್ಯರಿಗೂ ಅತ್ಯುತ್ತಮ ಆರೋಗ್ಯ ಸೇವೆಗೆ ಖಾತರಿ ಪಡಿಸುವುದಕ್ಕಾಗಿ ಆರೋಗ್ಯ ಮಿತ್ರರ ನೇಮಕ ಮಾಡಿರುವುದು. ಅಗತ್ಯವಾದ ಕೆಲವು ಯೋಜನೆಗಳನ್ನು ಜಾರಿಗೊಳಿಸುವುದು ಹಾಗೂ ಅನಗತ್ಯ ಕಾರ್ಯಕ್ರಮಗಳನ್ನು ಕೈಬಿಡುವ ಬಗ್ಗೆಯೂ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಗುತ್ತಿಗೆ ಆಧಾರದಲ್ಲಿ ನೇಮಕಗೊಂದ ವೈದ್ಯರು 3 ವರ್ಷ ಸೇವೆ ಸಲ್ಲಿಸಿದರೆ ಅವರನ್ನು ಕಾಯಂಗೊಳಿಸುವ ಪದ್ಧತಿ ಹಿಂದೆ ಮಾಡಲಾಗಿತ್ತು. ಇದರಿಂದ ಉದ್ಯೋಗ ಭದ್ರತೆಯ ಕಾರಣದಿಂದ ಹೆಚ್ಚಿನ ವೈದ್ಯರ ನೇಮಕವಾಗುತ್ತಿತ್ತು. ಆದರೆ ಅದೀಗ ಬದಲಾಗಿದೆ. ಅದನ್ನು ಮರು ಪರಿಶೀಲಿಸಲಾಗುವುದು. ಗುಡ್ಡಗಾಡು, ಬುಡಕಟ್ಟು ಪ್ರದೇಶ, ಕುಗ್ರಾಮಗಳಲ್ಲಿ ವೈದ್ಯರು ಹೋಗುವುಗು ಕಡಿಮೆ. ಅದಕ್ಕಾಗಿ ಅಲ್ಲಿ ಕೆಲಸ ನಿರ್ವಹಿಸುವವರಿಗೆ ಹೆಚ್ಚುವರಿ ವೇತನ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ