ಪಿಕ್ ಪಾಕೆಟ್ ಮಾಡುವವರಿಗಿಂತ ನಾಜೂಕಾಗಿ ಜನಸಾಮಾನ್ಯರ ಜೇಬು ಕತ್ತರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದು, ಈ ಮೂಲಕ ಬೆಲೆ ಏರಿಕೆ ಗ್ಯಾರಂಟಿ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು (ಜೂ.28) : ಪಿಕ್ ಪಾಕೆಟ್ ಮಾಡುವವರಿಗಿಂತ ನಾಜೂಕಾಗಿ ಜನಸಾಮಾನ್ಯರ ಜೇಬು ಕತ್ತರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದು, ಈ ಮೂಲಕ ಬೆಲೆ ಏರಿಕೆ ಗ್ಯಾರಂಟಿ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
‘ಮೇರಾ ಬೂತ್-ಸಬ್ ಸೇ ಮಜ್ ಬೂತ್’ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸದ್ದಿಲ್ಲದೆ ವಿದ್ಯುತ್ ದರ, ಅಬಕಾರಿ ಸುಂಕ ಏರಿಸಿದೆ. ಇದರ ಬೆನ್ನಿಗೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈ ಮೂಲಕ ಬೆಲೆ ಏರಿಕೆ ಗ್ಯಾರಂಟಿ ನೀಡಿದೆ ಎಂದರು. ಕಾಂಗ್ರೆಸ್ ಆಡಳಿತದಲ್ಲಿ ಇದ್ದಲ್ಲೆಲ್ಲ ಹಗರಣಗಳದ್ದೇ ಸದ್ದು. ಅವರೆಲ್ಲರೂ ಖಾಯಂ ಜೈಲಿನಲ್ಲಿ ಇರಬೇಕಾದ ಭಯದಿಂದ ಒಟ್ಟಾಗಲು ಯತ್ನಿಸುತ್ತಿದ್ದಾರೆ. ಭಾರತದ ಅಭಿವೃದ್ಧಿ, ಉದ್ಧರಿಸುವ ಅಜೆಂಡಾ ಅವರದ್ದಲ್ಲ. ಕುಟುಂಬ ಉಳಿಸಿಕೊಳ್ಳುವುದು, ಜೈಲಿಗೆ ಹೋಗುವುದನ್ನು ತಪ್ಪಿಸುವ ಉದ್ದೇಶ ಈ ವಿಪಕ್ಷಗಳದು ಎಂದು ಟೀಕಿಸಿದರು.
ಕಾಂಗ್ರೆಸ್‌ನ ಮಾಯಾಯುದ್ಧದ ಗೆಲುವು ತಾತ್ಕಾಲಿಕ: ಸಿ.ಟಿ.ರವಿ
ತೆರಿಗೆ ಹೆಚ್ಚಳದಿಂದ ಆಹಾರವಸ್ತುಗಳ ದರ ಏರಿಕೆ:
ಕೇಂದ್ರದ ಬಿಜೆಪಿ ಸರ್ಕಾರ ಜನರ ಬದುಕನ್ನು ಬದಲಾಯಿಸಲು ಸಹಾಯ ಮಾಡುತ್ತಿದೆ ಎಂಬುದನ್ನು ತಿಳಿಸಬೇಕು. ಅಬಕಾರಿ ಸುಂಕ ಹೆಚ್ಚಳ, ವಿದ್ಯುತ್ ದರ ಏರಿಕೆಯ ಪರಿಣಾಮವಾಗಿ ಆಹಾರವಸ್ತುಗಳ ದರ ಏರಿಕೆ ಆಗುತ್ತದೆ. ನಾವು ತುಲನೆ ಮಾಡಿ ನೋಡಬೇಕು. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಯಾಕೆ ಜಾಸ್ತಿ ಮಾಡಿದ್ದಾರೆ? ಎಂಬುದನ್ನು ತುಲನೆ ಮಾಡಿ ನೋಡಬೇಕು ಎಂದರು.
ವಿದ್ಯುತ್ ದರ ಏರಿಕೆ ಕುರಿತು ಕೈಗಾರಿಕೋದ್ಯಮಿಗಳು ಬೇಸರ-ಆತಂಕ ತೋಡಿಕೊಂಡಿದ್ದಾರೆ. ಕೈಗಾರಿಕೆ ಮುಚ್ಚಬೇಕಾದ ಸ್ಥಿತಿ ಬರಬಹುದೆಂದು ತಿಳಿಸಿದ್ದಾರೆ. ಇದರ ಹಿಂದೆ ದೊಡ್ಡ ಅಪಾಯ ಇದೆ. ಇದನ್ನು ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗಬೇಕು. ಕೈಗಾರಿಕೆಗಳು ಮುಚ್ಚಿದರೆ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ. ತೆರಿಗೆ ಸಂಗ್ರಹ ಕುಸಿಯುತ್ತದೆ. ಹೀಗಾದಾಗ ಉಚಿತ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಸಿ.ಟಿ.ರವಿ, ಸಾಲ ಮಾಡಿ ಎಷ್ಟುದಿನ ತುಪ್ಪ ತಿನ್ನಬಹುದು ಅಥವಾ ತಿನ್ನಿಸಬಹುದು ಎಂದು ಕೇಳಿದ ಅವರು, ಕೆಲವು ದಿನ ಕಳೆದ ಬಳಿಕ ತುಪ್ಪವೂ ಇಲ್ಲ, ಕೈಗೆ ಚಿಪ್ಪು ಅಷ್ಟೇ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯರ ಅವಧಿಯಲ್ಲಿ ರೀಡೂ ಆಗಿತ್ತು. ರೀಡೂ ಮೂಲಕ ವಂಚನೆ ಮಾಡುವುದು ಹೇಗೆ ಎಂಬುದನ್ನು ಪರಿಚಯಿಸಿದ್ದೇ ಕಾಂಗ್ರೆಸ್ ಆಡಳಿತ. ಕಾಂಗ್ರೆಸ್ಸಿಗರು ಪ್ರಾಮಾಣಿಕರಿದ್ದರೆ ಮೊದಲು ಆ ಕುರಿತು ಕ್ರಮ ಕೈಗೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಾವಿಗೆ ಹೆದರದ ಕಾರ್ಯಕರ್ತರು ನಾವು, ಸೋಲಿಗೆ ಹೆದರುತ್ತೇವೆಯೇ?: ಸಿ.ಟಿ.ರವಿ
ವಿಧಾನ ಪರಿಷತ್ ಸದಸ್ಯರಾದ ತೇಜಸ್ವಿನಿ ಗೌಡ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಪ್ತಗಿರಿ ಗೌಡ ಮತ್ತಿತರರಿದ್ದರು.