
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಆ.14): ಬಿಬಿಎಂಪಿಯ ಕೊರೋನಾ ಆರೈಕೆ ಕೇಂದ್ರ, ಆ್ಯಂಬುಲೆನ್ಸ್ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಬಹುತೇಕ ವೈದ್ಯಕೀಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಹಿಂದೇಟು ಹಾಕಿದ್ದಾರೆ.
ನಗರದಲ್ಲಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯಕ್ಕೆ ಹೆಚ್ಚುವರಿಯಾಗಿ ಅವಶ್ಯಕವಿರುವ ಎಂಬಿಬಿಎಸ್ ವೈದ್ಯರು, ಆಯುಷ್ ವೈದ್ಯರು, ಡೆಂಟಲ್ ವೈದ್ಯರು, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಜನರಲ್ ಪಿಜಿಷಿಯನ್, ಸ್ಟಾಫ್ ನರ್ಸ್, ಸಹಾಯಕ ಸಿಬ್ಬಂದಿ, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಮೊದಲಾದವರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಈಗಾಗಲೇ ಅವರನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಆದೇಶವನ್ನು ನೀಡಲಾಗಿದೆ. ಆದರೆ, ನೇಮಕಾತಿ ಆದೇಶ ಪಡೆದ ಹಲವರು ಕರ್ತವ್ಯಕ್ಕೆ ಹಾಜರಾಗಿಲ್ಲ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರದ ಕೊರೋನಾ ಆರೈಕೆ ಕೇಂದ್ರಕ್ಕೆ ಒಟ್ಟು ವೈದ್ಯರು ಸ್ಟಾಫ್ ನರ್ಸ್ ಸೇರಿದಂತೆ ಒಟ್ಟು 1,700 ಮಂದಿ ಅವಶ್ಯಕತೆ ಇದ್ದು, 917 ಸಿಬ್ಬಂದಿಗೆ ನೇಮಕಾತಿ ಆದೇಶ ನೀಡಲಾಗಿದೆ. ಆದರೆ, ಈವರೆಗೆ ಕೇವಲ 365 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅದೇ ರೀತಿ ಬಿಬಿಎಂಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 250 ಎಂಬಿಬಿಎಸ್ ಹಾಗೂ ಆಯೂಷ್ ವೈದ್ಯರಿಗೆ, 96 ಮಂದಿ ಸ್ಟಾಫ್ ನರ್ಸ್ ಹಾಗೂ 24 ಲ್ಯಾಬ್ ಟೆಕ್ನಿಷಿಯನ್‌ಗೆ ನೇಮಕಾತಿ ಆದೇಶ ನೀಡಲಾಗಿದ್ದರೂ ಬಹುತೇಕ ಮಂದಿ ಸೇವೆಗೆ ಹಾಜರಾಗಿಲ್ಲ.
ಜೆಡಿಎಸ್ ಶಾಸಕರೊಬ್ಬರ ಕುಟುಂಬಕ್ಕೆ ವಕ್ಕರಿಸಿದ ಕೊರೋನಾ..!
ಆ್ಯಂಬುಲೆನ್ಸ್‌ಗೂ ಸಿಬ್ಬಂದಿ ಕೊರತೆ
ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಮತ್ತು ಆರೈಕೆ ಕೇಂದ್ರಗಳಿಗೆ ಕರೆದೊಯ್ಯಲು 103 ಬಿಎಲ್‌ಎಸ್ ಆ್ಯಂಬುಲೆನ್ಸ್‌ಗಳಿಗೆ ಕರ್ನಾಟಕ ಪ್ಯಾರಾ ಮೆಡಿಕಲ್ ಮಂಡಳಿಯಿಂದ ಅಂಗೀಕೃತ ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿಸ್ಟ್, ಎಎನ್‌ಎಂ, ಕಿರಿಯ ಪುರುಷ ಆರೋಗ್ಯ ಸಹಾಯಕರು ಕೋರ್ಟ್ 100 ಸಿಬ್ಬಂದಿ ನೇಮಕಕ್ಕೆ ಅಧಿಸೂಚನೆ ನೀಡಲಾಗಿತ್ತು. ಆದರೆ, ಈ ಪೈಕಿ ಕೇವಲ 57 ಮಂದಿ ಮಾತ್ರ ನೇಮಕಗೊಂಡಿದ್ದಾರೆ. ಇನ್ನು 43 ಪ್ಯಾರಾಮೆಡಿಕಲ್ ಸಿಬ್ಬಂದಿ ಆ್ಯಂಬುಲೆನ್ಸ್‌ಗಳಿಗೆ ಬೇಕಾಗಿದೆ. ಆದರೆ, ಪ್ಯಾರಾಮೆಡಿಕಲ್ ಸಿಬ್ಬಂದಿ ಆಗಮಿಸುತ್ತಿಲ್ಲ.
ಹೆಚ್ಚುವರಿ ಭತ್ಯೆ ನೀಡಿದ್ರೂ ಪ್ರಯೋಜನವಿಲ್ಲ!
ಕೊರೋನಾ ಆರೋಗ್ಯ ತುರ್ತು ಪರಿಸ್ಥಿತಿ ಇರುವುದರಿಂದ ವೈದ್ಯಕೀಯ ಸಿಬ್ಬಂದಿಗೆ 5 ಸಾವಿರ ರು. ನಿಂದ 20 ಸಾವಿರ ರು. ವರೆಗೆ ವೇತನದ ಜೊತೆಗೆ ಮಾಸಿಕ ಕೋವಿಡ್ ಭತ್ಯೆ ನೀಡುವುದಾಗಿ ಬಿಬಿಎಂಪಿ ಘೋಷಿಸಿದೆ. ಬಿಎಂಪಿ ಕೊರೋನಾ ಆರೈಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಉಚಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಿದೆ ಆದರೂ ವೈದ್ಯಕೀಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಕೊರೋನಾ ಆರೈಕೆ ಕೇಂದ್ರಗಳಿಗೆ ನೇಮಕವಾದ ವೈದ್ಯಕೀಯ ಸಿಬ್ಬಂದಿ ಮನೆಯಿಂದ ದೂರ ಎಂಬ ಕಾರಣಕ್ಕೆ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಮನೆಗೆ ಹತ್ತಿರುವ ಆಸ್ಪತ್ರೆಗೆ ಹಾಗೂ ಆರೈಕೆ ಕೇಂದ್ರಗಳಿಗೆ ನಿಯೋಜಿಸಲಾಗುತ್ತಿದೆ ಎಂದು ಆಡಳಿತ ವಿಭಾಗ ಪಾಲಿಕೆ ವಿಶೇಷ ಆಯುಕ್ತ ಅನ್ಬುಕುಮಾರ್ ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ