ಶೀಘ್ರ ಆರಂಭವಾಗಲಿದ್ಯಾ ಶಾಲೆ..? ಸಚಿವರು ಹೇಳೋದೇನು?

By Suvarna NewsFirst Published Aug 14, 2020, 7:19 AM IST
Highlights

ಕೊರೋನಾದಿಂದ ಮುಚ್ಚಿರುವ ಶಾಲಾ ಕಾಲೇಜುಗಳು ಸದ್ಯ ತೆರೆಯಲಿದೆಯಾ? ಈ ಬಗ್ಗೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮಂಡ್ಯ (ಆ.14) : ಕೊರೋನಾತಂಕದಿಂದಾಗಿ ಮುಚ್ಚಿರುವ ಶಾಲೆಗಳನ್ನು ಸದ್ಯಕ್ಕೆ ತೆರೆಯುವ ಯಾವುದೇ ಆತುರ ತೋರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಮಕ್ಕಳ ಕಲಿಕೆ ಹಾಗೂ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ತಕ್ಷಣವೇ ಶಾಲೆಗಳನ್ನು ಆರಂಭಿಸಬೇಕೆಂಬ ತರಾತುರಿಯಲ್ಲಿ ಶಿಕ್ಷಣ ಇಲಾಖೆ ಇಲ್ಲ, ಮಕ್ಕಳಿಗೆ ಕಲಿಕೆ ಹೇಗೆ ಮುಖ್ಯವೋ ಅವರ ಆರೋಗ್ಯವೂ ಅಷ್ಟೇ ಮುಖ್ಯ. ಇವೆರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ಯೋಜನೆ ರೂಪಿಸಲಾಗುತ್ತಿದೆ. ಅದಕ್ಕಾಗಿ ಶಿಕ್ಷಣ ಇಲಾಖೆಯಿಂದ ಶೀಘ್ರವೇ ಎರಡು ಟೀವಿ ಚಾನಲ್‌ಗಳನ್ನು ಆರಂಭಿಸಲಾಗುವುದು. ತಜ್ಞರಿಂದ ಪಠ್ಯಬೋಧನೆಗೆ ಕ್ರಮ ವಹಿಸುವುದಾಗಿ ತಿಳಿಸಿದರು.

ಸೆಪ್ಟೆಂಬರ್‌ನಿಂದ ಹೈಸ್ಕೂಲ್‌ ಆರಂಭ?...

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ ಕಾರಣಕ್ಕೆ ನನಗೆ ಹಠವಾದಿ ಎಂದು ಬಿರುದು ಕೊಡಲಾಗಿದೆ. ಆದರೆ, ಶಾಲೆಗಳ ಆರಂಭದ ವಿಷಯದಲ್ಲಿ ನಾನು ಹಠ ಮಾಡುವುದಿಲ್ಲ. ಮಕ್ಕಳಿಗೆ ಯಾವ ರೀತಿಯಲ್ಲೂ ತೊಂದರೆಯಾಗದ ರೀತಿ ವಾತಾವರಣ ಸೃಷ್ಟಿಸಿ ಶಾಲೆಗಳ ಆರಂಭಕ್ಕೆ ಕ್ರಮ ವಹಿಸುವ ಭರವಸೆ ನೀಡಿದರು.

ಸ್ವಾತಂತ್ರ್ಯ ದಿನಾಚರಣೆ: ಮಹತ್ವದ ಸುತ್ತೋಲೆ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ...

ಈಗಾಗಲೇ ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಗೆ ಒತ್ತು ನೀಡಲಾಗಿದೆ. ಕಲಿಕೆಯಿಂದ ದೂರ ಉಳಿಯುವ ಮಕ್ಕಳು ಖಿನ್ನತೆಗೆ ಒಳಗಾಗಬಾರದು. ಇನ್ನೆಷ್ಟುದಿನ ಮನೆಯಲ್ಲಿರಲು ಸಾಧ್ಯ. ಈಗಾಗಲೇ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಪುಸ್ತಕಗಳ ವಿತರಣೆಯಾಗಿದೆ. ದೂರದರ್ಶನದಲ್ಲಿ ಸೇತುಬಂಧ ಮೂಲಕವೂ ಬೋಧನೆ ನಡೆಯಲಿದೆ. ಶಿಕ್ಷಣವನ್ನು ನಿಂತ ನೀರಾಗಿಸದೆ ವಿವಿಧ ಯೋಜನೆ, ಕಾರ‍್ಯಕ್ರಮಗಳ ಮೂಲಕ ನಿರಂತರತೆ ಕಾಯ್ದುಕೊಂಡು ಸಮಾಜಕ್ಕೆ ಭರವಸೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ನುಡಿದರು.

click me!